ರಾಜ್ಯ

ಅಲ್ಪ ಬಿಡುವಿನ ಬಳಿಕ ಮತ್ತೆ ಅಬ್ಬರಿಸಿದ ಮಳೆರಾಯ, ಕರ್ನಾಟಕದ ಹಲವೆಡೆ ರೆಡ್ ಅಲರ್ಟ್ ಘೋಷಣೆ

Srinivasamurthy VN

ಬೆಂಗಳೂರು: ಉತ್ತರ ಕರ್ನಾಟಕದಲ್ಲಿ ಅಬ್ಬರಿಸಿದ್ದ ಮಳೆರಾಯ ಅಲ್ಪ ಬಿಡುವಿನ ಬಳಿಕ ಮತ್ತೆ ರಾಜ್ಯಾದ್ಯಂತ ಅಬ್ಬರಿಸುತ್ತಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.

ಈ ಕುರಿತಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು, ಮಧ್ಯ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕದಲ್ಲಿ ಭಾರಿ ಮಳೆಯಾಗುವ ಕುರಿತು ಮಾಹಿತಿ ನೀಡಿದೆ. ಕೊಡಗು, ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭಾರಿ ಮಳೆ ಮುಂದುವರೆದಿದ್ದು, ಭೂಕುಸಿತ ಸಾಮಾನ್ಯವಾಗಿ ಬಿಟ್ಟಿದೆ. ಅಲ್ಲದೆ ಈ ಜಿಲ್ಲೆಗಳಲ್ಲಿ ಮುಂಬರುವ 24 ಗಂಟೆಗಳಲ್ಲಿ ಮತ್ತೆ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ.

ಈ ಕುರಿತಂತೆ ಹೇಳಿಕೆ ಬಿಡುಗಡೆ ಮಾಡಿರುವ ಹವಾಮಾನ ಇಲಾಖೆ, 'ಮುಂದಿನ ಎರಡು ದಿನಗಳು ಪಶ್ಚಿಮ ಕರಾವಳಿಯ ಕೊಡಗು, ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಬಿರುಸಾದ ಗಾಳಿಯೊಂದಿಗೆ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಉಳಿದಂತೆ ರಾಜ್ಯದ ಇತರ ಪ್ರದೇಶಗಳಲ್ಲಿ ಮಳೆ ಕಡಿಮೆಯಾಗಲಿದೆ ಎಂದು ಹೇಳಿದೆ.

'ಕೆಲವೆಡೆ ಮಳೆ ಕಡಿಮೆಯಾಗಿದ್ದು, ನೀರಿನ ಮಟ್ಟ ಕಡಿಮೆಯಾಗುತ್ತಿದ್ದಂತೆ, ರಕ್ಷಣಾ ಮತ್ತು ಪರಿಹಾರ ಕಾರ್ಯಗಳು ಭರದಿಂದ ಸಾಗಿದೆ. ಜಲಾಶಯಗಳ ಒಳಹರಿವು ಕ್ರಮೇಣ ಕಡಿಮೆಯಾಗುತ್ತಿದ್ದು, ಪ್ರವಾಹ ಪರಿಸ್ಥಿತಿ ಸುಧಾರಿಸಿದೆ" ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ ಪ್ರಕಟಣೆ ತಿಳಿಸಿದೆ.

ಇನ್ನು ಕೊಡಗಿನ ಹಲವೆಡೆ ಪ್ರವಾಹ, ಭೂಕುಸಿತ ಮತ್ತು ರಸ್ತೆಗಳಿಗೆ ಹಾನಿಯಾದ ಕಾರಣ ಶನಿವಾರದವರೆಗೆ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಅಂತೆಯೇ ಮಳೆ ಮತ್ತು ಪ್ರವಾಹದಿಂದಾಗಿ ರಾಜ್ಯದಲ್ಲಿ ಮೃತಪಟ್ಟವರ ಸಂಖ್ಯೆ 61ಕ್ಕೆ ಏರಿಕೆಯಾಗಿದ್ದು, 50ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ. ರಾಜ್ಯಾದ್ಯಂತ ಪೀಡಿತ 22 ಜಿಲ್ಲೆಗಳಲ್ಲಿ ಸುಮಾರು 7 ಲಕ್ಷ ಜನರನ್ನು ಸ್ಥಳಾಂತರಿಸಲಾಗಿದ್ದು, 51,460 ಪ್ರಾಣಿಗಳನ್ನು ರಕ್ಷಿಸಲಾಗಿದೆ. ಪ್ರಾಥಮಿಕ ಮೌಲ್ಯಮಾಪನದ ಪ್ರಕಾರ, 4.69 ಹೆಕ್ಟೇರ್ ಭೂಮಿಯಯಲ್ಲಿನ  ಕೃಷಿ ಮತ್ತು ತೋಟಗಾರಿಕೆ ಬೆಳೆ ನಷ್ಟವಾಗಿದೆ ಎಂದು ಅಂದಾಜಿಸಲಾಗಿದ್ದು, 58,620 ಮನೆಗಳಿಗೆ ಹಾನಿಯಾಗಿದೆ.

ಹೊನ್ನಾವರದಲ್ಲಿ 75 ಮಿ,ಮೀ ಮಳೆ
ಇನ್ನು ಹವಾಮಾನ ಇಲಾಖೆ ನೀಡಿರುವ ಮಾಹಿತಿಯಂತೆ ಕರ್ನಾಟಕದ ಹೊನ್ನಾವರದಲ್ಲಿ 75 ಮಿಲಿ ಮೀಟರ್ ಮಳೆಯಾಗಿದ್ದು, ಜಬಲ್ ಪುರದಲ್ಲಿ ಗರಿಷ್ಠ 98 ಮಿಮಿ ಮಳೆಯಾಗಿದೆ. ಅಂತೆಯೇ ಸತ್ನಾದಲ್ಲಿ 96 ಮಿಮೀ, ಸಾಗರದಲ್ಲಿ 79 ಮಿಮೀ, ಗುನಾದಲ್ಲಿ 98, ಕೋಟಾದಲ್ಲಿ 117, ಗೋವಾದಲ್ಲಿ 79 ಮಿಮೀ ಮಳೆಯಾಗಿದೆ ಎಂದು ಮಾಹಿತಿ ನೀಡಿದೆ.

SCROLL FOR NEXT