ರಾಜ್ಯ

10 ವರ್ಷ ಕಳೆಯಿತು, ಮಹಾದಾಯಿ ಅಧಿಸೂಚನೆಗೆ ಇನ್ನೆಷ್ಟು ವರ್ಷ ಕಾಯಬೇಕು!

Srinivasamurthy VN

ಬಾಗಲಕೋಟೆ: ಮಲಪ್ರಭಾ ನದಿಗೆ ಮಹಾದಾಯಿ ನದಿ ನೀರು ಜೋಡಣೆಗಾಗಿನ ಹೋರಾಟಕ್ಕೆ ಅರ್ಧ ಶತಮಾನ ಕಳೆದರೂ ನೀರಿಗಾಗಿನ ಕಾಯುವಿಕೆ ತಪ್ಪುತ್ತಿಲ್ಲ. ಇನ್ನೆನು ಎಲ್ಲವೂ ಮುಗಿದು ಮಹಾದಾಯಿ ನದಿ ನೀರು ಮಲಪ್ರಭೆಯನ್ನು ಸೇರುವ ಸಮಯ ಬಂದಿದೆ ಎನ್ನುತ್ತಿರುವಾಗಲೇ ಕೇಂದ್ರ ಸರ್ಕಾರ ಅಧಿಸೂಚನೆ ನೆಪ ಮುಂದೆ ಮಾಡಿದೆ.

ಬೆಳಗಾವಿ ವಿಭಾಗದ ಬಾಗಲಕೋಟೆ, ಗದಗ, ಧಾರವಾಡ ಮತ್ತು ಬೆಳಗಾವಿ ಜಿಲ್ಲೆಯ ಜನತೆಯ ಕುಡಿವ ನೀರಿನ ಸಮಸ್ಯೆಗೆ ಮಲಪ್ರಭೆಗೆ ಮಹಾದಾಯಿ ನದಿ ಜೋಡಣೆಯೊಂದೆ ಇರುವ ಶಾಶ್ವತ ಮಾರ್ಗ ಎನ್ನುವುದನ್ನು ಮನಗಂಡು ಗುಳೇದಗುಡ್ಡದ ಶಾಸಕರಾಗಿದ್ದ ದಿ.ಬಿ.ಎಂ. ಹೊರಕೇರಿ ಅವರು ಎಪ್ಪತ್ತರ ದಶಕದಲ್ಲೇ ಮಹಾದಾಯಿಗಾಗಿ ಹೋರಾಟ ಆರಂಭಿಸಿದ್ದರು. ಅಂದಿನಿಂದ ಇಂದಿನವರೆಗೂ ಭಾವನಾತ್ಮಕ, ಕಾನೂನಾತ್ಮಕ ಹೋರಾಟಗಳು ನಿರಂತರವಾಗಿ ನಡೆದುಕೊಂಡು ಬಂದ ಪರಿಣಾಮ ಕೇಂದ್ರ ಸರ್ಕಾರ ಅಂತಿಮವಾಗಿ ಮಹಾದಾಯಿ ನ್ಯಾಯಾಧೀಕರಣ ಸಮಿತಿ ರಚಿಸಿ, ಸಮಿತಿಯಿಂದ ಅಂತಿಮ ವರದಿ ಪಡೆದುಕೊಂಡಿದೆ. ಈ ವರದಿ ಕುರಿತು ಅದಿಸೂಚನೆ ಹೊರಡಿಸುವವರೆಗೂ ಕುಡಿವ ನೀರಿನ ಉದ್ದೇಶಕ್ಕಾಗಿ ಹಂಚಿಕೆ ಆಗಿರುವ ಮಹಾದಾಯಿ ನೀರನ್ನು ಬಳಸುವಂತಿಲ್ಲ ಎನ್ನುವ ಷರತ್ತು ವಿಧಿಸಿದೆ. ಪರಿಣಾಮವಾಗಿ ಮಹಾದಾಯಿ ಮಲಪ್ರಭೆಗೆ ಕೂಡುವುದು ಇನ್ನೂ ಎಷ್ಟು ವರ್ಷ ಹಿಡಿಯಲಿದೆ ಎನ್ನುವ ಚಿಂತೆ ಮಹಾದಾಯಿ ಹೋರಾಟಗಾರರನ್ನು ಕಾಡಲಾರಂಭಿಸಿದೆ.

ಮಹಾದಾಯಿ ನ್ಯಾಯಧೀಕರಣ ವರದಿ ಕುರಿತಂತೆ ಕೇಂದ್ರ ಸರ್ಕಾರ ಯಾವಾಗ ಅಧಿಸೂಚನೆ ಹೊರಡಿಸುತ್ತದೆ ಎನ್ನುವುದನ್ನು ಹೇಳಲಿಕ್ಕಾಗದು. ಈಗಾಗಲೇ ಕೇಂದ್ರ ಸರ್ಕಾರ ಮಹಾದಾಯಿ ನ್ಯಾಯಾಧೀಕರಣ ಹಂಚಿಕೆ ಮಾಡಿರುವ ನೀರಿನ ಪ್ರಮಾಣದ ಕುರಿತು ಗೋವಾ, ಕರ್ನಾಟಕ ಮತ್ತು ಮಹಾರಾಷ್ಟç ಸರ್ಕಾರಗಳು ತಕರಾರು ಅಜಿ ಸಲ್ಲಿಸಿವೆ. ಇವುಗಳ ಕುರಿತು ವಿಚಾರಣೆ ಮುಗಿಯದ ಹೊರತು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸುವ ಸಾಧ್ಯತೆಗಳು ತೀರಾ ಕಡಿಮೆ. ಹಾಗಾಗಿ ಮೇಲ್ಮನವಿ ವಿಚಾರಣೆ ಮುಗಿಯುವವರೆಗೂ ಮಹಾದಾಯಿ ನೀರಿಗಾಗಿ ಕಾಯಲೇ ಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಬಹುದು.

ಈಗಾಗಲೇ ಕೃಷ್ಣಾ ನದಿ ನೀರು ಹಂಚಿಕೆ ಕುರಿತಂತೆ ಬ್ರಿಜೇಶ್ ಕುಮಾರ ಅವರು ಕೃಷ್ಣಾ ನ್ಯಾಯಾಧೀಕರಣ -೨ರ ವರದಿಯನ್ನು ಕೇಂದ್ರಕ್ಕೆ ಸಲ್ಲಿಸಿ ಹತ್ತು ವರ್ಷಗಳೇ ಕಳೆಯುತ್ತ ಬಂದರೂ ಇದುವರೆಗೂ ಕೇಂದ್ರ ಸರ್ಕಾರ ನ್ಯಾಯಾಧೀಕರಣ ವರದಿ ಕುರಿತು ಅಧಿಸೂಚನೆ ಹೊರಡಿಸಿಲ್ಲ. ಅಧಿಸೂಚನೆ ಹೊರಡಿಸದ ಹೊರತು ಹಂಚಿಕೆ ನೀರನ್ನು ಬಳಸುವ ಹಾಗಿಲ್ಲ. ಪರಿಣಾಮವಾಗಿ ಆಲಮಟ್ಟಿ ಜಲಾಶಯದ ಎತ್ತರವನ್ನು ೫೧೯.೬೦ ಮೀಟರ್‌ನಿಂದ ೫೨೪.೫೪೨ ಕ್ಕೆ ಹೆಚ್ಚಿಸಿ, ಹಂಚಿಕೆ ಆಗಿರುವ ನೀರನ್ನು ಬಳಕೆ ಮಾಡಿಕೊಳ್ಳಲು ರಾಜ್ಯ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಅಧಿಸೂಚನೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ವರ್ಷದಿಂದ ವರ್ಷಕ್ಕೆ ಕೃಷ್ಣಾ ಮೇಲ್ದಂಡೆ ಯೋಜನಾ ಕಾಮಗಾರಿಗಳ ವೆಚ್ಚ ಹಿಗ್ಗುತ್ತಲೇ ಇದೆ. ೨೦೧೩ ರಲ್ಲಿ ೧೭೨೦೦ ಕೋಟಿ ರೂ. ಇದ್ದ ಯೋಜನೆ ವೆಚ್ಚ ಇಂದು ೧ ಲಕ್ಷ ಕೋಟಿ ರೂ.ಗೂ ಹೆಚ್ಚಾಗಿದೆ. ಯೋಜನಾ ವೆಚ್ಚ ಹೆಚ್ಚಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದಿಂದ ಆಲಮಟ್ಟಿ ಯೋಜನೆ ಪೂರ್ಣಗೊಳಿಸುವುದು ಅನುಮಾನ ಎನ್ನುವಂತಾಗಿದೆ.

ಕೇAದ್ರ ಸರ್ಕಾರ ಕೃಷ್ಣಾ ನ್ಯಾಯಾದೀಕರಣ ಸಮಿತಿ ವರದಿ ಸಲ್ಲಿಸಿದಾಗಲೇ ಯಾವುದೇ ವಿಳಂಬವಿಲ್ಲದೆ ಅಧಿಸೂಚನೆ ಹೊರಡಿಸಿದ್ದಲ್ಲಿ ಯುಕೆಪಿ ಕಾಮಗಾರಿಗಳು ಪೂರ್ಣಗೊಳ್ಳುತ್ತಿದ್ದವು. ರಾಜ್ಯದ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ ಪರಿಣಾಮ ಅಧಿಸೂಚನೆ ತೀರಾ ವಿಳಂಬಗೊಂಡು ಅನಗತ್ಯವಾಗಿ ಯೋಜನಾ ವೆಚ್ಚ ಹೆಚ್ಚುತ್ತಿದೆ. ಇದನ್ನು ಮನಗಂಡವರು ಈಗಾಗಲೇ ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ರೂಪಿಸಬೇಕು ಎನ್ನುವ ಮಾತುಗಳು ಆಡಿರುವುದು ಗಮನಾರ್ಹ. ಏತನ್ಮಧ್ಯೆ ಸರ್ಕಾರ ಮುಂದಿನ ಮೂರುವರೆ ವರ್ಷದಲ್ಲಿ ಯಕೆಪಿಯ ಎಲ್ಲ ನೀರಾವರಿ ಯೋಜನೆಗಳಿಗೆ ಬೇಕಾದ ಭೂಸ್ವಾದೀನ, ಪುನರ್ವಸತಿ, ಪುನರ್ ನಿರ್ಮಾಣ ಕಾರ್ಯ ಪೂರ್ಣಗೊಳಿಸುವ ಭರವಸೆ ನೀಡುತ್ತಿದೆ. ಸದ್ಯದ ಯೋಜನಾ ವೆಚ್ಚ ಗಮನಿಸಿದ ಯಾರಿಗೆ ಆಗಲಿ ಸರ್ಕಾರದ ಭರವಸೆ ಕನ್ನಡಿಯೊಳಗಿನ ಗಂಟಿನಂತೆ ಕಾಣಿಸಲಾರಂಭಿಸಿದಲ್ಲಿ ಅಚ್ಚರಿ ಪಡಬೇಕಿಲ್ಲ. ಮಲಪ್ರಭೆಗೆ ಮಹಾದಾಯಿ ನೀರು ತರುವ ಯೋಜನೆಯೂ ಎಲ್ಲಿ ಕೃಷ್ಣಾ ನದಿ ನೀರು ಬಳಕೆಯಂತೆ ಆಗುತ್ತದೋ ಎನ್ನುವ ಆತಂಕ ಮಹಾದಾಯಿ ಹೋರಾಟಗಾರರನ್ನು ಕಾಡಲಾರಂಭಿಸಿದೆ.

- ವಿಠ್ಠಲ ಆರ್. ಬಲಕುಂದಿ

SCROLL FOR NEXT