ರಾಜ್ಯ

ಭಾರೀ ಮಳೆ, ಒಳಹರಿವು ಹೆಚ್ಚಳ: ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಬೆಳಗಾವಿ ಜಿಲ್ಲಾಧಿಕಾರಿ ಮನವಿ

Lingaraj Badiger
ಬೆಳಗಾವಿ: ಮಹಾರಾಷ್ಟ್ರದ ಪಶ್ಚಿಮಘಟ್ಟಗಳಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಕೃಷ್ಣಾ ನದಿಯಲ್ಲಿ ಒಳಹರಿವು ಹೆಚ್ಚಾಗಿದೆ. ಕೃಷ್ಣಾ ಮತ್ತು ಘಟಪ್ರಭಾ ನದಿಪಾತ್ರದಲ್ಲಿ ಪ್ರವಾಹ ಭೀತಿ ಎದುರಾಗಿದ್ದು, ನದಿ ದಂಡೆಯ ಗ್ರಾಮಸ್ಥರು ತಕ್ಷಣವೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಮನವಿ ಮಾಡಿದ್ದಾರೆ. 
ಮಹಾರಾಷ್ಟ್ರದ ಜಲಾಶಯದಿಂದ ಕೃಷ್ಣಾ ನದಿಗೆ 3 ಲಕ್ಷ ಕ್ಯೂಸೆಕ್ ನೀರು ಹರಿಬಿಡಲಾಗಿದ್ದು, ಇದು 4 ಲಕ್ಷ ಕ್ಯೂಸೆಕ್ ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಹಿಡಕಲ್ ಜಲಾಶಯ ಕೂಡ ಭರ್ತಿಯಾಗಿದ್ದು, ಒಂದು ಲಕ್ಷ ಕ್ಯೂಸೆಕ್ ಒಳಹರಿವು ಇದ್ದು, ಇದೇ ಪ್ರಮಾಣದಲ್ಲಿ ನೀರನ್ನು ಜಲಾಶಯದಿಂದ ಬಿಡುಗಡೆ ಮಾಡಲಾಗುತ್ತಿದೆ. ಹೀಗಾಗಿ ಕೃಷ್ಣಾ ಮತ್ತು ಘಟಪ್ರಭಾ ನದಿಪಾತ್ರದ ಜನರು ಆದಷ್ಟು ಬೇಗ ಸುರಕ್ಷಿತ ಸ್ಥಳಕ್ಕೆ ತೆರಳಬೇಕು. ಸೇನೆ, ಪೊಲೀಸ್, ಅಗ್ನಿಶಾಮಕ ದಳ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳ ನೇತೃತ್ವದಲ್ಲಿ ಅನೇಕ ತಂಡಗಳು ಜನ ಮತ್ತು ಜಾನುವಾರುಗಳನ್ನು ಸ್ಥಳಾಂತರಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು ಹೇಳಿದ್ದಾರೆ. 
ಜಲಾವೃತಗೊಂಡಿರುವ ಗ್ರಾಮಗಳಲ್ಲಿನ ಜನ ಮತ್ತು ಜಾನುವಾರುಗಳನ್ನು ಸ್ಥಳಾಂತರಿಸುವ ಕೆಲಸ ನಿರಂತರವಾಗಿ ನಡೆದಿದೆ. ಆದಾಗ್ಯೂ ಯಾರಾದರೂ ಅಪಾಯದಲ್ಲಿ ಸಿಲುಕಿದ್ದರೆ ತಕ್ಷಣವೇ ಜಿಲ್ಲಾಧಿಕಾರಿ ಕಾರ್ಯಾಲಯ, ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಹಾಗೂ ವಿವಿಧ ತಾಲ್ಲೂಕು ಕೇಂದ್ರಗಳಲ್ಲಿ ಸ್ಥಾಪಿಸಲಾಗಿರುವ ಸಹಾಯ ವಾಣಿ ಕೇಂದ್ರಗಳಿಗೆ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಕೋರಿದ್ದಾರೆ.
2005-06 ನೇ ಸಾಲಿನಲ್ಲಿ ಎದುರಾಗಿದ್ದ ಪ್ರವಾಹ ಪರಿಸ್ಥಿತಿ ಪುನಾರವರ್ತನೆಯಾಗುವ ಸಾಧ್ಯತೆಗಳಿರುವುದರಿಂದ ನದಿಪಾತ್ರದ ಜನ ಗರಿಷ್ಠಮಟ್ಟದ ಎಚ್ಚರಿಕೆ ವಹಿಸಬೇಕು. ಯಾವುದೇ ಕಾರಣಕ್ಕೂ ಹರಿಯುತ್ತಿರುವ ನೀರಿನಲ್ಲಿ ಈಜಲು ಅಥವಾ ದಾಟಲು ಪ್ರಯತ್ನಿಸಬಾರದು. ಅಪಾಯ ಎದುರಾದ ಸಂದರ್ಭಗಳಲ್ಲಿ ಸಹಾಯವಾಣಿ ಕೇಂದ್ರಕ್ಕೆ ಮಾಹಿತಿ ನೀಡಿದರೆ ಕೂಡಲೇ ರಕ್ಷಣಾ ತಂಡಗಳನ್ನು ಕಳುಹಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಸಹಾಯವಾಣಿ/ನಿಯಂತ್ರಣ ಕೊಠಡಿ ಸಂಖ್ಯೆ:ಜಿಲ್ಲಾಧಿಕಾರಿ ಕಚೇರಿ- 0831-2407290; ಪೊಲೀಸ್ ವರಿಷ್ಠಾಧಿಕಾರಿ ಕಚೇರಿ-0831-2405231; ಚಿಕ್ಕೋಡಿ-08338-272228; ರಾಯಬಾಗ: 08331-225482; ಅಥಣಿ: 08289-251146
SCROLL FOR NEXT