ರಾಜ್ಯ

ಸಿಎಎ ವಿರೋಧಿಸಿ ಬೃಹತ್ ಸಮಾವೇಶ, ಬೆಂಗಳೂರಿನಲ್ಲಿ ಭಾರಿ ಭದ್ರತೆ

Srinivasamurthy VN

ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿಸಿ ಮುಸ್ಲಿಂ ಶಾಂತಿ ಸೌಹಾರ್ದ ಸಭೆಯ ಬೃಹತ್ ಸಮಾವೇಶದ ಹಿನ್ನಲೆಯಲ್ಲಿ ನಗರದಲ್ಲಿ ಭಾರಿ ಬಿಗಿ ಭದ್ರತೆ ಒದಗಿಸಲಾಗಿದೆ.

ಪುಲಿಕೇಶಿ ನಗರದ ಖುದ್ದೂಸ್ ಸಾಬ್ ಈದ್ಗಾ ಮೈದಾನದಲ್ಲಿ ಸಭೆ ನಡೆಯಲಿರುವ ಹಿನ್ನೆಲೆಯಲ್ಲಿ 1 ಲಕ್ಷ ಜನ ಮುಸ್ಲಿಂ ಬಾಂಧವರು ಪಾಲ್ಗೊಳ್ಳುವ ಸಾಧ್ಯತೆ ಇದೆ. ಈಗಾಗಲೇ ಪೊಲೀಸ್ ಇಲಾಖೆ ಮುಂಜಾಗ್ರತಾ ಕ್ರಮವಾಗಿ 60 ಸಿಎಆರ್, 53 ಕೆಎಸ್ಆರ್ ಪಿ ತುಕಡಿ ಹಾಗೂ 1 ಸಾವಿರ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿ, ನಿಗಾ ವಹಿಸುತ್ತಿದೆ. 

ಈ ಕುರಿತಂತೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು, 'ಯಾವುದೇ ಅಹಿತಕರ ಘಟನೆ ನಡೆಯದಂತೆ ಇಲಾಖೆಯಿಂದ ಎಲ್ಲ ಕ್ರಮ ಕೈಗೊಂಡಿದ್ದೇವೆ. ಕಾರ್ಯಕ್ರಮದಲ್ಲಿ ಕಿಡಿಗೇಡಿಗಳು ಶಾಂತಿ ಕದಡಿ, ಗಲಭೆ ಉಂಟುಮಾಡಿದರೆ ನೀವೇ ಜವಾಬ್ದಾರರು ಎಂಬುದಾಗಿ ಜಂಟಿ ಕ್ರಿಯಾ ಸಮಿತಿ ಆಯೋಜಕರಿಗೆ ಸೂಚನೆ ನೀಡಲಾಗಿದೆ. ಹೆಚ್ಚಿನ ಭದ್ರತೆಗಾಗಿ 25 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. ಸ್ಥಳದಲ್ಲಿ ಅಗ್ನಿಶಾಮಕ ದಳ, ಆಂಬುಲೆನ್ಸ್, 1 ಸಾವಿರ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಹೆಚ್ಚಿನ ಭದ್ರತೆ ವಹಿಸಲಾಗಿದ್ದು, 50 ಕೆಎಸ್​ಆರ್​ಪಿ ತುಕಡಿ, 60 ಸಿಆರ್, ಸಿಐಎಸ್​ಎಫ್​ನ 2 ಕಂಪನಿಯಿಂದ 200 ಸಿಬ್ಬಂದಿ ಕರೆಸಲಾಗಿದೆ ಎಂದರು.

ಇನ್ನು ಖುದ್ದೂಸ್ ಸಾಬ್ ದರ್ಗಾದ ಈದ್ಗಾ ಮೈದಾನದಲ್ಲಿ ಸುಮಾರು 1 ಲಕ್ಷ ಜನ ಸೇರುವ ಸಾಧ್ಯತೆ ಇದ್ದು, ಸಭೆ 11 ಗಂಟೆಯಿಂದ 1 ಗಂಟೆವರೆಗೆ ನಡೆಯಲಿದೆ. 5 ಕಡೆಯಿಂದ ದರ್ಗಾ ಪ್ರವೇಶಿಸಲು ವ್ಯವಸ್ಥೆ ಮಾಡಲಾಗಿದೆ. ವಾಹನ ನಿಲುಗಡೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ. ಮುಖಂಡರ ಜತೆ ಎರಡು ಮೂರು ಬಾರಿ ಚರ್ಚೆ ನಡೆಸಲಾಗಿದೆ. ಸಂಚಾರ ದಟ್ಟಣೆ ಆಗುವ ಹಿನ್ನೆಲೆಯಲ್ಲಿ ಸಾರ್ವಜನಿಕರು ದಂಡು ರೈಲು ನಿಲ್ದಾಣದ ಸುತ್ತ ಮುತ್ತ ಸಂಚರಿಸದಂತೆ ಮನವಿ ಮಾಡಲಾಗಿದೆ ಎಂದು ಹೇಳಿದರು.

ಅಲ್ಲದೆ ಶಾಂತಿ ಕದಡಿ, ಕಾನೂನು ಕ್ರಮ ಕೈಗೆತ್ತಿಕೊಂಡವರ ವಿರುದ್ಧ ನಿರ್ದಾಕ್ಷಿಣ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು. ಕೇವಲ ಶಾಂತಿ ಸಭೆಗೆ ಮಾತ್ರ ಅನುಮತಿ ನೀಡಲಾಗಿದೆ. ಪ್ರತಿಭಟನೆಗೆ ಅವಕಾಶವಿಲ್ಲ. ಮೆರವಣಿಗೆ ನಡೆಸಲು ಅನುಮತಿ ಕೇಳಿಲ್ಲ. ಶಾಂತಿ ಸಭೆಗೆ ಬರುವ ದಾರಿಯಲ್ಲಿನ ಅಂಗಡಿ ಮುಂಗಟ್ಟುಗಳನ್ನು ಬಲವಂತವಾಗಿ ಮುಚ್ಚಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಭಾಸ್ಕರ್ ರಾವ್ ಎಚ್ಚರಿಕೆ ನಿಡಿದ್ದಾರೆ.

SCROLL FOR NEXT