ರಾಜ್ಯ

ಕೇಂದ್ರದ ರೂ.40,000 ಕೋಟಿ ಅನುದಾನ ರಕ್ಷಣೆಗೆ ಸರ್ಕಾರ ರಚನೆ ನಾಟಕವಾಡಿತ್ತು ಬಿಜೆಪಿ: ಹೆಗಡೆ

Manjula VN

ಬೆಂಗಳೂರು: ಕೇಂದ್ರ ಸರ್ಕಾರದ ರೂ.40,000 ಕೋಟಿ ಅನುದಾನ ರಕ್ಷಣೆ ಮಾಡಲು ಮಹಾರಾಷ್ಟ್ರ ರಾಜ್ಯದಲ್ಲಿ ಸರ್ಕಾರ ರಚನೆ ನಾಟಕ ಮಾಡಿತ್ತು ಬಿಜೆಪಿ ಎಂದು ಮಾಜಿ ಕೇಂದ್ರ ಸಚಿವ ಹಾಗೂ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆಯವರು ಹೇಳಿದ್ದಾರೆ. 

ಉಪಚುನಾವಣೆ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಪ್ರಚಾರದ ವೇಳೆ ಮಾತನಾಡಿರುವ ಅನಂತ್ ಕುಮಾರ್ ಹೆಗಡೆಯವರು, ಬಹುಮತ ಇಲ್ಲದೇ ಹೋದರೂ ದೇವೇಂದ್ರ ಫಡ್ನವೀಸ್ ಅವರು ಪ್ರಮಾಣ ವಚನ ಸ್ವೀಕರಿಸಿದ್ದರು. ಏಕೆ ಎಂದು ನಿಮಗೆ ತಿಳಿದಿದೆಯಾ ಎಂದು ಜನರನ್ನು ಪ್ರಶ್ನಿಸಿದ್ದಾರೆ. 

ಬಳಿಕ ಮಾತು ಮುಂದುವರೆಸಿ ಕೇಂದ್ರ ಸರ್ಕಾರ ಈ ಹಿಂದೆ ಮಹಾರಾಷ್ಟ್ರ ರಾಜ್ಯ ಅಭಿವೃದ್ಧಿಗೆ ರೂ.40,000 ಕೋಟಿ ಅನುದಾನ ಬಿಡುಗಡೆ ಮಾಡಿತ್ತು. ಈ ಹಣ ಮುಖ್ಯಮಂತ್ರಿಗಳ ನಿಯಂತ್ರಣಕ್ಕೆ ಬರುತ್ತದೆ. ಕಾಂಗ್ರೆಸ್, ಶಿವಸೇನೆ, ಎನ್'ಸಿಪಿ ಪಕ್ಷಗಳು ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಲು ಹೊರಟಿದ್ದಿದ್ದದ್ದು ಎಲ್ಲರಿಗೂ ತಿಳಿದಿತ್ತು. ಈ ಮೂರೂ ಪಕ್ಷಗಳು ಅಧಿಕಾರಕ್ಕೆ ಬಂದಿದ್ದೇ ಆದರೆ, ಹಣ ದುರುಪಯೋಗವಾಗಬಹುದು ಎಂಬ ಉದ್ದೇಶದಿಂದ ಆ ಹಣವನ್ನು ರಕ್ಷಣೆ ಮಾಡುವ ಸಲುವಾಗಿಯೇ ದೇವೇಂದ್ರ ಫಡ್ನವೀಸ್ ಅವರು ಪ್ರಮಾಣವಚನ ಸ್ವೀಕರಿಸುವ ನಾಟಕವಾಡಿದ್ದರು. 

ನಮಗೆ ಬಹುಮತ ಇಲ್ಲ ಎಂದು ತಿಳಿದಿದ್ದರೂ ನಾವು ಸರ್ಕಾರ ರಚನೆ ಮಾಡುವ ನಾಟವಾಡಿದ್ದೆವು. ಇದಕ್ಕೆ ಕಾರಣ ಕೇಂದ್ರ ಸರ್ಕಾರದ ರೂ.40,000 ಕೋಟಿ ರಕ್ಷಣೆ ಮಾಡುವ ಸಲುವಾಗಿ ಅಷ್ಟೇ. ಎಲ್ಲವೂ ಪೂರ್ವ ನಿಯೋಜಿತವಾದ ನಾಟಕವಾಗಿತ್ತು. ಹಣ ಎಲ್ಲಿ ತಲುಪಬೇಕೋ ಅಲ್ಲಿಗೆ ತಲುಪಿದೆ. ಇಲ್ಲದೇ ಹೋಗಿದ್ದರೆ ಮುಂದೆ ಬರುತ್ತಿದ್ದ ಮುಖ್ಯಮಂತ್ರಿಗಳು ಅದನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಗಳಿರುತ್ತಿತ್ತು ಎಂದು ತಿಳಿಸಿದ್ದಾರೆ. 

SCROLL FOR NEXT