ರಾಜ್ಯ

ಉಪಚುನಾವಣಾ ಫಲಿತಾಂಶಕ್ಕೆ ಕ್ಷಣಗಣನೆ ಆರಂಭ: ಬಿಎಸ್'ವೈ ಸರ್ಕಾರ, ಅನರ್ಹ ಶಾಸಕರ ಭವಿಷ್ಯ ನಿರ್ಧಾರ

Manjula VN

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯದ ಆಡಳಿತಾರೂಢ ಬಿಜೆಪಿ ಸರ್ಕಾರದ ಅಸ್ತಿತ್ವವನ್ನು ಮತ್ತು ಅನರ್ಹ ಶಾಸಕರ ಭವಿಷ್ಯವನ್ನು ನಿರ್ಧರಿಸಬಲ್ಲ ಚುನಾವಣೆ ಕರೆಯಲ್ಪಡುತ್ತಿರುವ ರಾಜ್ಯದ 15 ವಿಧಾನಸಭಾಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ಸೋಮವಾರ ಹೊರಬೀಳಲಿದೆ. 

ಅಥಣಿ, ಕಾಗವಾಡ, ಗೋಕಾಕ್, ಯಲ್ಲಾಪುರ, ಹಿರೇಕೆರೂರು, ರಾಣೆಬೆನ್ನೂರು, ವಿಜಯನಗರ, ಚಿಕ್ಕಬಳ್ಳಾಪುರ, ಕೆ.ಆರ್.ಪುರ, ಯಶವಂತಪುರ, ಮಹಾಲಕ್ಷ್ಮೀ ಲೇಔಟ್, ಶಿವಾಜಿನಗರ, ಹೊಸಕೋಟೆ, ಕೆ.ಆರ್.ಪೇಟೆ ಮತ್ತು ಹುಣಸೂರು ಕ್ಷೇತ್ರದಲ್ಲಿ ಕಳೆದ ಗುರುವಾರ ಮತದಾನ ನಡೆದಿತ್ತು. ಈ 15 ಕ್ಷೇತ್ರಗಳ ಪೈಕಿ 13 ಕ್ಷೇತ್ರಗಳಲ್ಲಿ ಅನರ್ಹ ಶಾಸಕರು ಬಿಜೆಪಿ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದರು. 

ಇದರಂತೆ ಇಂದು ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ಆರಂಭವಾಗಲಿದ್ದು, 11 ಗಂಟೆ ಹೊತ್ತಿಗೆ ಆಯಾ ಕ್ಷೇತ್ರಗಳಲ್ಲಿ ಯಾರು ಗೆಲ್ಲಬಲ್ಲರು ಎಂಬುದರ ಸ್ಪಷ್ಟ ಚಿತ್ರಣ ಬಹಿರಂಗಗೊಳ್ಳಲಿದೆ. ಮಧ್ಯಾಹ್ನ 12 ಗಂಟೆ ವೇಳೆಗೆ ಅಧಿಕೃತ ಚಿತ್ರಣ ತಿಳಿದುಬರಲಿದೆ. ಹೀಗಾಗಿ ಅನರ್ಹ ಶಾಸಕರಲ್ಲಿ ಆಂತಕ ಮತ್ತು ಕುತೂಹಲ ಹೆಚ್ಚಿದೆ. 

ಒಟ್ಟು 165 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದು, ಈ ಪೈಕಿ 156 ಪುರುಷರು ಮತ್ತು 9 ಮಹಿಳೆಯರಿದ್ದಾರೆ. 

ಕಾಂಗ್ರೆಸ್-15, ಬಿಜೆಪಿ-15, ಜೆಡಿಎಸ್-12, ಬಿಎಸ್'ಪಿ-2, ಎನ್'ಸಿಪಿ-1, ನೋಂದಾಯಿತ ಪಕ್ಷಗಳಿಂದ-45, ಪಕ್ಷೇತರರು-45 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. 

ಮತ ಎಣಿಕೆಗೆ ಸಂಬಂಧಪಟ್ಟಂತೆ ಈಗಾಗಲೇ ಕೊನೆಯ ಕ್ಷಣದ ಸಿದ್ಧತಾ ಕಾರ್ಯಪೂರ್ಣಗೊಂಡಿದೆ. ದೊಡ್ಡ ವಿಧಾನಸಭಾ ಕ್ಷೇತ್ರವಾದ ಯಶವಂತಪುರ ಕ್ಷೇತ್ರ ಹೊರತುಪಡಿಸಿ ಇನ್ನುಳಿದ ಎಲ್ಲಾ ಕ್ಷೇತ್ರಗಳ ಮತ ಎಣಿಕೆಗಾಗಿ 14 ಟೇಬಲ್ ಗಳಲ್ಲಿ ನಡೆಯಲಿದೆ. ಯಶವಂತಪುರ ಕ್ಷೇತ್ರದ ಮತ ಎಣಿಕೆಗಾಗಿ 21 ಟೇಬಲ್ ಗಳ ವ್ಯವಸ್ಥೆ ಮಾಡಲಾಗಿದೆ. 

SCROLL FOR NEXT