ರಾಜ್ಯ

ಬಾಗಲಕೋಟೆ: ಗಮನ ಸೆಳೆಯುತ್ತಿರುವ ಅಪರೂಪದ, ವಧುವರ ಹೂಗಳು

Srinivas Rao BV

ಬಾಗಲಕೋಟೆ: ಬೆಳಗಿನ ಚುಮುಚುಮು ಚಳಿಯಲ್ಲಿ ನೀವು ಜಿಲ್ಲೆಯ ಕುರುಚಲ ಗುಡ್ಡಗಳ ಸಮೀಪ ವಾಯುವಿಹಾರಕ್ಕೆ ಹೊರಟರೆ ಸಾಕು ನಿಮಗೆ ತಿಳಿ ಗುಲಾಬಿ ಹಾಗೂ ಹಳದಿ ಬಣ್ಣದ ಗುಚ್ಚಗಳು ನಿಮ್ಮನ್ನು ಆಕರ್ಷಿಸುತ್ತವೆ.

ಬೆಳಗಿನ ಜಾವ ಬೀಳುವ ಇಬ್ಬನಿ ಮತ್ತು ಸೂರ್ಯೋದಯದ ಕಿರಣಗಳು ಹೂಗಳ ಮೇಲೆ ಬೀಳುವುದರಿಂದ ಅವು ಪ್ರತಿ ಮನಸ್ಸುಗಳು ಸೂರೆಗೊಳ್ಳುತ್ತವೆ. ಮುದ ನೀಡುತ್ತವೆ. ಅಲ್ಲಿಯೇ ನಿಂತುಕೊಡು ಇನ್ನಷ್ಟು ಮತ್ತಷ್ಟು ಬಾರಿ ನೋಡಬೇಕು ಎನ್ನುವ ಆಸೆಯನ್ನು ಹೆಚ್ಚಿಸುತ್ತವೆ.

ಪ್ರಾಕೃತಿಕವಾಗಿ, ಸಾಂಸ್ಕೃತಿಕ ಪರಂಪರೆಗೆ, ಶಿಲ್ಪ ವರ್ಗಕ್ಕೆ, ಕಲಾಕೃತಿಗಳಿಗೆ ಹೆಸರು ವಾಸಿಯಾಗಿರುವ ಬಾಗಲಕೋಟೆ ಜಿಲ್ಲೆಯ ಒಣ ಹವೆ ಪ್ರದೇಶದಲ್ಲಿನ ಕುರುಚಲ ಗಿಡಗಳ ಮಧ್ಯೆ ಈ ದ್ವಿಬಣ್ಣದ ಹೂವುಗಳನ್ನು ಕಾಣಬಹುದಾಗಿದೆ.

ತಿಳಿ ಗುಲಾಬಿ ಹಾಗೂ ಹಳದಿ ಬಣ್ಣದ ಸಣ್ಣ ಸಣ್ಣ ಎಸಳುಗಳ ಎಳೆ ಎಳೆಯಾಗಿ ಗುಚ್ಛವಾಗಿರುವ ಈ ಹೂವುಗಳು ಕ್ರಮೇಣ ವಯಸ್ಸಾದಂತೆ ಗುಲಾಬಿ ಬಣ್ಣ ಬಿಳಿಯ ಬಣ್ಣಕ್ಕೆ ತಿರುಗುತ್ತದೆ. ಕನ್ನಡದ ಆಡುಭಾಷೆಯಲ್ಲಿ ವಧುವರ ಸಸ್ಯ ಎನ್ನುತ್ತಾರೆ. ಇಂಗ್ಲೀಷನಲ್ಲಿ ಡೈಕ್ರೊಸ್ಟಾಕಿಸ್ ಸಿನೆರಾ ಎಂಬ ಹೆಸರಿದ್ದು, ವೈಮೋಸೆ ಕುಟುಂಬಕ್ಕೆ ಸೇರಿದೆ. ಮುಟ್ಟಿದರೆ ಮುನಿಯೆಂಬ ಸಣ್ಣ ಸಸ್ಯ ಅಥವಾ ಚಿಕ್ಕ ಬಳ್ಳಾರಿ ಜಾಲಿಯ ಕುಟುಂಬಕ್ಕೆ ಸೇರಿರುವ ಈ ಸಸ್ಯ ಚಿಕ್ಕ ಚಿಕ್ಕ ಮುಳ್ಳುಗಳನ್ನು ಹೊಂದಿದೆ.

ಉಷ್ಣವಲಯದ ಒಣ ಮುಳ್ಳು ಗಿಡಗಂಟಿಯ ವಿಭಾಗಕ್ಕೆ ಸೇರುವ ಈ ಸಸ್ಯ ಜಿಲ್ಲೆಯ ಒಣ ಪ್ರದೇಶದ ಕಲು ಬಂಡೆಗಳ ಪ್ರದೇಶದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಬಾಗಲಕೋಟೆ, ಬಾದಾಮಿ, ಹುನಗುಂದ, ಬೀಳಗಿ, ಮುಧೋಳ ಸುತ್ತಲೂ ಹೆಚ್ಚಾಗಿ ಕಂಡುಬರುತ್ತದೆ.
ಈ ಹೂಗಳು ನಗರ ಪ್ರದೇಶಗಳಲ್ಲಿ ನೋಡಲು ಸಿಕ್ಕುವುದಿಲ್ಲ. ಇವುಗಳ ಸೌಂದರ್ಯ ಸವಿಯಲು ಒಣಹವೆ ಪ್ರದೇಶಗಳ ಊರ ಹೊರಗಿನ ಗುಡ್ಡಗಳಿಗೆ ಹೋಗಬೇಕು. ಬೆಳಗಿನ ಸೂರ್ಯೋದಯ ಸಮಯದಲ್ಲಿ ಇವುಗಳನ್ನು ನೋಡುವ ಕ್ಷಣವೇ ಸಂತಸಮಯ.

ಜಿಲ್ಲೆಯ ಪ್ರವಾಸಿ ತಾಣಗಳ ಸುತ್ತಮುತ್ತ ಇವು ಹೆಚ್ಚಾಗಿ ಕಾಣಿಸುವುದರಿಂದ ಪ್ರವಾಸಕ್ಕೆಂದು ಜಿಲ್ಲೆಗೆ ಬರುವ ಪ್ರವಾಸಿಗರು ಪ್ರಯಾಣದ ವೇಳೆ ಕಾಣಬಹುದಾಗಿದೆ.

ವಿಠ್ಠಲ ಆರ್. ಬಲಕುಂದಿ

SCROLL FOR NEXT