ರಾಜ್ಯ

ವಿಮಾನ ನಿಲ್ದಾಣದಲ್ಲೇ ಕಾಂಗ್ರೆಸ್ ನಿಯೋಗ ಪೊಲೀಸರ ವಶಕ್ಕೆ; ಸಿದ್ದರಾಮಯ್ಯ ಭೇಟಿ ರದ್ದು

Srinivas Rao BV

ಮಂಗಳೂರು: ಗೋಲಿಬಾರ್ ಹಾಗೂ ಪರಿಸ್ಥಿತಿಯ ಅವಲೋಕನಕ್ಕಾಗಿ ಮಂಗಳೂರಿಗೆ ತೆರಳಿದ್ದ ಕಾಂಗ್ರೆಸ್ ನಿಯೋಗವನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಕಾಂಗ್ರೆಸ್ ನಾಯಕರು ಮಂಗಳೂರಿಗೆ ತೆರಳಲು ಸಿದ್ಧತೆ ನಡೆಸಿ, ಶುಕ್ರವಾರ ಬೆಳಿಗ್ಗೆ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಮಾಜಿ ಸಚಿವ ಎಂ.ಬಿ ಪಾಟೀಲ್ ಹಾಗೂ ಮಾಜಿ ಸಂಸದ ವಿ.ಎಸ್ ಉಗ್ರಪ್ಪ ನೇತೃತ್ವದ ಮೊದಲ ತಂಡ ತೆರಳಿತ್ತು.

ವಿಮಾನ ನಿಲ್ದಾಣಕ್ಕೆ ಬಂದಿದ್ದ ಕಾಂಗ್ರೆಸ್ ನಿಯೋಗ ಗೋಲಿಬಾರ್‌ನಲ್ಲಿ ಮೃತಪಟ್ಟವರ ನಿವಾಸಕ್ಕೆ ತೆರಳಲು ಮುಂದಾದಾಗ ಪೊಲೀಸರು ಇದಕ್ಕೆ ಅವಕಾಶ ನೀಡಲಿಲ್ಲ. ಆದರೆ ಕಾಂಗ್ರೆಸ್ ನಿಯೋಗ ಪಟ್ಟು ಹಿಡಿದಾಗ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.

ಮಂಗಳೂರು ವಿಮಾನ ನಿಲ್ದಾಣದಲ್ಲಿಯೇ ನಿಯೋಗವನ್ನು ಪೊಲೀಸರು ವಶಕ್ಕೆ ಪಡೆದು ಅವರನ್ನು ಮಂಗಳೂರು ನಗರದೊಳಗೆ ಬಿಟ್ಟುಕೊಳ್ಳಲಿಲ್ಲ. ಮಧ್ಯಾಹ್ನದ ನಂತರ ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದ ಜಮೀರ್ ಅಹ್ಮದ್ ಮತ್ತಿತರರನ್ನೊಳಗೊಂಡ ಮತ್ತೊಂದು ತಂಡ ಮಂಗಳೂರಿಗೆ ತೆರಳಲು ಸಿದ್ಧತೆ ನಡೆಸಿತ್ತು.

ಆದರೆ ವಿಶೇಷ ವಿಮಾನ ಮಂಗಳೂರಿನಲ್ಲಿ ಇಳಿಯಲು ಅನುಮತಿ ನಿರಾಕರಿಸಿದ್ದರಿಂದ ಸಿದ್ದರಾಮಯ್ಯ ಅವರ ಮಂಗಳೂರು ಪ್ರವಾಸ ರದ್ದಾಯಿತು. ಮಂಗಳೂರಿನ ನಗರ ಪ್ರದೇಶದಲ್ಲಿ ಕರ್ಫ್ಯೂ ಜಾರಿಯಲ್ಲಿದೆ. ಮುಂಜಾಗರೂಕತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಪೊಲೀಸರ ಈ ಕ್ರಮವನ್ನು ಕಾಂಗ್ರೆಸ್ ಬಲವಾಗಿ ಖಂಡಿಸಿದೆ.

SCROLL FOR NEXT