ರಾಜ್ಯ

ಪ್ರವಾಹ ಸಂತ್ರಸ್ತರ ಪರಿಹಾರಕ್ಕೆ ಕೇಂದ್ರದಿಂದ ಹೆಚ್ಚಿನ ಪರಿಹಾರ ಕೇಳಲು ಯತ್ನಿಸಲಾಗುತ್ತಿದೆ: ಸಿಎಂ ಯಡಿಯೂರಪ್ಪ 

Sumana Upadhyaya

ಬೆಂಗಳೂರು: ಇತ್ತೀಚಿನ ಅತಿವೃಷ್ಟಿಯಿಂದ ರಾಜ್ಯದಲ್ಲಿ ಹಾನಿ ಸಂಭವಿಸಿದೆ. 61 ಜನ ಪ್ರಾಣ ಕಳೆದುಕೊಂಡಿದ್ದಾರೆ. ಇದನ್ನು ಎದುರಿಸಲು ಸರಕಾರ ಎಲ್ಲ ಪ್ರಯತ್ನ ನಡೆಸಿದೆ. ಸಂತ್ರಸ್ತರಿಗೆ ಅಗತ್ಯ ಪರಿಹಾರ ಒದಗಿಸಲಾಗಿದೆ. ಪರಿಹಾರ ಕಾರ್ಯ ಭರದಿಂದ ಸಾಗಿದೆ. ಎಲ್ಲರೂ ಸೇರಿ ಸಂತ್ರಸ್ತರ ನೆರವಿಗೆ ಬರಬೇಕಿದೆ. ಕೇಂದ್ರದಿಂದ ಹೆಚ್ಚಿನ ಪರಿಹಾರ ಕೇಳಲು ಯತ್ನಿಸಲಾಗುತ್ತಿದೆ, ಇದಕ್ಕೆ ಕೇಂದ್ರ ಸರ್ಕಾರ ಸ್ಪಂದಿಸುವ ಆಶಯ ಇದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ. 


ಬೆಂಗಳೂರಿನ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ನಗರ ಜಿಲ್ಲಾಡಳಿತ ಹಾಗೂ ಬಿಬಿಎಂಪಿ ಜಂಟಿಯಾಗಿ ಆಯೋಜಿಸಿದ 73ನೇ ಸ್ವಾತಂತ್ರೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. 


ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳ ತಂಡ ತಮಗೆ ವಹಿಸಿರುವ ಜಿಲ್ಲೆಗಳಲ್ಲಿ ರಕ್ಷಣೆ ಹಾಗೂ ಪರಿಹಾರ ಕ್ರಮಗಳ ಉಸ್ತುವಾರಿ ವಹಿಸಿದ್ದಾರೆ. ಕರ್ನಾಟಕವು ಮುಂಚೂಣಿ ರಾಜ್ಯವಾಗಿದ್ದು, ಭಾರತದ ಅಭಿವೃದ್ಧಿ ಯಲ್ಲಿ ಶಿಖರ ಪ್ರಾಯವಾಗಿದೆ. ಬೆಂಗಳೂರನ್ನು ಕ್ಯಾಲಿಫೋರ್ನಿಯಾ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಸರ್ಕಾರ ಕ್ರಮ ಕೈಗೊಂಡಿದೆ. ಜನ ಹಿತಕ್ಕಾಗಿ ನಮ್ಮ ಸರಕಾರ ಬದ್ಧ ಎಂದು ಹೇಳಿದರು.


ರೈತರ ಅಭಿವೃದ್ಧಿಗೆ ರಾಜ್ಯ ಸರಕಾರ ಬದ್ಧ ಎಂದು ಮುಖ್ಯಮಂತ್ರಿ ಪುನರುಚ್ಛರಿಸಿದರು. ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ 370 ರದ್ದಾಗಿದ್ದನ್ನು ಸ್ವಾಗತಿಸಿದ ಸಿಎಂ, ಕಾಶ್ಮೀರ ವಿಷಯದಲ್ಲಿ ಕೇಂದ್ರ ಸರಕಾರ ದಿಟ್ಟ ನಿರ್ಧಾರ ಕೈಗೊಂಡಿದೆ ಎಂದು ಶ್ಲಾಘಿಸಿದರು. 


ಹಾಲಿ ಕೈಗಾರಿಕಾ ನೀತಿ ಮುಂದಿನ ಸೆಪ್ಟೆಂಬರ್ ಗೆ ಕೊನೆಗೊಳ್ಳಲಿದ್ದು, 2-3ನೇ ಹಂತದ ನಗರಗಳಲ್ಲಿ ಉದ್ದಿಮೆ ಬೆಳವಣಿಗೆ ಹಿನ್ನೆಲೆಯಲ್ಲಿ ಹೊಸ ಕೈಗಾರಿಕಾ ನೀತಿಯನ್ನು ರೂಪಿಸಲಾಗುವುದು ಎಂದು ತಿಳಿಸಿದರು. 


ಎಸ್ಸಿ-ಎಸ್ಟಿ, ಅಹಿಂದ ಸಮುದಾಯಗಳ ಸಮಗ್ರ ಅಭಿವೃದ್ಧಿಗೆ ಸರ್ಕಾರ ಪ್ರಾಮುಖ್ಯತೆ ನೀಡಲಿದೆ. ಸರ್ಕಾರಿ ಶಾಲೆಗಳ ಸುಧಾರಣೆ ಹಾಗೂ ಗುಣಮಟ್ಟ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. 


'ಕಾಯಕವೇ ಕೈಲಾಸ ಎಂಬ ನುಡಿಯಂತೆ ನಡೆದು ನನಗೆ ದೊರೆತ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಸಮೃದ್ಧ ಕರ್ನಾಟಕ ನಿರ್ಮಿಸುವ ಕನಸು ನನ್ನದು. ಪ್ರತಿಯೊಬ್ಬ ಕನ್ನಡಿಗ ನೆಮ್ಮದಿ, ಸ್ವಾಭಿಮಾನದಿಂದ ಬದುಕುವಂತಾಗಬೇಕು' ಎನ್ನುವುದು ನನ್ನ ಆಶಯ ಎಂದು ಹೇಳಿದರು. 


'ಸಾಧನೆಯೇ ಮಾತಾಗಬೇಕೇ ಹೊರತು, ಮಾತುಗಳೇ ಸಾಧನೆಯಾಗಬಾರದು. ಕರ್ನಾಟಕದ ಅಭಿವೃದ್ಧಿಯ ಮೂಲಕ ದೇಶದ ಬೆಳವಣಿಗೆಗೆ ನಮ್ಮ ಕಿರು ಕಾಣಿಕೆ ನೀಡೋಣ' ಎಂದರು. 


ಧ್ವಜಾರೋಹಣ ನೆರವೇರಿದ ನಂತರ ಸೇನಾ ಹೆಲಿಕಾಪ್ಟರ್‌ನಿಂದ ಗುಲಾಬಿ ಪಕಳೆಗಳನ್ನು ತ್ರಿವರ್ಣ ಧ್ವಜದ ಮೇಲೆ ಸುರಿಸಲಾಯಿತು. ಸಿಎಂ ತೆರದ ಜೀಪ್ ನಲ್ಲಿ ಮೈದಾನದಲ್ಲಿ ಒಂದು ಸುತ್ತು ಹಾಕಿ ಪೊಲೀಸ್ ಪಡೆಗಳಿಂದ ವಂದನೆ ಸ್ವೀಕರಿಸಿದರು. 


ರಾಷ್ಟ್ರಗೀತೆ, ನಾಡಗೀತೆ ಹಾಗೂ ರೈತಗೀತೆಯನ್ನು ಹಾಡಲಾಯಿತು. ನಗರದ ನಾನಾ ಶಾಲೆಗಳಿಗೆ ಸೇರಿದ 2 ಸಾವಿರ ಮಕ್ಕಳಿಂದ ದೇಶಭಕ್ತಿ ಉದ್ದೀಪಿಸುವ ಕಾರ್ಯಕ್ರಮ ನಡೆಯಿತು. 


ದೇಶದ ಸ್ವಾತಂತ್ರ್ಯ ಹೋರಾಟದ ವೇಳೆ ಘಟಿಸಿದ್ದ ಜಲಿಯನ್ ವಾಲಾಭಾಗ ಹತ್ಯಾಕಾಂಡ ಪ್ರಕರಣದ ಕುರಿತು ಚಿಣ್ಣರು ಮನೋಜ್ಞ ಪ್ರದರ್ಶನ ನೀಡಿ ಸಭಿಕರ ಭಾರಿ ಚಪ್ಪಾಳೆ ಗಿಟ್ಟಿಸಿದರು. 


ಕಾರ್ಯಕ್ರಮದಲ್ಲಿ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ರಾಜು, ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ನಗರ ಜಿಲ್ಲಾಧಿಕಾರಿ ಹಾಗೂ ಸರಕಾರದ ಹಿರಿಯ ಅಧಿಕಾರಿಗಳು, ಸ್ವಾತಂತ್ರ್ಯ ಹೋರಾಟಗಾರರು ಮತ್ತು ಸಾರ್ವಜನಿಕರು ಪಾಲ್ಗೊಂಡಿದ್ದಾರೆ. 

SCROLL FOR NEXT