ರಾಜ್ಯ

ಬೆಂಗಳೂರು: ನಾಪತ್ತೆಯಾಗಿದ್ದ ಪ್ರಸಿದ್ಧ ಕಾನೂನು ತಜ್ಞ ಶಮ್ನಾಡ್​ ಬಶೀರ್ ಮೃತ ದೇಹ ಚಿಕ್ಕಮಗಳೂರಿನಲ್ಲಿ ಪತ್ತೆ

Shilpa D

ಬೆಂಗಳೂರು/ಚಿಕ್ಕಮಗಳೂರು: ಕಾನೂನು ತಜ್ಞ, ಐಡಿಐಎ ( ಇಂಕ್ರೀಸಿಂಗ್​ ಡೈವರ್ಸಿಟಿ ಬೈ ಇಂಕ್ರೀಸಿಂಗ್​ ಆಕ್ಸೆಸ್​ ಟು ಲೀಗಲ್​ ಎಜುಕೇಶನ್​) ಸಂಸ್ಥಾಪಕ ಪ್ರೊಫೆಸರ್​ ಶಮ್ನಾಡ್​ ಬಶೀರ್​ ಅವರ ಮೃತದೇಹ ಚಿಕ್ಕಮಗಳೂರಿನ ಬಾಬಾಬುಡನ್​ಗಿರಿ ಗುಡ್ಡದ ಬಳಿ ಕಾರಿನಲ್ಲಿ ಪತ್ತೆಯಾಗಿದೆ.

43 ವರ್ಷಜದ ಬಶೀರ್ ಬೌದ್ಧಿಕ ಆಸ್ತಿ ಹಕ್ಕುಗಳ ತಜ್ಞರಾಗಿದ್ದರು, ಬಡ ವಿದ್ಯಾರ್ಥಿಗಳಿಗೆ ಕಾನೂನು ಶಿಕ್ಷಣ ನೀಡುವ ದೃಷ್ಟಿಯಿಂದ ಲಾಭರಹಿತವಾದ ಸ್ವಯಂಸೇವಾ ಸಂಸ್ಥೆ (ಎನ್​ಜಿಒ) ಐಡಿಐಎ ಸ್ಥಾಪಿಸಿದ್ದರು. ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದ ಇವರ ಮೃತದೇಹ ಗುರುವಾರ ಬಾಬಾಬುಡನ್​ಗಿರಿ ಬಳಿ ಪತ್ತೆಯಾಗಿದೆ.

ಕಾರಿನೊಳಗೆಯೇ ಉಸಿರುಗಟ್ಟಿ ಶಮ್ನಾಡ್ ಬಶೀರ್ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಐದು ದಿನಗಳ ಹಿಂದೆ ಶಮ್ನಾಡ್ ಅವರು ದತ್ತಾತ್ರೇಯ ಪೀಠದ ಬಳಿ ಬಂದಿದ್ದಾರೆ. ನಂತರ ಅವರು ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಆಗಸ್ಟ್ 3 ರಂದು ಅವರ ಸಹೋದರರು ದೂರು ದಾಖಲಿಸಿದ್ದರು.

ಬಶೀರ್​ ಅವರ ಮೃತದೇಹವನ್ನು ಪೋಸ್ಟ್​ಮಾರ್ಟಂಗೆ ಕಳಿಸಲಾಗಿದ್ದು ವರದಿ ಬಂದ ಬಳಿಕವಷ್ಟೇ ಸಾವಿನ ನಿರ್ದಿಷ್ಟ ಕಾರಣ ತಿಳಿಯಲಿದೆ. ಬಶೀರ್​ ದೇಹ ಕಾರಿನೊಳಗೆ ಸಿಕ್ಕಿದೆ. ಆ ಕಾರು ಒಳಗಿನಿಂದ ಲಾಕ್​ ಆಗಿತ್ತು. ಕೀ ಇಗ್ನೀಷನ್​ನಲ್ಲಿ ಇತ್ತು. ಜತೆಗೆ ಬಶೀರ್ ಯಾವುದಾದರೂ ಔಷಧ ಸೇವಿಸಿದ್ದರೋ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

ಬಶೀರ್​ ಆಗಾಗ ಬೆಂಗಳೂರಿನಿಂದ ಒಬ್ಬರೇ ಕಾರು ಚಾಲನೆ ಮಾಡಿಕೊಂಡು ಚಿಕ್ಕಮಗಳೂರಿಗೆ ತೆರಳುತ್ತಿದ್ದರು ಎಂದು ಕೂಡ ಪೊಲೀಸರು ಮಾಹಿತಿ ನೀಡಿದ್ದಾರೆ.  ಕಾರು ರಸ್ತೆಗಿಂತ ಸ್ವಲ್ಪ ದೂರದ ಸುರಕ್ಷಿತವಾದ ಜಾಗದಲ್ಲಿ ಪಾರ್ಕ್​ ಆಗಿದೆ. ಬುಧವಾರ ಕೂಡ ಈ ಪ್ರದೇಶದಲ್ಲಿ ಕೆಲವರು ಹುಡುಕಾಟ ನಡೆಸಿದ್ದಾರೆ. ಆದರೆ, ಅಲ್ಲಿ ನಿರ್ಮಾಣವಾದ ದಟ್ಟ ಮಂಜು ಮುಸುಕಿದ ವಾತಾವರಣದಿಂದಾಗಿ ಕಾರು ಕಾಣಲಿಲ್ಲ. ಇಂಜಿನ್​ ಮತ್ತು ಹೀಟರ್​ ಸ್ವಿಚ್​ಗಳು ಆನ್​ ಆದ ಸ್ಥಿತಿಯಲ್ಲಿಯೇ ಕಾರು ನಿಂತಿತ್ತು. ಇದು 
ಆತ್ಮಹತ್ಯೆಯೂ ಆಗಿರಬಹುದು ಅಥವಾ ಆಕಸ್ಮಿಕ ಸಾವೂ ಆಗಿರಬಹುದು ಎಂದು ಕೂಡ ಪೊಲೀಸರು ತಿಳಿಸಿದ್ದಾರೆ.  2014ರಲ್ಲಿ ಬಶೀರ್ ಅವರಿಗೆ ಮಾನವೀಯ ಸೇವೆಗಾಗಿ ಇನ್ಫೋಸಿಸ್ ಸೈನ್ಸ್ ಫೌಂಡೇಷನ್ ಪ್ರಶಸ್ತಿ ಲಭಿಸಿತ್ತು. ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

SCROLL FOR NEXT