ರಾಜ್ಯ

ಪುಲ್ವಾಮಾ ಉಗ್ರ ದಾಳಿ ಖಂಡಿಸಿ ಫೆ.19ಕ್ಕೆ ಕರ್ನಾಟಕ ಬಂದ್: ವಾಟಾಳ್ ನಾಗರಾಜ್

Raghavendra Adiga
ಬೆಂಗಳೂರು  ಪುಲ್ವಾಮಾದಲ್ಲಿ ಸೈನಿಕರ ಮೇಲಿನ ಉಗ್ರರ ದಾಳಿ ಖಂಡಿಸಿ ಹಾಗೂ ಬಲಿಷ್ಠ ಭಾರತ ನಿರ್ಮಾಣಕ್ಕಾಗಿ ಫೆ.19 ರಂದು ಕನ್ನಡ ಒಕ್ಕೂಟ ಕರ್ನಾಟಕ ಬಂದ್ ಗೆ ಕರೆ ನೀಡಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್, ಪಾಕಿಸ್ತಾನ ಹೇಡಿಯಂತೆ ಉಗ್ರ ಸಂಘಟನೆಗಳ ಮೂಲಕ ನಮ್ಮ ಸೈನಿಕರ ಮೇಲೆ ದಾಳಿ ಮಾಡಿ ಹತ್ಯೆಗೈದಿರುವುದು ಖಂಡನೀಯ. ಈ ಕೃತ್ಯದಿಂದ ಇಡೀ ದೇಶದ ಜನರಿಗೆ ನೋವುಂಟಾಗಿದೆ. ಈ ಕೃತ್ಯ ಭಾರತ ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದೆ ಎಂದರು.
ಶಾಂತಿಪ್ರಿಯ ರಾಷ್ಟ್ರ ಭಾರತದ ಮೇಲೆ ಈ ರೀತಿಯ ಹೇಡಿತನದ ದಾಳಿ ಸಹಿಸಲು ಸಾಧ್ಯವಿಲ್ಲ. ಇದರ ಪ್ರತೀಕಾರ ತೀರಿಸಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ದಿಟ್ಟ ಹೆಜ್ಜೆ ಇಡಬೇಕೆಂದು ಅವರು ಒತ್ತಾಯಿಸಿದರು.
ಭಾರತದ ಸೈನಿಕರ ಮೇಲೆ ನಡೆದ ಈ ದಾಳಿಯನ್ನು ಖಂಡಿಸಿ ವಿಶ್ವದ 40ಕ್ಕೂ ಹೆಚ್ಚು ರಾಷ್ಟ್ರಗಳು ಸಂದೇಶ ರವಾನಿಸಿವೆ. ಆದರೆ ನೆರೆಯ ಚೀನಾ ಹಾಗೂ ಗಲ್ಫ್ ರಾಷ್ಟ್ರಗಳು ಸುಮ್ಮನಿರುವುದನ್ನು ನೋಡಿದರೆ ಇವುಗಳು ಭಯೋತ್ಪಾದನೆಗೆ ಪರೋಕ್ಷವಾಗಿ ಬೆಂಬಲ ನೀಡುತ್ತಿವೆ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ ಎಂದು ಅವರು ಆರೋಪಿಸಿದರು.
ಕನ್ನಡ ಒಕ್ಕೂಟದ ವತಿಯಿಂದ ಫೆ. 19ರಂದು ಬೆಳಿಗ್ಗೆ ಟೌನ್ ಹಾಲ್ ನಿಂದ ಸ್ವಾತಂತ್ರ್ಯ ಉದ್ಯಾನವನದ ವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು. ಕಾರ್ಮಿಕ ಸಂಘಟನೆಗಳು, ಚಲನಚಿತ್ರ, ನಟ ನಿರ್ಮಾಪಕರು ಕೆ.ಎಸ್.ಆರ್.ಟಿ.ಸಿಯ ನಾಲ್ಕು ವಿಭಾಗಗಳು, ಬಿ.ಎಂ.ಟಿ.ಸಿ ಬಂದ್ ಗೆ ಬೆಂಬಲಿಸಲಿದ್ದು, ಅಂದು ಸಂಪೂರ್ಣ ಬಸ್ ಸಂಚಾರ ಸ್ಥಗಿತಗೊಳ್ಳಲಿದೆ. ಚಲನಚಿತ್ರ ಮಂದಿರಗಳು, ವಾಣಿಜ್ಯ ಸಂಕೀರ್ಣಗಳು, ಹೋಟೆಲ್ ಗಳು, ಶಾಲಾ ಕಾಲೇಜುಗಳು, ಪೆಟ್ರೋಲ್ ಬಂಕ್ ಗಳು ಸೇರಿದಂತೆ ಎಲ್ಲವೂ ಸ್ತಬ್ಧವಾಗಲಿದೆ ಎಂದು ತಿಳಿಸಿದರು
ಮಂಡ್ಯದ ಹುತಾತ್ಮ ಯೋಧ ಗುರು ಅವರಿಗೆ ಸರ್ಕಾರ ಮರಣೋತ್ತರ ಪ್ರಶಸ್ತಿ ನೀಡಬೇಕು, ಅವರ ಕುಟುಂಬದ ಸದಸ್ಯರಿಗೆ ಧನ ಸಹಾಯ ಮಾಡಬೇಕೆಂದು ಅವರು ಒತ್ತಾಯಿಸಿದರು.
SCROLL FOR NEXT