ರಾಜ್ಯ

ದಿಢೀರ್ ಭಾರಿ ಮಳೆಗೆ ತತ್ತರಿಸಿದ ಸಿಲಿಕಾನ್ ಸಿಟಿ, ದಶಕದಲ್ಲೇ ದಾಖಲೆ ಮಳೆ

Srinivasamurthy VN
ಬೆಂಗಳೂರು: ಶನಿವಾರ ಸಂಜೆ ದಿಢೀರನೆ ಸುರಿದ ಗುಡುಗು ಸಹಿತ ಧಾರಾಕಾರ ಮಳೆಗೆ ಸಿಲಿಕಾನ್ ಸಿಟಿ ಬೆಂಗಳೂರು ತತ್ತರಿಸಿ ಹೋಗಿದ್ದು, ಕಳೆದ 10 ವರ್ಷಗಳಲ್ಲೇ ನಗರದಲ್ಲಿ ಸುರಿದ ಭಾರಿ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ವಾಯುಭಾರ ಕುಸಿತದಿಂದ ಅಕಾಲಿಕವಾಗಿ ಸುರಿದ ಮಳೆಯಿಂದಾಗಿ ನಗರದಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿತ್ತು. ಬೆಂಗಳೂರಿನೆಲ್ಲೆಡೆ ಮಳೆ ಸುರಿದಿದ್ದು, ಎರಡು ಕಡೆ ಮರದ ಕೊಂಬೆಗಳು ಮುರಿದುಬಿದ್ದಿವೆ.  ನಿಮ್ಹಾನ್ಸ್ ಬಳಿ ರಸ್ತೆಗೆ ಬಿದ್ದ ಮರದ ಕೊಂಬೆಯನ್ನು ಕೂಡಲೇ ಬಿಬಿಎಂಪಿ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ತೆರವುಗೊಳಿಸಿದ್ದಾರೆ. ರಾಜಾಜಿನಗರ ಎಂ ಇ ಪಾಲಿಟೆಕ್ನಿಕ್ ಕಾಲೇಜಿನ ಬಳಿ ಮರದ ಕೊಂಬೆ ರಸ್ತೆಗೆ ಬಿದ್ದಿತ್ತು, ಅದನ್ನೂ ಕೂಡಲೇ ತೆರವುಕೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಇದನ್ನು ಹೊರತುಪಡಿಸಿ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ಯಾವುದೇ ಅವಘಡಗಳಾದರೂ ಕೂಡಲೇ ಸ್ಪಂದಿಸುವಂತೆ ಬಿಬಿಎಂಪಿ‌ ಅಧಿಕಾರಿ ಮತ್ತು ಸಿಬ್ಬಂದಿಗೆ ಮೇಯರ್​ ಮತ್ತು ಕಮಿಷನರ್ ಆದೇಶಿಸಿದ್ದಾರೆ.
ದಶಕದಲ್ಲೇ ದಾಖಲೆಯ ಗರಿಷ್ಠ ಮಳೆ
ಇನ್ನು ಹವಾಮಾನ ಇಲಾಖೆ ಮಾಹಿತಿ ನೀಡಿರುವಂತೆ ಕಳೆದ 10 ವರ್ಷಗಳಲ್ಲೇ ಬೆಂಗಳೂರಿನಲ್ಲಿ ಫೆಬ್ರವರಿ ತಿಂಗಳಲ್ಲಿ ಸುರಿದ ಭಾರಿ ಪ್ರಮಾಣದ ಮಳೆಯಾಗಿದೆ ಎಂದು ತಿಳಿದುಬಂದಿದೆ. ನಿನ್ನೆ ಸುಮಾರು 2 ಗಂಟೆಗೂ ಅಧಿಕ ಕಾಲ ಮಳೆ ಸುರಿದಿದ್ದು, ಒಟ್ಟು ಸುಮಾರು 58 ಮಿಲಿ ಮೀಟರ್ ಮಳೆಯಾಗಿದೆ. ಇದು ಕಳೆದ 10 ವರ್ಷಗಳಲ್ಲೇ ಗರಿಷ್ಠ ಪ್ರಮಾಣದ ಫೆಬ್ರವರಿ ಮಳೆಯಾಗಿದೆ. ಇದಕ್ಕೂ ಮೊದಲು 2017ರಲ್ಲಿ ಫೆಬ್ರವರಿ 25ರಂದು 35.5 ಮಿಲಿ ಮೀಟರ್ ಮಳೆಯಾಗಿತ್ತು. ಇದು ಈ ವರೆಗಿನ ಫೆಬ್ರವರಿ ತಿಂಗಳ ಗರಿಷ್ಠ ಮಳೆ ಪ್ರಮಾಣವಾಗಿ ದಾಖಲಾಗಿತ್ತು.
SCROLL FOR NEXT