ರಾಜ್ಯ

ಗಗನಕ್ಕೇರಿದ ಬೆಲೆ: ಈರುಳ್ಳಿಯತ್ತ ಮುಖ ಮಾಡಿದ ಕದೀಮರು, ಸಂಕಷ್ಟದಲ್ಲಿ ರೈತರು

Manjula VN

ಗದಗ: ಅಡುಗೆಯ ದಿನನಿತ್ಯ ಬಳಕೆಯ ಪದಾರ್ಥವಾಗಿರುವ ಈರುಳ್ಳಿ ನೂರರ ಗಡಿ ದಾಟುತ್ತಿದ್ದು, ಈ ನಡುವಲ್ಲೇ ರೈತರಿಗೆ ಇದೀಗ ಕದೀಮರ ಕಾಟ ಶುರುವಾಗಿದೆ. 

ಈರುಳ್ಳಿ ಬೆಲೆ ಗಗನಕ್ಕೇರುತ್ತಿರುವ ಹಿನ್ನೆಲೆಯಲ್ಲಿ ಕಳ್ಳರು ಇದೀಗ ಈರುಳ್ಳಿಯತ್ತ ಮುಖ ಮಾಡಿದ್ದು, ರಾತ್ರೋರಾತ್ರಿ ಮೂಟೆಗಟ್ಟಲೆ ಈರುಳ್ಳಿಯನ್ನು ಕಳ್ಳತನ ಮಾಡಲು ಶುರು ಮಾಡಿದ್ದಾರೆ. 

ಗದಗ ಜಿಲ್ಲೆಯ ಗಜೇಂದ್ರಗಡ್ ಹಾಗೂ ರೋಮ್ ತಾಲೂಕುಗಳಲ್ಲಿ ಒಂದೇ ವಾರದಲ್ಲಿ ಈರುಳ್ಳಿ ಕಳ್ಳತನವಾಗಿರುವ ಒಟ್ಟು 4 ಪ್ರಕರಣಗಳು ದಾಖಲಾಗಿವೆ. ಮಳೆ, ಪ್ರವಾಹದಿಂದ ಕಂಗಾಲಾಗಿದ್ದ ರೈತರಿಗೆ ಬೆಲೆ ಏರಿಕೆ ಕೊಂಚ ನಿರಾಳ ತಂದಿದೆ. ಆದರೆ, ಅದಕ್ಕೆ ಕಳ್ಳರು ತಣ್ಣೀರು ಎರಚುವ ಯತ್ನಗಳನ್ನು ಮಾಡುತ್ತಿದ್ದು,  ಇದರಿಂದ ರೈತರು ಆತಂಕಕ್ಕೀಡಾಗಿದ್ದಾರೆ. 

ಕಳೆದ ವಾರ ಕಾಳಕಯ್ಯ ಪ್ರಭುಸ್ವಾಮಿ ಮಠದಿಂದ ಬರೋಬ್ಬರಿ 40 ಬ್ಯಾಗ್ ಗಳ ಈರುಳ್ಳಿ ಕಳ್ಳತನವಾಗಿರುವುದು ಬೆಳಕಿಗೆ ಬಂದಿತ್ತು.  

ನಮ್ಮ ಭೂಮಿಯಿಂದ ಈರುಳ್ಳಿಯನ್ನು ಕಳ್ಳತನ ಮಾಡುತ್ತಾರೆಂದು ಎಂದಿಗೂ ಆಲೋಚಿಸಿರಲಿಲ್ಲ. ಕಳ್ಳತನವಾದ ದಿನದ ರಾತ್ರಿ 25 ಬ್ಯಾಗ್ ಗಳಷ್ಟು ಮೆಣಸಿನಕಾಯಿ ಕಳ್ಳತನವಾಗಿದೆ. ಈಗಾಗಲೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ ಎಂದು ರೈತರೊಬ್ಬರು ಹೇಳಿದ್ದಾರೆ. 

ಮರು ದಿನ ಬೆಳಿಗ್ಗೆ ಈರುಳ್ಳಿಗಳನ್ನು ಕಿತ್ತರೆ ಆಯಿತು ಎಂದು ಮಲಗಿದ್ದ ಗದಗ ತಾಲೂಕಿನ ರೈತನಿಗೆ ಕಳ್ಳರು ಶಾಕ್ ನೀಡಿದ್ದಾರೆ. ಬರೋಬ್ಬರಿ ರೂ.80,000ರಷ್ಟು ಈರುಳ್ಳಿಗಳನ್ನು ಕಳ್ಳತನವಾಗಿದೆ ಎಂದು ರೈತರು ಕಣ್ಣೀರು ಹಾಕಿದ್ದಾರೆ. ಇದೇ ರೀತಿ ಗದಗ ತಾಲೂಕಿನಲ್ಲಿ ಮತ್ತೆರಡು ಪ್ರಕರಣ ದಾಖಲಾಗಿದೆ. 

ಕಳ್ಳತನ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಾರುಕಟ್ಟೆ ಪ್ರದೇಶ ಹಾಗೂ ಈರುಳ್ಳಿ ಬೆಳೆಯುತ್ತಿರುವ ಪ್ರದೇಶಗಳಲ್ಲಿ ಕಣ್ಗಾವಲಿರಿಸುವಂತೆ ಗದಗ ಜಿಲ್ಲೆ ಪೊಲೀಸ್ ಅಧಿಕಾರಿ ಶ್ರೀನಾಥ್ ಜೋಶಿ ಹೇಳಿದ್ದಾರೆ. 

SCROLL FOR NEXT