ರಾಜ್ಯ

ಬೆಂಗಳೂರು: ದರೋಡೆಗೆ ಯತ್ನಿಸಿದ ದುಷ್ಕರ್ಮಿಗಳ ಹೆದರಿಸಿ ಓಡಿಸಿದ ದಂಪತಿಗೆ ಕಮೀಷನರ್ ಶ್ಲಾಘನೆ

Shilpa D

ಬೆಂಗಳೂರು: ಹಾಡು ಹಗಲೇ ವೈಯಾಲಿಕಾವಲ್ ನ ಆಭರಣ ಮಳಿಗೆಯೊಂದರಲ್ಲಿ ದರೋಡೆ ನಡೆಸಲು ಯತ್ನಿಸಿದ್ದ ದುಷ್ಕರ್ಮಿಗಳನ್ನು ಆಭರಣ ಅಂಗಡಿಯ ಮಾಲೀಕ ದಂಪತಿ ಹೆದರಿಸಿ, ಪರಾರಿಯಾಗುವಂತೆ ಮಾಡುವ ಮೂಲಕ ಸಾಹಸ ಮೆರೆದಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಆಯುಕ್ತರು, ವೈಯಾಲಿಕಾವಲ್ ನ ಸಾಮ್ರಾಟ್‌ ಆಭರಣ ಮಳಿಗೆಯ ಮಾಲೀಕ ಆಶಿಶ್ ಹಾಗೂ ಅವರ ಪತ್ನಿ ರಾಖಿ ಮಳಿಗೆಯಲ್ಲಿದ್ದಾಗ ಬುಧವಾರ ಮಧ್ಯಾಹ್ನ 2.30ಕ್ಕೆ ಮೂವರು ದುಷ್ಕರ್ಮಿಗಳು ಅಂಗಡಿಗೆ ಬಂದು ಸಚಿವ್ ತೆಂಡಲ್ಕೂರ್ ಧರಿಸುವ ಮಾದರಿಯ ಚಿನ್ನದ ಸರವನ್ನು ಕೇಳಿದ್ದಾರೆ. ಆಗ ರಾಖಿ ಅವರು ಕೆಳಬಾಗಿ ಸರ ತೆಗೆದುಕೊಡುತ್ತಿದ್ದಾಗ ದುಷ್ಕರ್ಮಿಗಳು ಏಕಾಏಕೀ ಒಂದು ಸುತ್ತಿನ ಗುಂಡು ಹಾರಿಸಿ ದರೋಡೆ ಮಾಡಲು ಪ್ರಯತ್ನಿಸಿದಾಗ ಗುಂಡು ಮಳಿಗೆಯ ಛಾವಣಿಗೆ ತಗುಲಿದೆ. ಇದರಿಂದ ವಿಚಲಿತರಾಗದ ಮಹಿಳೆ ರಾಖಿ, ಧೈರ್ಯದಿಂದ ಮಳಿಗೆಯಲ್ಲಿದ್ದ ಕುರ್ಚಿ ಹಾಗೂ ಕೈಗೆ ಸಿಕ್ಕ ವಸ್ತುಗಳನ್ನು ಅವರ ಮೇಲೆ ಎಸೆದು, ಜೋರಾಗಿ ಕಿರುಚಿದಾಗ ದರೋಡೆಕೋರರು ಹೆದರಿ ಅಲ್ಲಿಂದ ಪರಾರಿಯಾಗಿದ್ದಾರೆ 

ಮಾಹಿತಿ ತಿಳಿಯುತ್ತಿದ್ದಂತೆ ವೈಯಾಲಿಕಾವಲ್ ಪಿಐ ಯೋಗೇಂದ್ರ ಕುಮಾರ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ, ಶ್ವಾನದಳದ ಮೂಲಕ ಸ್ಥಳ ಪರಿಶೀಲಿಸಿ, ಸ್ಥಳದಲ್ಲಿ ಬಿದ್ದಿದ್ದ ಹಲ್ಮೇಟ್ ಹಾಗೂ ಅದರಲ್ಲಿದ್ದ ಕೂದಲನ್ನು ಪರೀಕ್ಷೆಗೆ ತೆಗೆದುಕೊಂಡರು. ನಂತರ ಮೂರು ತಂಡಗಳನ್ನು ರಚಿಸಿ ರಾತ್ರಿ 10.30ಕ್ಕೆ ಕೆಆರ್ ಪುರಂನಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಿ, ನಾಡ ಪಿಸ್ತೂಲ್, ಗುಂಡುಗಳು ಹಾಗೂ ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ. ಕೆಲವೇ ಗಂಟೆಗಳಲ್ಲಿ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸ್ ತಂಡ ಯಶಸ್ವಿಯಾಗಿದ್ದು, ಅವರ ಕಾರ್ಯವನ್ನು  ಮೆಚ್ಚಿ 1 ಲಕ್ಷ ರೂ ಬಹುಮಾನ ಘೋಷಿಸಿದ್ದಾರೆ.

ದಂಪತಿ ಪ್ರದರ್ಶಿಸಿದ ಧೈರ್ಯದಿಂದ ದೊಡ್ಡ ಅನಾಹುತ ತಪ್ಪಿದಂತಾಗಿದ್ದು, ಸಾರ್ವಜನಿಕರಿಗೆ ಪೊಲೀಸ್ ಇಲಾಖೆಯ ಮೇಲೆ ವಿಶ್ವಾಸ ಮೂಡಿಸಿದೆ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೂ ಈ ವಿಷಯವನ್ನು ತಿಳಿಸಲಾಗಿದ್ದು, ಅವರು ದಂಪತಿಯ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಆಯುಕ್ತರು ಸಂತಸ ವ್ಯಕ್ತಪಡಿಸಿದರು.

ಮಹಾರಾಷ್ಟ್ರ ಸೋಲಾಪುರದ ಬಾಲಾಜಿ (25), ಹರಿಯಾಣದ ಬಲವಾನ್ ಸಿಂಗ್ (24) ಹಾಗೂ ರಾಜಸ್ಥಾನದ ಶ್ರೀರಾಮ ಬಿಶ್ನೋಯಿ (23) ಎಂಬ ಮೂವರು ಆಭರಣ ಮಳಿಗೆಗೆ ನುಗಿದ್ದರು. ಇನ್ನೋರ್ವ ರಾಜಸ್ಥಾನದ ಮೂಲದ ಓಂಪ್ರಕಾಶ್ ಎಂಬಾತ  ಮಳಿಗೆಯ ಹೊರಗಡೆ ನಿಂತಿದ್ದ. ಕಳೆದ ಒಂದೂವರೆ ತಿಂಗಳ ಹಿಂದೆ ಬೆಂಗಳೂರಿಗೆ ಬಂದಿರುವ ಆರೋಪಿಗಳು ಕೆಆರ್ ಪುರಂ ನ ವಿನಾಯಕ ನಗರದಲ್ಲಿ ವಾಸವಾಗಿದ್ದರು. ಇವರೆಲ್ಲರೂ ಸ್ಟೀಲ್ ವೆಲ್ಡಿಂಗ್ ನಲ್ಲಿ ಕೆಲಸ ಮಾಡುತ್ತಿದ್ದರೆಂದು ತಿಳಿದು ಬಂದಿದೆ ಎಂದರು.

ಆರೋಪಿಗಳಿಗೆ ಪಿಸ್ತೂಲ್ ಎಲ್ಲಿಂದ ದೊರೆಯಿತು ಹಾಗೂ ಈ ಹಿಂದೆ ಯಾವುದಾದರೂ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರಾ ಎಂಬುದರ ಕುರಿತು ತನಿಖೆ ಮುಂದುವರೆದಿದೆ ಎಂದು ತಿಳಿಸಿದರು.

ಶೇಷಾದ್ರಿಪುರಂ ಎಸಿಪಿ ನಿರಂಜನ್ ರಾಜೇ ಅರಸ್, ವೈಯಾಲಿಕಾವಲ್ ಪೊಲೀಸ್ ಇನ್ಸ್ ಪೆಕ್ಟರ್ ಯೋಗೇಂದ್ರ ಕುಮಾರ್ ಹಾಗೂ ಸದಾಶಿವ ನಗರದ ಪೊಲೀಸ್ ಇನ್ಸ್ ಪೆಕ್ಟರ್ ನವೀನ್ ಸುಪೇಕರ್ ಸೇರಿ ಒಟ್ಟು 19 ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

SCROLL FOR NEXT