ರಾಜ್ಯ

ಏರೋ ಇಂಡಿಯಾ 2019: ದುರಂತದ ಕಾರಣ ವೈಮಾನಿಕ ಪ್ರದರ್ಶನದಿಂದ ದೂರ ಉಳಿದ 'ಸೂರ್ಯ ಕಿರಣ್'!

Srinivasamurthy VN
ಬೆಂಗಳೂರು: ಯಲಹಂಕ ವಾಯು ನೆಲೆಯಲ್ಲಿ ನಿನ್ನೆ ಸಂಭವಿಸಿದ ಸೂರ್ಯಕಿರಣ್ ಲಘು ಯುದ್ಧ ವಿಮಾನ ದುರಂತದ ಬಳಿಕ ಆಘಾತಕ್ಕೊಳಗಾಗಿರುವ ಸೂರ್ಯ ಕಿರಣ್ ಲಘು ಯುದ್ಧ ವಿಮಾನ ತಂಡ ವೈಮಾನಿಕ ಪ್ರದರ್ಶನದಿಂದಲೇ ದೂರು ಉಳಿದಿದೆ.
ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಇಂದಿನಿಂದ 12ನೇ ಏರೋ ಇಂಡಿಯಾ 2019 ವೈಮಾನಿಕ ಪ್ರದರ್ಶನ ಆರಂಭವಾಗಿದ್ದು, ಈ ಪ್ರದರ್ಶನದಿಂದ ಸೂರ್ಯ ಕಿರಣ್ ಲಘು ಯುದ್ಧ ವಿಮಾನ ತಂಡದ ಪೈಲಟ್ ಗಳು ದೂರ ಉಳಿದಿದ್ದಾರೆ. ಯಲಹಂಕ ವಾಯುನೆಲೆಯ ಪ್ರಮುಖ ರನ್ ಪಕ್ಕದಲ್ಲೇ ಎಲ್ಲ ಸೂರ್ಯ ಕಿರಣ್ ಲಘು ಯುದ್ಧ ವಿಮಾನಗಳನ್ನು ಪಾರ್ಕ್ ಮಾಡಲಾಗಿದ್ದು, ಇಂದಿನ ಪ್ರದರ್ಶನದಲ್ಲಿ ತಂಡದ ಯಾವುದೇ ವಿಮಾನ ಮತ್ತು ಪೈಲಟ್ ಗಳು ಪಾಲ್ಗೊಳ್ಳುತ್ತಿಲ್ಲ ಎಂದು ತಿಳಿದುಬಂದಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಏರ್‌ ಮಾರ್ಷಲ್‌ ರಾಕೇಶ್‌ ಕುಮಾರ್‌ ಸಿಂಗ್‌ ಬಡೋರಿಯಾ ಅವರು,  'ಭಾರತೀಯ ವಾಯುಸೇನೆಯ ಸೂರ್ಯಕಿರಣ್‌ ಒಂಬತ್ತು ಜೆಟ್‌ ಟ್ರೈನರ್‌ ನೊಂದಿಗೆ ಪ್ರದರ್ಶನ ನೀಡುವ ಏಕೈಕ ತಂಡವಾಗಿದ್ದು, ನಿನ್ನೆಯ ದುರಂತದ ಬಳಿಕ ತಂಡ ವೈಮಾನಿಕ ಪ್ರದರ್ಶನ ನೀಡುವುದು ಅನುಮಾನವಾಗಿದೆ. ಇಂದು ಮಾತ್ರವಲ್ಲದೇ ಇಡೀ ವೈಮಾನಿಕ ಪ್ರದರ್ಶನದಲ್ಲೇ ಈ ತಂಡ ಪ್ರದರ್ಶನ ನೀಡುವುದು ಅನುಮಾನ ಎಂದು ಹೇಳಲಾಗುತ್ತಿದ್ದು, ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಮಾಹಿತಿ ನೀಡುತ್ತೇವೆ ಎಂದು ಹೇಳಿದ್ದಾರೆ.
ಇನ್ನು ವೈಮಾನಿಕ ಪ್ರದರ್ಶನದಲ್ಲಿ ಸೂರ್ಯ ಕಿರಣ್ ಯುದ್ಧ ವಿಮಾನಗಳ ಸ್ಟಂಟ್ ಗಳು ಹೆಚ್ಚು ಆಕರ್ಷಣೆಯಾಗಿದ್ದವು. ಪ್ರದರ್ಶನದ ಸಂದರ್ಭದಲ್ಲಿ ಈ ವಿಮಾನಗಳು 4ರಿಂದ 5 ಮೀ. ಅಂತರದಲ್ಲಿ ಹಾರಾಟ ನಡೆಸುತ್ತವೆ. ಮಿರರ್ ಇಮೇಜೇ ಫಾರ್ಮೇಷನ್ ಈ ತಂಡದ ಹೆಗ್ಗಳಿಕೆಯಾಗಿದ್ದು, ಮಂಗಳವಾರ ಇದೇ ಫಾರ್ಮೇಷನ್ ಮಾಡುವಾಗ ದುರಂತ ಸಂಭವಿಸಿರಬಹುದು. ಅವಘಡದ ಹಿನ್ನೆಲೆಯಲ್ಲಿ ಸೂರ್ಯಕಿರಣ್‌ ಮೊದಲ ದಿನ ಪ್ರದರ್ಶನದಿಂದ ದೂರ ಉಳಿಯಲಿದ್ದು, ಉಳಿದ ನಾಲ್ಕು ದಿನಗಳು ಪ್ರದರ್ಶನ ನೀಡುವುದು ಅನುಮಾನ. ಈ ಬಗ್ಗೆ ತಂಡದ ಜತೆ ಮಾತನಾಡಿದ ಬಳಿಕ ಇದು ಸ್ಪಷ್ಟವಾಗಲಿದೆ ಎಂದು ಬಡೋರಿಯಾ ಹೇಳಿದರು. 
ತನಿಖೆ ಮುಂದುವರೆದಿದೆ
ಮಿರರ್ ಇಮೇಜೇ ಫಾರ್ಮೇಷನ್ ಸೂರ್ಯಕಿರಣ್ ತಂಡದ ಹೆಗ್ಗಳಿಕೆಯಾಗಿದ್ದು. ಆಗಸದಲ್ಲಿ "ಮಿರರ್‌ ಇಮೇಜ್‌' ಚಿತ್ತಾರ ಮೂಡಿಸುವಾಗ ಈ ಅವಘಡ ಸಂಭವಿಸಿದೆಯೇ? ಪೈಲಟ್‌ ಗಳು ಈ ಫಾರ್ಮೇಷನ್‌ ಮಾಡುವುದರಲ್ಲಿ ವಿಫ‌ಲರಾದರೇ? ಹಕ್ಕಿ ಅಡ್ಡಿಯಾಯಿತೇ? ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿತಾ? ಇದೆಲ್ಲವೂ ತನಿಖೆಯಿಂದ ಹೊರಬರಬೇಕಿದೆ ಎಂದು ಬಡೋರಿಯಾ ಹೇಳಿದರು.
SCROLL FOR NEXT