ರಾಜ್ಯ

ಫೇಸ್ಬುಕ್'ನಲ್ಲಿ ಅವಹೇಳನಕಾರಿ ಪೋಸ್ಟ್: ಸೌದಿಯಲ್ಲಿ ಬಂಧನಕ್ಕೊಳಗಾದ ಯುವಕನ ರಕ್ಷಣೆಗೆ ಒಗ್ಗೂಡಿದ ಉಡುಪಿ ಜನತೆ

Manjula VN

ಉಡುಪಿ: ಧಾರ್ಮಿಕ ಅವಹೇಳನ ಹಾಗೂ ಸೌದಿ ಅರೇಬಿಯಾ ದೊರೆ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ ಹಿನ್ನೆಲೆಯಲ್ಲಿ ಕುಂದಾಪುರದ ಯುವಕನನ್ನು ಸೌದಿ ಪೊಲೀಸರು ಬಂಧನಕ್ಕೊಳಪಡಿಸಿರುವ ಹಿನ್ನೆಲೆಯಲ್ಲಿ ಯುವಕನ ರಕ್ಷಣೆಗಾಗಿ ಉಡುಪಿ ಜನತೆ ಒಗ್ಗೂಡಿ ಆಕ್ರೋಶ ವ್ಯಕ್ತಪಡಿಸಿದೆ. 

ಬಂಧಿತ ಯುವಕನನ್ನು ಕೋಟೇಶ್ವರ ಮೂಲದ ಹರೀಶ್ ಬಂಗೇರ ಎಂದು ಹೇಳಲಾಗುತ್ತಿದೆ. ದಮಾಮ್'ನ ಅಲ್ ಹಾಸ್ ಗಲ್ಫ್ ಕಾರ್ಟೂನ್ ಫ್ಯಾಕ್ಟರಿ ಕಂಪನಿಯಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ ಹರೀಶ್ ತನ್ನ ಸಾಮಾಜಿಕ ಕಾತೆಯಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ ಹಾಗೂ ಪೌರತ್ವ ಕಾಯ್ದೆ ಬರ ಪೋಸ್ಟ್ ಬರೆದಿದ್ದರು. ಈ ಬರಹ ಬಗ್ಗೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದರು. ಬಳಿಕ ಎಚ್ಚೆತ್ತುಕೊಂಡಿದ್ದ ಹರೀಶ್ ಪೋಸ್ಟ್ ಡಿಲೀಟ್ ಮಾಡಿದ್ದರು. ಅಲ್ಲದೆ, ವಿಡಿಯೋ ಮೂಲಕ ಕ್ಷಮೆ ಕೂಡ ಕೇಳಿದ್ದರು. 

ಆದರೆ, ಅಷ್ಟರಲ್ಲಾಗದಲೇ ಹರೀಶ್ ಹಾಕಿದ್ದ ಪೋಸ್ಟ್ ವೈರಲ್ ಆಗಿತ್ತು. ಕೆಲವರು ಇದರ ಸ್ಕ್ರೀನ್ ಶಾಟ್ ತೆಗೆದು ವಿರೋಧ ವ್ಯಕ್ತಪಡಿಸಿದ್ದರು. ಇದೀಗ ಸೌದಿ ಪೊಲೀಸರು ಹರೀಶ್ ಅವರನ್ನು ಬಂಧನಕ್ಕೊಳಪಡಿಸಿದ್ದು, ಯುವಕನನ್ನು ಬಿಡುಗಡೆ ಮಾಡುವಂತೆ ಉಡುಪಿಯ ಹಲವರು ಆಗ್ರಹಿಸುತ್ತಿದ್ದಾರೆ. 

ಮಂಗಳೂರಿನಲ್ಲಿರುವ ಕೆಲ ಮುಸ್ಲಿಂ ಯುವಕರು ಸೌದಿಯಲ್ಲಿರುವ ತಮ್ಮ ಗೆಳೆಯರನ್ನು ಸಂಪರ್ಕಿಸಿದ್ದು, ಯುವಕನ ಬಿಡುಗಡೆಗೆ ಸಹಾಯ ಮಾಡುವಂತೆ ಕೇಳಿಕೊಂಡಿದ್ದಾರೆ. ಕೆಲವರು ಸಾಮಾಜಿಕ ಜಾಲತಾಣದಲ್ಲಿಯೇ ವಿದೇಶಾಂಗ ಕಚೇರಿಗೆ ಮನವಿ ಪತ್ರಗಳನ್ನು ಕಳುಹಿಸಿದ್ದು, ಯುವಕನ ಬಿಡುಗಡೆಗೆ ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. 

ಪೋಸ್ಟ್ ವೈರಲ್ ಆದ ಬಳಿಕ ಹರೀಶ್ ತನ್ನ ಖಾತೆಯನ್ನು ಡಿಯಾಕ್ಟಿವೇಟೆಡ್ ಮಾಡಿದ್ದ. ಆದರೆ, ಯಾರೋ ಕಿಡಿಗೇಡಿಗಳು ಮತ್ತೆ ಹರೀಶ್ ಹೆಸರಿನಲ್ಲಿ ಹೊಸ ಖಾತೆಯನ್ನು ತೆರೆದು, ದ್ವೇಷಪೂರಿತ ಪೋಸ್ಟ್ ಗಳನ್ನು ಹಾಕಿದ್ದಾರೆ. ಹರೀಶ್ ಫೋಟೋ ಬಳಸಿ ನಕಲಿ ಖಾತೆಯನ್ನು ತೆರೆಯಲಾಗಿದೆ. ಹರೀಶ್ ನಿಜವಾದ ಫೇಸ್ ಬುಕ್ ಖಾತೆಯಲ್ಲಿ ಕುಟುಂಬದ ಪೋಟೋವನ್ನು ಹಾಕಿದ್ದಾರೆ. ನಕಲಿ ಖಾತೆಯಲ್ಲಿ ಹರೀಶ್ ಫೋಟೋ ಇದೆ. ಈಗಾಗಲೇ ನಾವು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ. ಮತ್ತೊಂದು ದೂರನ್ನು ಉಡುಪಿ ಅಪರಾಧ ವಿಭಾಗ ಕೇಂದ್ರದಲ್ಲೂ ದಾಖಲಿಸಿದ್ದೇವೆಂದು ಕುಟುಂಬಸ್ಥರು ತಿಳಿಸಿದ್ದಾರೆ. 

ಹರೀಶ್ ಅವರು 9 ವರ್ಷದ ಹಿಂದೆ ಸುಮನಾ ಎಂಬುವವರೊಂದಿಗೆ ವಿವಾಹವಾಗಿದ್ದು, ಇಬ್ಬರು ಪುತ್ರಿಯರಿದ್ದಾರೆ. ಪ್ರಸ್ತುತ ಹರೀಫ್ ಗಲ್ಫ್ ನಲ್ಲಿರುವ ಕಾರ್ಖಾನೆಯೊಂದರಲ್ಲಿ ಕಾರ್ಯನಿರ್ವಹಿಸಿತ್ತಾರೆ. ಕೋಟೇಶ್ವರದ ಬಿಜಾಡಿಯಲ್ಲಿ ಹರೀಶ್ ಕುಟುಂಬ ಬಾಡಿಗೆಯಲ್ಲಿದೆ ಎಂದು ತಿಲಿದುಬಂದಿದೆ. 

ಬಂಧನದ ಬಳಿಕ ಹರೀಶ್ ಅವರನ್ನು ಕಂಪನಿ ಕೆಲಸದಿಂದ ತೆಗೆದುಹಾಕಿದೆ. ಇದೀಗ ನಾವು ಸಂಕಷ್ಟದಲ್ಲಿದ್ದೇವೆ. ಕಳೆದ ಮೂರು ದಿನಗಳಿಂದ ಹರೀಶ್ ಜೊತೆಗೆ ಮಾತನಾಡಿಲ್ಲ. ಉಡುಪಿಯ ಸ್ಥಳೀಯ ಸಂಘಟನೆಗಳಿಂದ ಸಹಾಯ ಕೇಳುತ್ತಿದ್ದೇವೆ. ಹರೀಶ್ ಬಿಡುಗಡೆಗಾಗಿ ದೇವರ ಮೊರೆ ಕೂಡ ಹೋಗಿದ್ದೇವೆಂದು ಕುಟುಂಬ ಸದಸ್ಯರು ಹೇಳಿದ್ದಾರೆ. 

SCROLL FOR NEXT