ರಾಜ್ಯ

ಸುಳ್ವಾಡಿ ವಿಷ ಪ್ರಸಾದ ದುರಂತ: ಮೃತ ಕುಟುಂಬಗಳಿಗೆ ಜಮೀನು ಎಂದ ಸಚಿವ ಸುರೇಶ್ ಕುಮಾರ್

Srinivasamurthy VN

ನವದೆಹಲಿ: ಸುಳ್ವಾಡಿ ವಿಷ ಪ್ರಸಾದ ದುರಂತ ಪ್ರಕರಣದ ಎಲ್ಲ ಮೃತ ಕುಟುಂಬಗಳಿಗೆ ಜಮೀನು  ನೀಡಲು ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

ಈ ಕುರಿತಂತೆ ಚಾಮರಾಜನಗರದಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಅವರು, 'ಸುಳ್ವಾಡಿ ವಿಷ ಪ್ರಸಾದ ದುರಂತ ಪ್ರಕರಣದ ಎಲ್ಲ ಮೃತ ಕುಟುಂಬಗಳಿಗೆ ಜಮೀನು  ನೀಡಲು ಪ್ರಕ್ರಿಯೆ ಆರಂಭಿಸಲಾಗಿದೆ. ಆದರೆ ಸರ್ಕಾರಿ ಜಮೀನಿಲ್ಲದ ಕಾರಣ ಖಾಸಗಿಯವರಿಂದ ಜಮೀನು ಖರೀದಿಸಲು ಕ್ರಮ ವಹಿಸಲಾಗಿದೆ ಎಂದು ಹೇಳಿದರು.

'ನಿವೇಶನ ರಹಿತರಿಗೆ ನಿವೇಶನ ನೀಡಲು ಕ್ರಮ ವಹಿಸಲಾಗಿದ್ದು, ಪ್ರಕರಣದಲ್ಲಿ ಕೆಲವು ಸಂತ್ರಸ್ತರ ಹೆಸರು ಕೈ ಬಿಟ್ಟು ಹೋಗಿದೆ. ಸುಳ್ವಾಡಿಯಲ್ಲಿ ಅದಾಲತ್ ನಡೆಸಲು ತಹಶೀಲ್ದಾರ್ ಗೆ ಸೂಚಿಸಿದ್ದೇನೆ.‌‌‌ ಮೃತ ಕುಟುಂಬಗಳಿಗೆ ಈಗಾಗಲೇ ಪರಿಹಾರ ನೀಡಲಾಗಿದೆ. ಅಸ್ವಸ್ಥರಾದವರಿಗೆ ಚಿಕಿತ್ಸೆ ಕೊಡಿಸಲಾಗಿದೆ. ಇನ್ನೂ ಚಿಕಿತ್ಸೆ ಅಗತ್ಯ ಇರುವವರಿಗೆ ಮೈಸೂರಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲು ಕ್ರಮ ಕೈಗೊಳ್ಳಲಾಗಿದೆ. ದೇವಸ್ಥಾನದ ಬಾಗಿಲು ತೆರೆಯಲು ಆಡಳಿತ ಆಧಿಕಾರಿಯನ್ನ ನೇಮಕ‌ ಮಾಡಿದ್ದೇವೆ ಎಂದು ಹೇಳಿದರು.

ಅಂತೆಯೇ 'ಮಾರಮ್ಮನಿಗೆ ಪೂಜೆ ಮಾಡಲು ಪೂಜಾರಿ ನೇಮಕ ಮಾಡುತ್ತೇವೆ. ಆಗಮ ಶಾಸ್ತ್ರ ಗೊತ್ತಿರುವ ಪೂಜಾರಿಯನ್ನ ನೇಮಕ ಮಾಡುತ್ತೇವೆ. ಒಳ್ಳೆಯ ದಿನ ಮತ್ತು ಮೂಹರ್ತ ನೋಡಿ ದೇವಸ್ಥಾನ ಬಾಗಿಲು ತೆರೆಯುತ್ತೇವೆ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.

ವರದಿ: ಗೂಳಿಪುರ ನ೦ದೀಶ

SCROLL FOR NEXT