ರಾಜ್ಯ

ಪೇಜಾವರ ಶ್ರೀಗಳ ಆರೋಗ್ಯ ಸ್ಥಿತಿ ಗಂಬೀರ: ಮಠದಲ್ಲೇ ಚಿಕಿತ್ಸೆ ಆರಂಭ, ಉಡುಪಿಯಲ್ಲೇ ಉಳಿದ ಸಿಎಂ

Manjula VN

ಉಡುಪಿ: ನ್ಯೂಮೋನಿಯಾದಿಂದಾಗಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿರುವ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳ ಆರೋಗ್ಯ ಮತ್ತಷ್ಟು ಬಿಗಡಾಯಿಸಿದ್ದು, ಮೆದುಳು ಕಾರ್ಯ ಕುಂಠಿತಗೊಂಡಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. 

ಶ್ರೀಗಳ ಆರೋಗ್ಯ ಸುಧಾರಣೆಗೆ ವಿಶೇಷ ತಜ್ಞ ವೈದ್ಯರ ತಂಡ ಸತತವಾಗಿ ಪ್ರಯತ್ನಿಸುತ್ತಿದ್ದು ಮುಂದಿನ 24 ಗಂಟೆಗಳ ಕಾಲ ತೀವ್ರ ನಿಗಾವಹಿಸಲಿದ್ದಾರೆ. 

ಈ ಮಧ್ಯೆ ವಿಶ್ವೇಶ್ವತೀರ್ಥರ ಆರೋಗ್ಯದಲ್ಲಿ ಚೇತರಿಕೆಯ ಲಕ್ಷಣಗಳು ಕಾಣದ ಹಿನ್ನೆಲೆಯಲ್ಲಿ ಶ್ರೀಗಳನ್ನು ಉಡುಪಿಯ ಪೇಜಾವರ ಮಠಕ್ಕೆ ಸ್ಥಳಾಂತರ ಮಾಡಲಾಗಿದೆ. ಶ್ರೀಗಳ ಆಸೆಯೂ ಇದೇ ಆಗಿತ್ತು ಎಂದು ಕಿರಿತ ಶ್ರೀಗಳು ಮಾಹಿತಿ ನೀಡಿದ್ದಾರೆ. 

ಇನ್ನು ಶ್ರೀಗಳ ಆರೋಗ್ಯ ವಿಚಾರಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಉಡುಪಿಗೆ ದೌಡಾಯಿಸಿದ್ದು, ಇಂದೂ ಕೂಡ ಉಡುಪಿಯಲ್ಲೇ ಇರುವುದಾಗಿ ತಿಳಿಸಿದ್ದಾರೆ. 

8 ದಿನಗಳ ಹಿಂದಷ್ಟೇ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಪೇಜಾವರ ಶ್ರೀಗಳು ಡಿ.20ರಂದು ಮುಂಜಾನೆ 5ಕ್ಕೆ ಮಣಿಪಾಲ ಆಸ್ಪತ್ರೆಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ದಾಖಲಾಗಿದ್ದರು. ಅಂದಿನಿಂದ ಈವರೆಗೆ ಅವರಿಗೆ ಪ್ರಜ್ಞೆ ಮರಳಿ ಬಂದಿಲ್ಲ. ನ್ಯೂಮೋನಿಯಾ ನಿಯಂತ್ರಣಕ್ಕೆ ಬಂದರೂ, ದಿನದಿಂದ ದಿನಕ್ಕೆ ಅವರ ಆರೋಗ್ಯ ಸ್ಥಿತಿ ಹದಗೆಟ್ಟು, ಅವರನ್ನು ಪ್ರಜ್ಞೆ ಮರಳಿಸುವ ಪ್ರಯತ್ನಗಳೆಲ್ಲವೂ ವಿಫಲಗೊಂಡಿವೆ. ಶುಕ್ರವಾರ ಆರೋಗ್ಯ ತೀವ್ರ ಕುಸಿದಿದ್ದು, ಈಗ ಅವರ ಮೆದುಳು ಕಾರ್ಯ ಕುಂಠಿತಗೊಂಡಿದೆ. 

SCROLL FOR NEXT