ರಾಜ್ಯ

ಮಹಾರಾಷ್ಟ್ರದಲ್ಲಿ ಭಾರಿ ಮಳೆ: ಕರ್ನಾಟಕದಲ್ಲಿ ಪ್ರವಾಹ, ಕೃಷ್ಣಾನದಿ ಪಾತ್ರದ ಹಲವು ಗ್ರಾಮಗಳು ಜಲಾವೃತ

Srinivasamurthy VN
ಬೆಳಗಾವಿ: ನೆರೆಯ ಮಹಾರಾಷ್ಟ್ರದಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆ ಅಪಾರ ಪ್ರಮಾಣದ ಸಮಸ್ಯೆ ತಂದೊಡ್ಡಿದ್ದು, ಕೇವಲ ಮಹಾರಾಷ್ಟ್ರ ಮಾತ್ರವಲ್ಲದೇ ಇದರ ಪರಿಣಾಮ ಕರ್ನಾಟಕದ ಗಡಿ ಜಿಲ್ಲೆಗಳ ಮೇಲೂ ಆಗಿದೆ.
ಹೌದು.. ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆ ಪರಿಣಾಮ ಕೃಷ್ಣಾನದಿ ಉಕ್ಕಿ ಹರಿಯುತ್ತಿದ್ದು, ಮಹಾರಾಷ್ಟ್ರ ಕೊಯ್ನಾ ಜಲಾಶಯದಿಂದ ಅಪಾರ ಪ್ರಮಾಣದ ನೀರನ್ನು ಹೊರಗೆ ಬಿಡುತ್ತಿದೆ. ಪರಿಣಾಮ ಕೃಷ್ಠಾ ನದಿ ಪಾತ್ರದ ರಾಜ್ಯದ ಜಿಲ್ಲೆಗಳ ನೂರಾರು ಗ್ರಾಮಗಳು ಇದೀಗ ಪ್ರವಾಹ ಭೀತಿ ಎದುರಿಸುತ್ತಿವೆ.  ಅಧಿಕಾರಿಗಳು ನೀಡಿರುವ ಮಾಹಿತಿ ಅನ್ವಯ ಮಹಾರಾಷ್ಟ್ರದ ಜಲಾಶಯಗಳಿಂದ ಅಪಾರ ಪ್ರಮಾಣದಲ್ಲಿ ನೀರು ಬಿಡುತ್ತಿರುವುದರಿಂದ ಕೃಷ್ಣಾ ಸೇರಿದಂತೆ ವಿವಿಧ ನದಿಗಳ ಪಾತ್ರದಲ್ಲಿರುವ ಗ್ರಾಮಗಳಿಗೆ ಪ್ರವಾಹ ಭೀತಿ ಆವರಿಸಿದೆ.
ಚಿಕ್ಕೋಡಿ ಉಪ ವಿಭಾಗದ ಚಿಕ್ಕೋಡಿ, ರಾಯಬಾಗ ಹಾಗೂ ಅಥಣಿ ತಾಲ್ಲೂಕಿನಲ್ಲಿ ಕೃಷ್ಣಾ, ದೂಧ್‌ಗಂಗಾ, ವೇದಗಂಗಾ ಹಾಗೂ ಪಂಚಗಂಗಾ ನದಿಗಳು ಅಪಾಯದ ಮಟ್ಟದ ಮೀರಿ ಹರಿಯುತ್ತಿವೆ. ಈ ನದಿಗಳ ತೀರದಲ್ಲಿರುವ 37 ಗ್ರಾಮಗಳು ಭಾಗಶಃ ಮುಳುಗಡೆಯಾಗುವ ಸಾಧ್ಯತೆ ಇದ್ದು, ಚಿಕ್ಕೋಡಿ ವಿಭಾಗದ 76 ಗ್ರಾಮಗಳ ಜನರಿಗೆ ಎಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ ಮುನ್ಸೂಚನೆ ನೀಡಿದೆ.
SCROLL FOR NEXT