ರಾಜ್ಯ

ಈ ಬಾರಿ ಬಿಜೆಪಿ ಅಭ್ಯರ್ಥಿಯೇ ಬಿಬಿಎಂಪಿ ಮೇಯರ್?: ಮುನಿರತ್ನ ಸುಳಿವು

Lingaraj Badiger

ಬೆಂಗಳೂರು: ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಆಡಳಿತವಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಈಗ ಬಿಜೆಪಿ ಅಧಿಕಾರಕ್ಕೆ ಬರಲು ವೇದಿಕೆ ಸಿದ್ಧವಾಗುತ್ತಿದೆ ಎಂಬ ಸುಳಿವನ್ನು ರಾಜರಾಜೇಶ್ವರಿನಗರ ಅನರ್ಹ ಶಾಸಕ ಮುನಿರತ್ನ ನೀಡಿದ್ದಾರೆ.

ಸೆಪ್ಟೆಂಬರ್ 28ಕ್ಕೆ ಈಗಿನ ಬಿಬಿಎಂಪಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಅಧಿಕಾರವಧಿ ಮುಗಿಯಲಿದ್ದು, ಮುಂದಿನ ಅವಧಿಗೆ ಮೇಯರ್ ಯಾರು ಎಂಬ ಬಗ್ಗೆ ಈಗಾಗಲೇ ಮೂರು ಪಕ್ಷಗಳಲ್ಲಿಯೂ ವ್ಯಾಪಕ ಸಿದ್ಧತೆ ಆರಂಭವಾಗಿದೆ.

ಈ ಬಾರಿ ಕಾಂಗ್ರೆಸ್ ಜೆಡಿಎಸ್ ಗಿಂತ ಬಿಜೆಪಿಯಲ್ಲಿಯೇ ಅಧಿಕಾರ ಹಿಡಿಯುವ ಹುರುಪು ಹೆಚ್ಚಾಗಿದೆ. ಇದರ ಸೂತ್ರಧಾರನಾಗಿ ಶಾಸಕ ಆರ್.ಅಶೋಕ್ ಕಾರ್ಯನಿರ್ವಹಿಸುತ್ತಿದ್ದಾರೆ. 

ಈ ಹಿಂದೆ ಬಿಬಿಎಂಪಿಯಲ್ಲಿ ಅಧಿಕಾರ ಹಿಡಿಯಲು ನಿರ್ಣಾಯಕ ಪಾತ್ರ ವಹಿಸಿದ್ದ ಮಾಜಿ ಸಚಿವ ರಾಮಲಿಂಗಾರೆಡ್ಡಿ ಈ ಬಾರಿ ತಟಸ್ಥವಾಗಿ ಉಳಿಯುವ ಸಾಧ್ಯತೆಗಳಿವೆ. 

ಈಗಾಗಲೇ ಬಿಜೆಪಿ ಸರ್ಕಾರ ಬಿಬಿಎಂಪಿ ಬಜೆಟ್ ಗೆ ತಡೆ ನೀಡಿದ್ದು, ಬೆಂಗಳೂರಿನಲ್ಲಿ ಹಿಂದಿನ ಸರ್ಕಾರದಲ್ಲಿ ನಡೆದಿರುವ ರಸ್ತೆ ವೈಟ್ ಟ್ಯಾಪಿಂಗ್ ನ ಮೂರನೇ ಪ್ಯಾಕೇಜ್ ಕಾಮಗಾರಿಯನ್ನು ತನಿಖೆಗೆ ಒಪ್ಪಿಸಲಾಗಿದೆ. 

ಸದ್ಯ ಬಜೆಟ್ ಗೆ ತಡೆ ನೀಡಿ ತಮ್ಮದೇ ಆಡಳಿತದಲ್ಲಿ ಮತ್ತೊಮ್ಮೆ ಬಜೆಟ್ ಮಂಡಿಸುವ ಚಿಂತನೆ ಬಿಜೆಪಿಯದ್ದಾಗಿದೆ. ಹೀಗಾಗಿ ಬಿಜೆಪಿ ಮೇಯರ್ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿಯ ಹುಡುಕಾಟ ನಡೆಸುತ್ತಿದೆ.

ಈ ಮಧ್ಯೆ ಬಿಜೆಪಿಯ ಅಭ್ಯರ್ಥಿಯೇ ಈ ಬಾರಿ ಬಿಬಿಎಂಪಿ ಮೇಯರ್ ಆಗಲಿದ್ದಾರೆ ಎಂಬ ಸುಳಿವನ್ನು ಮುನಿರತ್ನ ನೀಡಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಬಿಎಂಪಿಯಲ್ಲಿ ಸಂಖ್ಯಾಬಲ ಇರುವವರೇ ಮೇಯರ್ ಆಗುತ್ತಾರೆ. ನಾಲ್ಕು ವರ್ಷದ ಹಿಂದೆಯೇ ಬಿಜೆಪಿಯವರೇ ಮೇಯರ್ ಆಗಬೇಕಿತ್ತು. ಇದಕ್ಕಾಗಿ ಆಪರೇಷನ್ ಕಮಲವೂ ನಡೆದಿತ್ತು ಎಂದರು.

ಆಪರೇಷನ್ ಕಮಲಕ್ಕೆ ಸಹಕರಿಸಿ ಶಾಸಕ ಸ್ಥಾನದಿಂದ ಗೋಪಾಲಯ್ಯ ಅನರ್ಹರಾಗಿದ್ದಾರೆ. ಗೋಪಾಲಯ್ಯ ಪತ್ನಿ ಹೇಮಲತಾ ಸದ್ಯ ಬಿಬಿಎಂಪಿ ಆರ್ಥಿಕಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದು, ಅವರನ್ನೇ ಮೇಯರ್ ಮಾಡಬೇಕೆಂಬ ಒತ್ತಡವು ಅನರ್ಹ ಶಾಸಕರಿಂದ ಇದೆ. ಜೆಡಿಎಸ್‍ನ ಹಲವು ಬಿಬಿಎಂಪಿ ಸದಸ್ಯರು ಬಿಜೆಪಿ ಸೇರುವ ಬಗ್ಗೆಯೂ ತೆರೆಮರೆ ಕಸರತ್ತು ನಡೆಸುತ್ತಿದ್ದಾರೆ.

SCROLL FOR NEXT