ರಾಜ್ಯ

ಅಮೆರಿಕಾ ಶೂಟೌಟ್'ಗೆ ಬಲಿಯಾದ ಅಭಿಷೇಕ್ ಕುಟುಂಬಕ್ಕೆ ಶೀಘ್ರ ವೀಸಾ

Manjula VN

ಮೈಸೂರು: ಅಮೆರಿಕಾದಲ್ಲಿ ಅಪರಿಚತರ ಗುಂಡಿನ ದಾಳಿಗೆ ಬಲಿಯಾದ ಮೈಸೂರು ಯುವಕ ಅಭಿಷೇಕ್ ಅವರ ನಿವಾಸಕ್ಕೆ ಭೇಟಿ ನೀಡಿದ ಸಂಸದ ಪ್ರತಾಪ್ ಸಿಂಹ ಹಾಗೂ ಆರೋಗ್ಯ ಸಚಿವ ಬಿ. ಶ್ರೀರಾಮುಲು ಪೋಷಕರಿಗೆ ಸಾಂತ್ವನ ಹೇಳಿದರು. 

ಈ ವೇಳೆ ಅಮೆರಿಕಾಕ್ಕೆ ತೆರಳಲು ವೀಸಾ ಸಮಸ್ಯೆ ನಿವಾರಣೆಗೆ ಸಹಾಯ ಮಾಡುವುದಾಗಿ ಸಚಿವ ಶ್ರೀರಾಮುಲು ಅವರು ತಿಳಿಸಿದರು. 

ಬಳಿಕ ಮಾತನಾಡಿ ಪ್ರತಾಪ್ ಸಿಂಹ ಅವರು, ಅಭಿಷೇಕ್ ಕುಟುಂಬ ಅಮೆರಿಕಾಕ್ಕೆ ತೆರಳಲು  ವೀಸಾ ಸಮಸ್ಯೆ ಉಂಟಾಗಿದೆ. ಇನ್ನೆರಡು ದಿನಗಳಲ್ಲಿ ವೀಸಾ ವ್ಯವಸ್ಥೆ ಮಾಡಿಕೊಡಲಾಗುವುದು. ಈ ಬಗ್ಗೆ ಅಮೆರಿಕಾ ರಾಯಭಾರಿ ಕಚೇರಿಯೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು ಹೇಳಿದರು. 

ಸಚಿವ ಶ್ರೀರಾಮುಲು ಮಾತನಾಡಿ, ನಮ್ಮ ದೇಶದಲ್ಲಿಯೇ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳಿವೆ. ಆದರೆ, ಸಾಕಷ್ಟು ಜನರು ವಿದೇಶಕ್ಕೆ ತೆರಳಿ ವಿದ್ಯಾಭ್ಯಾಸ ಮಾಡಲು ಇಚ್ಛಿಸುತ್ತಿದ್ದಾರೆ. ಅಭಿಷೇಕ್ ಸಾವಿಗೆ ಸಂತಾಪ ಸೂಚಿಸುತ್ತೇನೆ. ಅಭಿಷೇಕ್ ಕುಟುಂಬದ ಜೊತೆಗೆ ನಿಲ್ಲುತ್ತೇನೆಂದು ತಿಳಿಸಿದ್ದಾರೆ. 

ಅಭಿಷೇಕ್ ತಂದೆ ಸುದೇಶ್ ಮಾತನಾಡಿ, ನನ್ನ ಪುತ್ರನಿಗೆ ಯಾವುದೇ ಕೆಟ್ಟ ಅಭ್ಯಾಸಗಳಿರಲಿಲ್ಲ. ವಿದ್ಯಾಭ್ಯಾಸ ಮಾಡುತ್ತಿರುವಾಗಲೇ ದುಡಿಯುವ ಆಸೆಯಿಟ್ಟಿಕೊಂಡಿದ್ದ. ಅಮೆರಿಕಾದಲ್ಲಿ ಮೂರು ವಾರಗಳನ್ನು ಕಳೆದು ಹಿಂದಿರುಗಿದ್ದೆ. ಜನವರಿಯಲ್ಲಿ ತಾಯಿ ಕೂಡ ಅಮೆರಿಕಾಗೆ ಹೋಗಲು ಬಯಸಿದ್ದರು. ಇಂತಹ ಪರಿಸ್ಥಿತಿ ಯಾವುದೇ ಪೋಷಕರಿಗೂ ಬಾರದಿರಲಿ ಎಂದಿದ್ದಾರೆ. 

SCROLL FOR NEXT