ಕುಣಿಗಲ್ ಪೊಲೀಸ್ ಠಾಣೆ ಮತ್ತು ಅಪಘಾತಕ್ಕೀಡಾದ ಕಾರು
ತುಮಕೂರು: ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಸಿಟಿ ರವಿ ಅವರ ವಿರುದ್ಧ ಎಫ್ ಐಆರ್ ದಾಖಲಾಗಿದೆ ಎಂದು ತಿಳಿದುಬಂದಿದೆ.
ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಊರ್ಕೇನ ಹಳ್ಳಿ ಸಮೀಪವಿರುವ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನಿನ್ನೆ ತಡರಾತ್ರಿ ಸಂಭವಿಸಿದ್ದ ಭೀಕರ ಅಪಘಾತದಲ್ಲಿ ಇಬ್ಬರು ಯುವಕರು ಸಾವನ್ನಪ್ಪಿದ್ದರು. ಈ ಪ್ರಕರಣಕ್ಕ ಸಂಬಂಧಿಸಿದಂತೆ ಇದೀಗ ಕುಣಿಗಲ್ ಪೊಲೀಸರು ಎಫ್ ಐಆರ್ ದಾಖಲು ಮಾಡಲಾಗಿದೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಸಿಟಿ ರವಿ ಮತ್ತು ಅವರ ಬೆಂಬಲಿಗರ ವಿರುದ್ಧ ಐಪಿಸಿ ಸೆಕ್ಷನ್ 279 (ಬೇಜವಾಬ್ದಾರಿ ವಾಹನ ಚಾಲನೆ), 377 (ವ್ಯಕ್ತಿಯ ಜೀವಕ್ಕೆ ಎರವಾಗುವುದು) ಮತ್ತು 304ಎ (ನಿರ್ಲಕ್ಷ್ಯದಿಂದ ವ್ಯಕ್ತಿಯ ಜೀವಕ್ಕೆ ಎರವಾಗುವುದು)ರ ಅಡಿಯಲ್ಲಿ ದೂರು ದಾಖಲಿಸಿಕೊಂಡು ಎಫ್ ಐಆರ್ ದಾಖಲಾಗಿದೆ.
ಕನಕಪುರ ತಾಲೂಕಿನ ಸೂರನಹಳ್ಳಿ ಗ್ರಾಮದ ಯುವಕರು ಕೊಲ್ಲೂರು, ಧರ್ಮಸ್ಥಳ ದೇವಾಲಯಗಳ ದರ್ಶನ ಮಾಡಿ ವಾಪಸ್ ತೆರಳುವಾಗ ಈ ಘಟನೆ ಸಂಭವಿಸಿದೆ. ಮಂಗಳೂರು ಕಡೆಯಿಂದ ಬಂದ ಸಿಟಿ ರವಿ ಅವರ ಫಾರ್ಚೂನರ್ ಕಾರು ರಸ್ತೆ ಬದಿ ಮೂತ್ರ ವಿಸರ್ಜನೆ ಮಾಡುತ್ತಿದ್ದ ಸುನಿಲ್ ಗೌಡ ಮತ್ತು ಶಶಿಕುಮಾರ್ ಎಂಬವರಿಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮುನಿರಾಜು, ಜಯಚಂದ್ರ, ಪುನೀತ್ ಹಾಗೂ ಮಂಜುನಾಥ್ ಎಂಬವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಕುಣಿಗಲ್ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ.
ಶಾಸಕ ಸಿಟಿ ರವಿ ವಿರುದ್ಧ ಸಂತ್ರಸ್ಥ ಕುಟುಂಬಸ್ಥರು, ಸ್ನೇಹಿತರ ಪ್ರತಿಭಟನೆ
ಇನ್ನು ಶಾಸಕ ಸಿಟಿ ರವಿ ಅವರ ವಿರುದ್ಧ ಮೃತರ ಕುಟುಂಬಸ್ಥರು ಹಾಗೂ ಸ್ನೇಹಿತರು ತೀವ್ರ ಪ್ರತಿಭಟನೆ ನಡೆಸುತ್ತಿದ್ದು, ಕೂಡಲೇ ಸಿಟಿ ರವಿ ಅವರು ಸ್ಥಳಕ್ಕಾಗಮಿಸಬೇಕು ಎಂದು ಆಗ್ರಹಿಸಿದ್ದಾರೆ.