ರಾಜ್ಯ

ಬೆಂಗಳೂರು: ಬಾಲಕನ ಅಪಹರಿಸಿದ್ದವನಿಗೆ ಗುಂಡು, ಬಂಧನ

Manjula VN

ಬೆಂಗಳೂರು: ಹೋಟೆಲ್ ಮಾಲೀಕನ ಪುತ್ರನ ಅಪಹರಿಸಿ ರೂ.50 ಲಕ್ಷ ಬೇಡಿಕೆ ಇಟ್ಟಿದ್ದ ಅಪಹರಣಕಾರನ ಕಾಲಿಗೆ ಬಾಣಸವಾಡಿ ಪೊಲೀಸರು ಗುಂಡು ಹಾರಿಸಿ ಬಂಧನಕ್ಕೊಳಪಡಿಸಿದ್ದಾರೆ. 

ಥಣಿಸಂದ್ರ ಮುಬಾರಕ್ (28) ಎಂಬಾತನ ಕಾಲಿಕೆ ಗುಂಡು ಹಾರಿಸಲಾಗಿದೆ ಎಂದು ತಿಳಿದುಬಂದಿದೆ. 

ಘಟನೆಯಲ್ಲಿ ಮುಖ್ಯ ಪೇದೆ ರೇಣುಕನಾಯಕ್ ಗಾಯಗೊಂಡಿದ್ದಾರೆ. ಆರೋಪಿಯ ಇಬ್ಬರು ಸಹಚರರಾದ ಥಣಿಸಂದ್ರದ ಅಯಾಝ್ (30) ಮತ್ತು ಕಮ್ಮನಹಳ್ಳಿಯ ಮೊಯಿನ್ (29)ನನ್ನು ಬಂಧನಕ್ಕೊಳಪಡಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. 

ಜಾಕೀರ್ ಅಲಿ ಹೋಟೆಲ್ ಹೊಂದಿದ್ದು, ಇವರ 13 ವರ್ಷದ ಪುತ್ರ 8ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದ. ಶನಿವಾರ ಶಾಲೆಯಿಂದ ಮನೆಗೆ ಬಂದ ಬಾಲಕ, ತಂದೆಯ ಮೊಬೈಲ್ ತೆಗೆದುಕೊಂಡು ಆಟವಾಡಲು ಹೊರಗೆ ಬಂದಿದ್ದ. ಮನೆ ಬಳಿ ಆಟವಾಡುತ್ತಿದ್ದ ಬಾಲಕನನ್ನು ಮಧ್ಯಾಹ್ನ 2.30ರ ಸುಮಾರಿಗೆ ದುಷ್ಕರ್ಮಿಗಳು ಆಟೋದಲ್ಲಿ ಅಪಹರಣ ಮಾಡಿದ್ದರು. 

ಸಂಜೆಯಾದರೂ ಪುತ್ರ ಕಾಣಿಸದಿದ್ದಾಗ ಜಾಕೀರ್ ಬಾಣಸವಾಡಿ ಠಾಣೆಗೆ ದೂರು ನೀಡಿದ್ದರು. ಈ ನಡುವೆ ಸಂಜೆ 5.30ಕ್ಕೆ ಬಾಲಕನ ಬಳಿಯಿದ್ದ ಮೊಬೈಲ್ ನಿಂದ ಆರೋಪಿಗಳು ಆತನ ಮತ್ತೊಂದು ಸಂಖ್ಯೆಗೆ ಕರೆ ಮಾಡಿ ರೂ.50 ಲಕ್ಷ ನೀಡಬೇಕು. ಇಲ್ಲದೇ ಹೋದರೆ ನಿಮ್ಮ ಪುತ್ರನನ್ನು ಕೊಲೆ ಮಾಡುತ್ತೇವೆಂದು ಬೆದರಿಕೆ ಹಾಕಿದ್ದಾರೆ. 

ಕೂಡಲೇ ಡಿಸಿಪಿ ಡಾ.ಎಸ್.ಡಿ.ಶರಣಪ್ಪ ಅವರು ಮೂವರು ಇನ್ಸ್ ಪೆಕ್ಟರ್ ಗಳ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ್ದರು. ಕೆಜೆ.ಹಳ್ಳಿ ಠಾಣೆ ಇನ್ಸ್ ಪೆಕ್ಟರ್ ಅಜಯ್ ಸಾರಥಿಯವರಿಗೆ ಅಪಹರಣಕಾರರು ಬಾಲಕನನ್ನು ಆಟೋದಲ್ಲಿ ಕೂರಿಸಿಕೊಂಡು ನಗರದಲ್ಲಿ ಸುತ್ತಾಡುತ್ತಿರುವ ವಿಷಯ ಲಭ್ಯವಾಗಿದ್ದು, ಹೆಣ್ಣೂರು ಬಳಿ ಸಾರಾಯಿಪಾಳ್ಯ ಬಳಿ ಇರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಕೂಡಲೇ ಇನ್ಸ್ ಪೆಕ್ಟರ್ ಸಿಬ್ಬಂದಿ ಜೊತೆ ಸ್ಥಳಕ್ಕೆ ತೆರಳಿದ್ದಾರೆ. 

ಬಂಧಿಸಲು ಹೋದ ಪೊಲೀಸರ ಮೇಲೆಯೇ ಮುಬಾರಕ್ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಆರೋಪಿ ಮತ್ತೆ ಹಲ್ಲೆಗೆ ಯತ್ನಿಸಿದಾಗ ಆತ್ಮರಕ್ಷಣೆಗಾಗಿ ಪೊಲೀಸರು ಆತನ ಮೇಲೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಬಂಧಿತ ನೀಡಿದ ಮಾಹಿತಿ ಆಧರಿಸಿ ಮೊಯಿನ್ ಮತ್ತು ಅಯಾಝ್'ನನ್ನು ಬಂಧಿಸಿ ಬಾಲಕನನ್ನು ರಕ್ಷಿಸಿದ್ದಾರೆಂದು ಶರಣಪ್ಪ ಅವರು ತಿಳಿಸಿದ್ದಾರೆ. 

SCROLL FOR NEXT