ರಾಜ್ಯ

ಪೌರತ್ವ ತಿದ್ದುಪಡಿ ಕಾಯ್ದೆ: ಮಸೀದಿಗೆ ಹೋಗಿ ಜನರಲ್ಲಿ ಅರಿವು ಮೂಡಿಸಿದ ಪೊಲೀಸ್ ಅಧಿಕಾರಿ!

Sumana Upadhyaya

ಬೆಂಗಳೂರು: ಗಲಭೆ, ಹಿಂಸಾಚಾರವಾಗುತ್ತಿದ್ದರೆ ಜನರಲ್ಲಿ ಅರಿವು ಮೂಡಿಸುವುದು ಅತ್ಯಂತ ಉತ್ತಮ ಪರಿಹಾರ, ಈ ಪೊಲೀಸ್ ಅಧಿಕಾರಿ ಮಾಡಿದ್ದು ಕೂಡ ಅದನ್ನೇ. ರಾಜ್ಯದ ಅಲ್ಲಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಪ್ರತಿಭಟನೆ ನಡೆಯುತ್ತಿರುವಾಗ ಎರಡು ಮಸೀದಿಗಳಿಗೆ ಹೋಗಿ ಮುಸಲ್ಮಾನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದರು.


ಬೆಂಗಳೂರಿನ ಹೆಚ್ ಎಸ್ ಆರ್ ಲೇ ಔಟ್ ಪೊಲೀಸ್ ಠಾಣೆಯಲ್ಲಿ ಇನ್ಸ್ ಪೆಕ್ಟರ್ ಆಗಿರುವ ರಾಘವೇಂದ್ರ ಅಗರಾ ಮತ್ತು ಅಕ್ಸ ಮಸೀದಿಗಳಿಗೆ ಹೋದಾಗ ಖಾಕಿ ಧಿರಿಸಿನಲ್ಲಿ ಬಂದ ವ್ಯಕ್ತಿ ಬಗ್ಗೆ ಅಲ್ಲಿ ನೆರೆದಿದ್ದವರಿಗೆ ಕುತೂಹಲ ಉಂಟಾಯಿತು. ನಮಾಜ್ ಗೆಂದು ಸುಮಾರು 3ರಿಂದ 4 ಸಾವಿರ ಜನರು ಸೇರಿದ್ದರು.


ಅಲ್ಲಿಗೆ ಹೋದ ಇನ್ಸ್ ಪೆಕ್ಟರ್ ರಾಘವೇಂದ್ರ, ಹರಡುತ್ತಿರುವ ವದಂತಿಗಳಿಗೆ ಕಿವಿಗೊಡಬೇಡಿ, ಏನೇ ಮಾಡುವುದಿದ್ದರೂ ಮೊದಲು ನಿಜವಾದ ಸಂಗತಿಯೇನೆಂದು ತಿಳಿದುಕೊಂಡು ಮುಂದುವರಿಯಿರಿ, ಏನಾದರೂ ಸಂದೇಹಗಳು ಬಂದರೆ ಬಂದು ನಮ್ಮ ಬಳಿ ಮೊದಲು ವಿಷಯ ತಿಳಿದುಕೊಳ್ಳಿ, ತಪ್ಪು ದಾರಿಗಿಳಿಯಬೇಡಿ ಎಂದರು.


ರಾಘವೇಂದ್ರ ಮೂಲತಃ ಚಿಕ್ಕಮಗಳೂರಿನವರು, 2003ರಲ್ಲಿ ಪೊಲೀಸ್ ಸೇವೆಗೆ ಸೇರಿ ಅನೇಕ ಕಡೆಗಳಲ್ಲಿ ಇದುವರೆಗೆ ಕೆಲಸ ಮಾಡಿದ್ದಾರೆ. ಕಳೆದ ಜನವರಿಯಲ್ಲಿ ಹೆಚ್ ಎಸ್ ಆರ್ ಲೇ ಔಟ್ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದೆ.


ಈ ಬಗ್ಗೆ ಮಾತನಾಡಿದ ಇನ್ಸ್ ಪೆಕ್ಟರ್ ರಾಘವೇಂದ್ರ, ಹಲವರಿಗೆ ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ಗೊತ್ತಿಲ್ಲ. ಸುಮ್ಮನೆ ಗಲಾಟೆಯಾಗುತ್ತಿದೆ. ಇದಕ್ಕಾಗಿ ಶುಕ್ರವಾರ ವೇಳೆ ಮಸೀದಿ ಬಳಿ ಹೋಗಿ ಜನರಲ್ಲಿ ಅರಿವು ಮೂಡಿಸಲು ಪ್ರಯತ್ನಿಸಿದೆ ಎಂದರು.


ರಾಘವೇಂದ್ರ ಅವರು ತಮ್ಮ ವಿರಾಮದ ಸಮಯದಲ್ಲಿ ಹೀಗೆ ಬೇರೆ ಬೇರೆ ವಿಷಯಗಳ ಕುರಿತು ಮಹಿಳೆಯರು, ಮಕ್ಕಳು, ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತಾರೆ. ಇತ್ತೀಚೆಗೆ ಮಹಿಳೆಯರಿಗೆ ಸುರಕ್ಷಾ ಆಪ್ ಬಗ್ಗೆ ಅರಿವು ಮೂಡಿಸಿದ್ದರು.

ಕಾನೂನು ಪದವಿ ಪಡೆದಿರುವ ಇನ್ಸ್ ಪೆಕ್ಟರ್ ರಾಘವೇಂದ್ರ, ಸ್ವತಃ ಕವಿ. ಪತ್ರಕರ್ತನಾಗಬೇಕೆಂಬ ಕನಸು ಕಂಡಿದ್ದರು. ಆದರೆ ಆದದ್ದು ಪೊಲೀಸ್ ಅಧಿಕಾರಿ.

SCROLL FOR NEXT