ರಾಜ್ಯ

ರಾಜ್ಯದಲ್ಲಿ ಬಿಯರ್ ಕುಡಿಯುವವರ ಸಂಖ್ಯೆ ಇಳಿಕೆ, ತನಿಖೆಗೆ ಅಬಕಾರಿ ಆಯುಕ್ತರ ಆದೇಶ!

Lingaraj Badiger

ಬೆಂಗಳೂರು: ರಾಜ್ಯದಲ್ಲಿ ಬಿಯರ್‌ ಕುಡಿಯುವವರ ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿದ ಅಬಕಾರಿ ಇಲಾಖೆ, ಈ ಕುರಿತು ತನಿಖೆಗೆ ಆದೇಶಿಸಿದೆ.

ರಾಜ್ಯದಲ್ಲಿ ಬಿಯರ್ ಮಾರಾಟದ ಪ್ರಮಾಣ ವರ್ಷದಿಂದ ವರ್ಷಕ್ಕೆ ಜಾಸ್ತಿಯಾಗಬೇಕು. ಆದರೆ ಈ ವರ್ಷ ಮಾರಾಟದ ಪ್ರಮಾಣದಲ್ಲಿ ಏರಿಕೆಯಾಗಿಲ್ಲ. ಹೀಗಾಗಿ ಈ ಕುರಿತು ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ರಾಜ್ಯದ ಎಲ್ಲಅಬಕಾರಿ ಜಂಟಿ ಆಯುಕ್ತರು ಮತ್ತು ಉಪ ಆಯುಕ್ತರಿಗೆ ಸೂಚನೆ ನೀಡಲಾಗಿದೆ.

ಬಿಯರ್‌ ಮಾರಾಟದ ಪ್ರಮಾಣ ಮತ್ತು ಶೇಕಡಾವಾರು ಬೆಳವಣಿಗೆ ಕುಂಠಿತಗೊಂಡಿದೆ. ಇದನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಮಾರಾಟ ಕಡಿಮೆಯಾಗಿರುವುದಕ್ಕೆ ಕಾರಣ ಪತ್ತೆ ಹಚ್ಚಿ, ಕೂಲಂಕಷವಾಗಿ ವಿಶ್ಲೇಷಿಸಿ ಗುರಿ ಸಾಧಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವರದಿ ಸಲ್ಲಿಸುವಂತೆ ಅಬಕಾರಿ ಆಯುಕ್ತರು ರಾಜ್ಯದ ಎಲ್ಲ ವಿಭಾಗಗಳ ಅಬಕಾರಿ ಜಂಟಿ ಆಯುಕ್ತರಿಗೆ ಮತ್ತು ಅಬಕಾರಿ ಉಪ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಬಾರ್ ಮಾಲೀಕರ ಸಂಘದ ಕರುಣಾಕರ್ ಹೆಗ್ಡೆ ಅವರು, ನಮಗೆ ಬಿಯರ್ ಅನ್ನು ಅಬಕಾರಿ ಇಲಾಖೆ ಪೂರೈಸುತ್ತಿರಲಿಲ್ಲ. ಹೀಗಾಗಿ ಸೇಲ್ ಆಗುವುದು ಹೇಗೆ ಎಂದು ಟಾಂಗ್ ಕೊಟ್ಟಿದ್ದಾರೆ.

ಅಬಕಾರಿ ಇಲಾಖೆ ಬೇರೆ ಮದ್ಯ ಪೂರೈಕೆ ಮಾಡುತ್ತದೆ. ಏಕೆಂದರೆ ಆದಾಯದ ಪ್ರಮಾಣ ಹೆಚ್ಚಾಗಿರುತ್ತೆ. ಬಿಯರ್ ಸೇಲ್‍ನಲ್ಲಿ ಸರ್ಕಾರದ ಬೊಕ್ಕಸಕ್ಕೆ ಬರುವ ಆದಾಯ ಕಡಿಮೆಯಿರುತ್ತದೆ. ಹೀಗಾಗಿ ಪೂರೈಕೆ ಕಡಿಮೆ ಮಾಡಿದೆ. ನಾವು ಬಿಯರ್ ಪೂರೈಕೆಗೆ ದುಂಬಾಲು ಬಿದರೂ ಕಳುಹಿಸುತ್ತಿರಲಿಲ್ಲ ಎಂದು ಬಾರ್ ಮಾಲೀಕರು ಹೇಳಿದ್ದಾರೆ.

SCROLL FOR NEXT