ಬೆಂಗಳೂರು: ಸ್ವಾತಂತ್ರ್ಯೋತ್ಸವದ ಅಂಗವಾಗಿ ಪ್ರತಿವರ್ಷದಂತೆ ಈ ಬಾರಿಯೂ ಬೆಂಗಳೂರಿನ ಸಸ್ಯಕಾಶಿ ಲಾಲ್ ಬಾಗ್ ನಲ್ಲಿ ಇದೇ ತಿಂಗಳ 9 ರಿಂದ ಆಗಸ್ಟ್ 18 ರವರೆಗೆ ನಡೆಯಲಿರುವ 210ನೇ ಫಲಪುಷ್ಪ ಪ್ರದರ್ಶನ ಹಲವು ವಿಶೇಷತೆಗಳಿಂದ ಕೂಡಿದೆ.
ಇಂದು ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ತೋಟಗಾರಿಕೆ ಇಲಾಖೆ ನಿರ್ದೇಶಕ ಡಾ. ಎಂ. ವಿ. ವೆಂಕಟೇಶ್, ಈ ಬಾರಿ ಜಯಚಾಮರಾಜ ಒಡೆಯರ್ ಅವರ ಸಾಧನೆಗಳು, ಕೊಡುಗೆಗಳನ್ನು ಜನರಿಗೆ ಪರಿಚಯಿಸಲಾಗುತ್ತಿದೆ. ಫಲಪುಷ್ಪ ಪ್ರದರ್ಶನದಲ್ಲಿ ಮೈಸೂರು ರಾಜ ಮನೆತನದ ಕೊನೆಯ ಮಹಾರಾಜರಾದ ಜಯ ಚಾಮರಾಜ ಒಡೆಯರ್ ಅವರ ಶ್ವೇತ ವರ್ಣದ ಎದೆ ಎತ್ತರದ ಪುತ್ಥಳಿ ವಿಶೇಷ ಆಕರ್ಷಣೆಯಾಗಿದೆ ಎಂದರು.
ಜಯ ಚಾಮರಾಜ ಒಡೆಯರ್ ಅವರ ಜನ್ಮ ಶತಮಾನೋತ್ಸವದ ನೆನಪಿನಲ್ಲಿ ಮೈಸೂರಿನಲ್ಲಿ ಜಯಚಾಮರಾಜ ವೃತ್ತದಲ್ಲಿರುವ ಮಂಟಪದ ಮಾದರಿಯಲ್ಲಿ ಯಥಾವತ್ ಪುಷ್ಪ ಮಂಟಪ ಅನಾವರಣಗೊಳ್ಳಲಿದೆ. ಪ್ರದರ್ಶನಕ್ಕೆ ರಾಜಮಾತೆ ಪ್ರಮೋದ ದೇವಿ, ಯುವರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಆಹ್ವಾನ ನೀಡಲಾಗುವುದು ಎಂದರು.
ಒಡೆಯರ್ ಅವರ ಪುಷ್ಪಮಂಟಪ ನಿರ್ಮಾಣಕ್ಕಾಗಿ 1.5 ಲಕ್ಷ ಕೆಂಪು ಗುಲಾಬಿ, 50 ಸಾವಿರ ಬಿಳಿ ಗುಲಾಬಿ, 50 ಸಾವಿರ ಕಿತ್ತಳೆ ವರ್ಣದ ಗುಲಾಬಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದಲ್ಲದೇ 4 ಅಡಿ ಅಗಲ 3 ಅಡಿ ಎತ್ತರದ ಮೈಸೂರು ಸಿಂಹಾಸನ ಪ್ರದರ್ಶನ ಇನ್ನೊಂದು ವೈಶಿಷ್ಟ್ಯವಾಗಿದೆ ಎಂದರು.
ಫಲಪುಷ್ಪ ಪ್ರದರ್ಶನಕ್ಕೆ ವಯಸ್ಕರಿಗೆ 70 ರೂ. ಶುಲ್ಕ, 12 ವರ್ಷದೊಳಗಿನ ಮಕ್ಕಳಿಗೆ 20 ರೂ. ಶುಲ್ಕ, ಆಗಸ್ಟ್ 9, 13, 14, 16 ಮತ್ತು 17 ರಂದು ಸರ್ಕಾರಿ ಮತ್ತು ಖಾಸಗಿ ಶಾಲಾ ಮಕ್ಕಳಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ.