ರಾಜ್ಯ

ಚಾರ್ಮಾಡಿ ಘಾಟ್ ರಸ್ತೆ ದುರಸ್ತಿ: ಭಾರಿ ವಾಹನಗಳಿಗೆ ನಿಷೇಧ; ಲಘು ವಾಹನಗಳ ಸಂಚಾರ ಆರಂಭ

Shilpa D

ಮಂಗಳೂರು:  ಚಾರ್ಮಾಡಿ ಘಾಟ್ ರಸ್ತೆ ದುರಸ್ತಿ  ಹಿನ್ನೆಲೆಯಲ್ಲಿ ಇಂದಿನಿಂದ ಭಾರಿ  ವಾಹನಗಳ ಸಂಚಾರ ನಿಷೇಧ ಮಾಡಲಾಗಿದೆ.

ಆದರೆ  ಮಿನಿ ವಾಹನಗಳ ಸಂಚಾರಕ್ಕೆ ಯಾವುದೆ ತೊಂದರೆಯಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಹೇಳಿದ್ದಾರೆ.  

ಕಾರು, ಮಿನಿ ಟೆಂಪೋ ಹಾಗೂ ಮಿನಿ ಕೆ.ಎಸ್.ಆರ್.ಟಿ.ಸಿ ಬಸ್ಗಳಿಗೆ ಮಾತ್ರ ಈ ರಸ್ತೆಯಲ್ಲಿ ಸಂಚರಿಸುವ ಅವಕಾಶ ಕಲ್ಪಿಸಲಾಗಿದೆ. ಭಾರಿ  ವಾಹನಗಳಾದ ಟ್ಯಾಂಕರ್, ರಾಜಹಂಸ ಬಸ್ ಸೇರಿದಂತೆ ಇತರೆ ವಾಹನಗಳ ಸಂಚಾರ ನಿಷೇಧ ಮಾಡಲಾಗಿದ್ದು  ಮುಂದಿನ ಆದೇಶದವರೆಗೂ ಈ ವ್ಯವಸ್ಥೆ ಜಾರಿಯಲ್ಲಿದೆ.

ಮುಂದಿನ ಆದೇಶದವರೆಗೂ ಪರ್ಯಾಯ ರಸ್ತೆ ಮೂಲಕ ತೆರಳಲು ಪ್ರಯಾಣಿಕರಿಗೆ ಸೂಚನೆ ನೀಡಲಾಗಿದೆ.
ಕಾರ್ಕಳ-ಸಂಸೆ-ಕುದುರೆಮುಖ ರಸ್ತೆ ಮತ್ತು ಶಿರಾಡಿ ರಸ್ತೆಗ ಮೂಲಕ ಪ್ರಯಾಣಿಕರು ತೆರಳಲು ಅವಕಾಶ ನೀಡಲಾಗಿದೆ.

ಚಾರ್ಮಾಡಿ ಘಾಟ್ ಮಂಗಳೂರು-ಕಡೂರು ರಾಷ್ಟ್ರೀಯ ಹೆದ್ದಾರಿಯಲ್ಲಿದೆ. ಈ ವರ್ಷ ಮಲೆನಾಡು ಪ್ರದೇಶದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಚಾರ್ಮಾಡಿ ಘಾಟಿನಲ್ಲಿ ಪದೇ ಪದೇ ಭೂ ಕುಸಿತ ಉಂಟಾಗಿತ್ತು. 

ಹೀಗಾಗಿ ಆಗಸ್ಟ್ ತಿಂಗಳಿಂದ  ವಾಹನ ಸಂಚಾರ ಬಂದ್ ಮಾಡಲಾಗಿತ್ತು. ಇದೀಗ ಸಾರ್ವಜನಿಕರ ಹಿತದೃಷ್ಟಿಯಿಂದ ಇಂದಿನಿಂದ ಮಿನಿ ಲಘು ವಾಹನಗಳ ಸಂಚಾರ ಆರಂಭಕ್ಕೆ  ಅವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಆದೇಶ ಹೊರಡಿಸಿದ್ದಾರೆ.

SCROLL FOR NEXT