ಬೆಳಗಾವಿ ಮಳೆ( ಸಂಗ್ರಹ ಚಿತ್ರ) 
ರಾಜ್ಯ

ಉಕ್ಕಿ ಹರಿದ ಕೃಷ್ಣೆ, ಬೆಳಗಾವಿ ಶಾಸಕಿ ಮನೆ ಜಲಾವೃತ, ಕಬಿನಿ ಒಳಹರಿವು ಹೆಚ್ಚಳ, ಚಾರ್ಮಾಡಿ ಘಾಟ್ ನಲ್ಲಿ ಮರಗಳು ಧರಾಶಾಹಿ

ಕೃಷ್ಣಾ ನದಿಯಲ್ಲಿ ನೀರು ಮತ್ತಷ್ಟು ಹೆಚ್ಚಾಗಿದ್ದು, ಪ್ರವಾಹ ಭೀತಿ ಎದುರಾಗಿದೆ. ಯಾದಗಿರಿ ಜಿಲ್ಲೆಯ ಬಸವ ಸಾಗರ ಜಲಾಶಯದಿಂದ ಒಟ್ಟು 3 ಲಕ್ಷ 15 ಸಾವಿರ ಕ್ಯೂಸೆಕ್ ...

ಬೆಂಗಳೂರು: ಕೃಷ್ಣಾ ನದಿಯಲ್ಲಿ ನೀರು ಮತ್ತಷ್ಟು ಹೆಚ್ಚಾಗಿದ್ದು, ಪ್ರವಾಹ ಭೀತಿ ಎದುರಾಗಿದೆ. ಯಾದಗಿರಿ ಜಿಲ್ಲೆಯ ಬಸವ ಸಾಗರ ಜಲಾಶಯದಿಂದ ಒಟ್ಟು 3 ಲಕ್ಷ 15 ಸಾವಿರ ಕ್ಯೂಸೆಕ್ ನೀರು ಕೃಷ್ಣಾ ನದಿಗೆ ಹರಿ ಬಿಡಲಾಗಿದೆ.
ಕೃಷ್ಣಾ ನದಿ ತೀರದ ಗ್ರಾಮದಲ್ಲಿ ಪ್ರವಾಹ ಆತಂಕ ಉಂಟಾಗಿದ್ದು, ಸಂಜೆವರೆಗೆ 4ಲಕ್ಷ ಕ್ಯೂಸೆಕ್ ನೀರು ಹರಿ ಬಿಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. 4 ಲಕ್ಷ ಕ್ಯೂಸೆಕ್ ನೀರು ಬಿಟ್ಟರೆ ನೀಲಕಂಠರಾಯನಗಡ್ಡಿ, ಹಳೆ ಬಂಡೋಳಿ ಗ್ರಾಮ ಮುಳುಗುವ ಭೀತಿ ಎದುರಾಗಿದ್ದು, ಈಗಾಗಲೇ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮ ವಹಿಸಿದೆ.‌ ಭಾರಿ ಪ್ರಮಾಣದ ನೀರು ಬಿಟ್ಟಿದ್ದರಿಂದ ಕೃಷ್ಣಾ ನದಿ ತೀರದ ಹತ್ತಕ್ಕೂ ಹೆಚ್ಚು ಗ್ರಾಮದ ಜಮೀನಿಗಳಿಗೆ ನೀರು ನುಗ್ಗಿದೆ. ಶಹಾಪುರ ತಾಲೂಕಿನ ಕೊಳ್ಳೂರು ಸೇತುವೆ ಸಂಪೂರ್ಣ ಮುಳುಗಿದೆ. 
ಮೂರು ದಿನಗಳಿಂದ ರಾಯಚೂರಿನಿಂದ ಯಾದಗಿರಿ ಗೆ ಹೋಗುವ ರಸ್ತೆ ಸಂಪರ್ಕ ಕಡಿತವಾಗಿದ್ದು, ನದಿ ತೀರದ ಗ್ರಾಮಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸರನ್ನು ನಿಯೋಜಿಸಲಾಗಿದೆ.
ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ಮಹಾ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದ್ದು,  ಬಾಳೆಹೊನ್ನೂರಿನಲ್ಲಿ ಭದ್ರಾ ನದಿ ಪ್ರವಾಹಕ್ಕೆ 50 ಎಕರೆ ಅಡಿಕೆ , ಕಾಫಿ ತೋಟ ಮುಳುಗಡೆಯಾಗಿದೆ. ಬಾಳೆಹೊನ್ನೂರಿನಲ್ಲಿ ಎಪಿಎಂಸಿ ಮಾರ್ಕೆಟ್ ಜಲಾವೃತವಾಗಿದ್ದು, ಭದ್ರಾ ನದಿ ಅಬ್ಬರಕ್ಕೆ ಹೆಬ್ಬಾಳೆ ಸೇತುವೆ ಮುಳುಗಡೆಯಾಗಿ, ಹೊರನಾಡು-ಕಳಸ ಸಂಪರ್ಕ ಕಡಿತಗೊಂಡಿದೆ. 
ಬಾಳೆಹೊನ್ನೂರು-ಜಯಪುರ ಸಮೀಪ ಭಾರೀ ಭೂ ಕುಸಿತ ಉಂಟಾಗಿದ್ದು, ಚಾರ್ಮಾಡಿಯಲ್ಲಿ ಮೂರು ಕಡೆ ಗುಡ್ಡ ಕುಸಿತ ಉಂಟಾಗಿ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಕೊಪ್ಪ ತಾಲೂಕಿನ ಹಲವೆಡೆ ರಸ್ತೆ ಸಂಚಾರ ಬಂದ್ ಆಗಿದ್ದು, ಕೊಗ್ರೆ ಗ್ರಾಮದ ದೊಡ್ಡ ಸೇತುವೆ ಮುಳುಗಡೆಯಾಗಿರುವುದರಿಂದ 25 ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.
ಶೃಂಗೇರಿಯಲ್ಲಿ ತುಂಗಾ ನದಿಯಲ್ಲಿ ಪ್ರವಾಹ ಭೀತಿ ಉಂಟಾಗಿದ್ದು, ಕಪ್ಪೆ ಶಂಕರ ನಾರಾಯಣ ದೇವಾಲಯ ಮುಳುಗಿದೆ. ತುಂಗಾ ನದಿ ಪ್ರವಾಹಕ್ಕೆ ಶೃಂಗೇರಿ ಪಟ್ಟಣದ ಹಲವು ಮನೆಗಳು ಮುಳುಗಡೆಯಾಗಿವೆ. ಮೆಸ್ಕಾಂ ನೌಕರನ ಮೇಲೆ ಮರ ಬಿದ್ದು ನೌಕರನಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.  ಮಲೆನಾಡಿನ 115 ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಗ್ರಾಮಸ್ಥರು ತೊಂದರೆಗೊಳಗಾಗಿದ್ದಾರೆ. 
ರಾಯಚೂರಿನಲ್ಲಿಯೂ ಭಾರಿ ಮಳೆಯಾಗುತ್ತಿದ್ದು, ಕೃಷ್ಣಾ ನದಿ ತುಂಬಿ ಹರಿಯುತ್ತಿದೆ. ಪ್ರವಾಹದ ನಡುವೆಯೇ ಕೃಷ್ಣ ನದಿಯಲ್ಲಿ ಯುವಕರ ತಂಡ ಈಜು ಸ್ಪರ್ಧೆಯಲ್ಲಿ ತೊಡಗಿರುವುದು ಕಂಡುಬಂದಿದೆ.
ರಾಯಚೂರು ಲಿಂಗಸಗೂರು ತಾಲೂಕಿನ ಮ್ಯಾದರಗಡ್ಡೆಯಲ್ಲಿ ಸಿಲುಕಿದ್ದ ನಡುಗಡ್ಡೆಯಲ್ಲಿ ಸಿಲುಕಿದ್ದ 8 ಜನರನ್ನು ಎನ್‍ಡಿಆರ್‌ಪಿಎಫ್ ತಂಡ ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಸಂತ್ರಸ್ತರು ಶಾಶ್ವತ ಪರಿಹಾರವನ್ನು ಒದಗಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.
ಜೀವದ ಹಂಗು ತೊರೆದು ತುಂಬಿ ಹರಿಯುವ ನದಿಯಲ್ಲಿ ಈಜಾಡುತ್ತಿದ್ದ ಯುವಕರ ಸ್ಪರ್ಧೆಯನ್ನು ಕೆಲವರು ಮೊಬೈಲ್‍ನಲ್ಲಿ ಚಿತ್ರೀಕರಿಸುತ್ತಿದ್ದ ದೃಶ್ಯ ಕಂಡುಬಂತು. 8-10 ಸಾವಿರ ರೂಪಾಯಿ ಹಾಗೂ ಕುರಿಮರಿಗಾಗಿ ಜೀವದ ಹಂಗು ತೊರೆದು ಯುವಕರು ಈಜುತ್ತಿದ್ದಾರೆ ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ. 
ಕೊಪ್ಪಳ ಜಿಲ್ಲೆಯಲ್ಲಿಯೂ ಭಾರೀ ಮಳೆಯಾಗುತ್ತಿದ್ದು,  ಕಾಲುವೆಗಳಿಗೆ ನೀರು ಹರಿಸುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಇದರಿಂದ ಜಿಲ್ಲೆಯ ರೈತರಲ್ಲಿ ಸಂತಸ ಉಂಟಾಗಿದ್ದು, ಕೃಷಿ ಚಟುವಟಿಕೆ ಬಿರುಸುಗೊಳ್ಳುವ ಸಾಧ್ಯತೆ ಇದೆ.
ಬೆಳಗಾವಿಯಲ್ಲೂ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಖಾನಾಪುರ ಕ್ಷೇತ್ರದ ಶಾಸಕಿ ಅಂಜಲಿ ನಿಂಬಾಳ್ಕರ್ ಅವರ ಮನೆ ಕೂಡ ಜಲಾವೃತವಾಗಿದೆ. ಮಲಪ್ರಭಾ ನದಿಯ ನೀರು ಉಕ್ಕಿ ಹರಿಯುತ್ತಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. 
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ, ಕಾರವಾರದಲ್ಲಿಯೂ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ರಾಷ್ಟ್ರೀಯ ಹೆದ್ದಾರಿ 63ರಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ. ಹಲವು ಮನೆಗಳು ಜಲಾವೃತವಾಗಿದೆ.
ಹಾವೇರಿಯಲ್ಲಿಯೂ ಎರಡು ದಿನಗಳಿಂದ ಬಿಟ್ಟು ಬಿಡದೆ ಮಳೆ ಸುರಿಯುತ್ತಿದ್ದು, ದನದ ಕೊಟ್ಟಿಗೆ ಬಿದ್ದು ಎಮ್ಮೆ ಸಾವನ್ನಪ್ಪಿರುವ ಘಟನೆ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದಲ್ಲಿ ನಡೆದಿದೆ. 
ರಾಜ್ಯದ ಹಲವಡೆ ಅತಿವೃಷ್ಟಿ ಉಂಟಾಗಿದ್ದರೂ ಗಣಿ ಜಿಲ್ಲೆ ಬಳ್ಳಾರಿಯಲ್ಲಿ ಮಾತ್ರ ಇನ್ನು ಮುಂಗಾರು ಪ್ರವೇಶಿಸಿಲ್ಲ. ಅಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಮುಂದುವರಿದಿದೆ.
ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯದ ಒಳಹರಿವು ಹೆಚ್ಚಾಗಿದ್ದು, ಇಂದು ಬೆಳಗ್ಗೆ ನೀರಿನ ಮಟ್ಟ 76.27 ಅಡಿಗಳಷ್ಟಿತ್ತು. ಜಲಾಶಯದ ಗರಿಷ್ಠ ಮಟ್ಟ 84 ಅಡಿಗಳಾಗಿದ್ದು, ಇಂದು ಬೆಳಗ್ಗೆ 11,351 ಕ್ಯೂಸೆಕ್ ಒಳಹರಿವು ಇತ್ತು. ಹೊರಹರಿವು 1,636 ,ಕ್ಯೂಸೆಕ್ಸ್ ಇತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಬಿನಿಯಿಂದ ಕಪಿಲಾನದಿಗೆ 1020 ಕ್ಯೂಸೆಕ್, ಏತ ನೀರಾವರಿಗೆ 116, ನಾಲೆಗಳಿಗೆ 500 ಕ್ಯೂಸೆಕ್ ನೀರು ಹರಿಯಬಿಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕರಾವಳಿ, ಮಲೆನಾಡು ಭಾಗದಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಚಾರ್ಮಾಡಿ ಘಾಟ್ ನಲ್ಲಿ ಮೂರು ಕಡೆ ಗುಡ್ಡ ಕುಸಿತ ಸಂಭವಿಸಿದೆ. ಘಾಟ್ ನ ಏಳನೇ ತಿರುವಿನಲ್ಲಿ ರಸ್ತೆಗೆ ಬೃಹತ್ ಮರ ಉರುಳಿ ಬಿದ್ದು, ಸಂಚಾರಕ್ಕೆ ತೊಡಕಾಗಿದೆ. ಮರ ತೆರವು ಕಾರ್ಯಾಚರಣೆ ಪ್ರಗತಿಯಲ್ಲಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

Tamil Nadu: ನಟ-ರಾಜಕಾರಣಿ ದಳಪತಿ ವಿಜಯ್ ಬೌನ್ಸರ್ ಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ! ಕೇಸ್ ದಾಖಲು, ವಿಡಿಯೋದಲ್ಲಿ ಏನಿದೆ?

Udaipur: ನಿಜಕ್ಕೂ ಅಚ್ಚರಿ, 55ನೇ ವಯಸ್ಸಿನಲ್ಲಿ 17ನೇ ಮಗುವಿಗೆ ತಾಯಿಯಾದ ಮಹಿಳೆ!

SCROLL FOR NEXT