ಮಂಗಳೂರು: ಗೂಗಲ್ ಪೇಯಿಂದ ಪಾವತಿ ಮಾಡುವಾಗ ರೀಫಂಡ್ ಆಗ ಬೇಕಿದ್ದ ಹಣ ರೀಫಂಡ್ ಆಗಿಲ್ಲ ಎಂದು ಕಸ್ಟಮರ್ ಕೇರ್ ಗೆ ಕರೆ ಮಾಡಿದರೆ ಅವರೇ ವ್ಯಕ್ತಿಯ 2.7 ಲಕ್ಷ ರೂ ಎಗರಿಸಿರುವ ಘಟನೆ ನಡೆದಿದೆ.
ಹೌದು..ದಿನಕಳೆದಂತೆ ಸೈಬರ್ ಅಪರಾಧಗಳ ಪಟ್ಟಿ ಬೆಳೆಯುತ್ತಾ ಹೋಗುತ್ತಿದ್ದು, ತಂತ್ರಜ್ಞಾನ ಬೆಳೆದಂತೆ ಅದರ ದುರುಪಯೋಗ ಕೂಡ ಬೆಳೆಯುತ್ತಾ ಸಾಗಿದೆ. ನಿನ್ನೆಯಷ್ಟೇ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಅವರ ಎಸ್ ಬಿಐ ಖಾತೆಯಿಂದ ಸುಮಾರು 20 ಲಕ್ಷ ರೂ ಕಳವಾಗಿದೆ ಎಂಬ ಸುದ್ದಿ ಕೇಳಿಬಂದಿತ್ತು. ಇದರ ನಡುವೆ ಇಂತಹುದೇ ಮತ್ತೊಂದು ಘಟನೆ ನಡೆದಿದ್ದು, ಬ್ಯಾಂಕ್ ಖಾತೆಯಲ್ಲಿದ್ದ ಸುಮಾರು 2.7 ಲಕ್ಷ ರೂಗಳನ್ನು ಗೂಗಲ್ ಪೇ ಮೂಲಕ ಕಳ್ಳರು ಕದ್ದಿದ್ದಾರೆ.
ಕಸ್ಟಮರ್ ಕೇರ್ ಗೆ ಕರೆ ಮಾಡಿದ್ದೇ ಬಂತು, ಖಾತೆಯಲ್ಲಿದ್ದ 2.7 ಲಕ್ಷ ರೂ ಕಳವು
ನಿನ್ನೆ ಮಂಗಳೂರಿನ ಹೊಯಿಗೆ ಬಜಾರ್ ನಿವಾಸಿಯಾದ 29 ವರ್ಷದ ಕುಂದನ್ ಕುಮಾರ್ ಅವರು, ತನ್ನ ಖಾತೆಯಿಂದ ಪಾವತಿಯಾಗಿದ್ದ ಹಣ ವ್ಯಕ್ತಿಗೆ ತಲುಪಿಲ್ಲ ಎಂದು ಗೂಗಲ್ ಪೇ ಕಸ್ಟಮರ್ ಕೇರ್ ಎಂದು ತಪ್ಪಾದ ನಂಬರ್ ಗೆ ಕರೆ ಮಾಡಿದ್ದಾನೆ. ಈ ವೇಳೆ ನಕಲಿ ಕಸ್ಟಮರ್ ಕೇರ್ ಸಿಬ್ಬಂದಿಗಳು ಅವರಿಂದ ಖಾತೆ ಸಂಖ್ಯೆ, ಕೋಡ್ ಪಡೆದುಕೊಂಡು 24 ಗಂಟೆಗಳೊಳಗೆ ಹಣ ಮರುಪಾವತಿಯಾಗುತ್ತದೆ ಎಂದು ಭರವಸ ನೀಡಿ ಕರೆ ಕಟ್ ಮಾಡಿದ್ದಾರೆ. ಆದರೆ ಮಾರನೆಯ ದಿನವೇ ಆತನಿಗೆ ಶಾಕ್ ಕಾದಿತ್ತು.
ಬೆಳಗ್ಗೆ ಎದ್ದು ಮೊಬೈಲ್ ನೋಡಿದರೆ ಆತನ ಖಾತೆಯಿಂದ 2.7 ಲಕ್ಷ ರೂ ಕಳವಾಗಿತ್ತು. ಈ ಬಗ್ಗೆ ಆಘಾತಗೊಂಡ ಕುಂದನ್ ಕುಮಾರ್ ಕೂಡಲೇ ತನ್ನ ಬ್ಯಾಂಕ್ ಸಿಬ್ಬಂದಿಗಳಿಗೆ ಮಾಹಿತಿ ನೀಡಿ ಬಳಿಕ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಕೆ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಸೈಬರ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.