ರಾಜ್ಯ

ಏರೋ ಇಂಡಿಯಾ ಕಾರ್ಗಿಚ್ಚು: ಆರೋಪ ತಳ್ಳಿಹಾಕಿದ ಎಚ್‍ಎಎಲ್‍

Lingaraj Badiger
ಬೆಂಗಳೂರು: ಯಲಹಂಕ ವಾಯುನೆಲೆಯಲ್ಲಿ 300ಕ್ಕೂ ಹೆಚ್ಚು ಕಾರುಗಳು ಭಸ್ಮವಾದ ಪ್ರಕರಣ ಅಗ್ನಿಶಾಮಕ ಇಲಾಖೆ ಮತ್ತು ಎಚ್‍ಎಎಲ್ ನಡುವೆ ಆರೋಪ, ಪ್ರತ್ಯಾರೋಪಕ್ಕೆ ಕಾರಣವಾಗಿದೆ.
ಫೆ. 20 ರಿಂದ 24ರ ವರೆಗೆ ಹಮ್ಮಿಕೊಂಡಿದ್ದ ಏರೋ ಇಂಡಿಯಾ-2019ರಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ ಎಂಬ ತನ್ನ ವಿರುದ್ಧದ ಆರೋಪವನ್ನು ಎಚ್‍ಎಎಲ್ ಬಲವಾಗಿ ನಿರಾಕರಿಸಿದೆ.
ಕಾರ್ಯಕ್ರಮ ಆಯೋಜಿಸುವ ಮುನ್ನ ಎಚ್‍ಎಎಲ್ ನಿರಾಕ್ಷೇಪಣಾ ಪತ್ರ ಪಡೆದುಕೊಂಡಿರಲಿಲ್ಲ.  ಹೀಗಾಗಿಯೇ ಯಲಹಂಕ ವಾಯುನೆಲೆ ಬಳಿಯ ವಾಹನ ನಿಲುಗಡೆ ಪ್ರದೇಶದಲ್ಲಿ ಭೀಕರ ಅಗ್ನಿ ಆಕಸ್ಮಿಕ ಸಂಭವಿಸಿ 300 ಕಾರುಗಳು ಭಸ್ಮವಾಗಲು ಕಾರಣವಾಯಿತು’ ಎಂಬ ಆರೋಪ ಕೇಳಿಬಂದಿದೆ.
ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಎಚ್‍ಎಎಲ್‍, “ನಿರಾಕ್ಷೇಪಣಾ ಪತ್ರ (ಎನ್‍ಒಸಿ) ಪಡೆದುಕೊಂಡಿಲ್ಲವೆಂಬ ಅಗ್ನಿಶಾಮಕ ಇಲಾಖೆಯ ಆರೋಪ ಹಾಗೂ 2019 ಫೆ. 19ರಂದು ನೋಟಿಸ್ ನೀಡಲಾಗಿದೆ ಎಂಬ ಹೇಳಿಕೆಯನ್ನು ನಾವು ಬಲವಾಗಿ ತಿರಸ್ಕರಿಸುತ್ತೇವೆ. ಎಚ್‍ಎಎಲ್‍ಗೆ ಯಾವುದೇ ನೋಟಿಸ್ ನೀಡಿಲ್ಲ. ಬದಲಿಗೆ ನಿರ್ದೇಶಕರು, ರಕ್ಷಣಾ ಸಚಿವಾಲಯಕ್ಕೆ ನೀಡಿದ ನೋಟಿಸ್ ಪ್ರತಿಯೊಂದನ್ನು ಕಳುಹಿಸಿಕೊಡಲಾಗಿದೆ. ಅದರಲ್ಲಿ ವೈಮಾನಿಕ ಪ್ರದರ್ಶನ ನಡೆಯುವ ವಾಯುನೆಲೆಯ ಜಾಗ, ತಾತ್ಕಾಲಿಕ ರಚನೆಗಳನ್ನಷ್ಟೆ ಉಲ್ಲೇಖಿಸಲಾಗಿದೆಯೇ ಹೊರತು, ವಾಹನ ನಿಲುಗಡೆ ಜಾಗದ ಬಗ್ಗೆ ಯಾವುದೇ ಅಂಶಗಳಿಲ್ಲ. ಜನರ ಗಮನವನ್ನು ಪಾರ್ಕಿಂಗ್ ಸ್ಥಳದಿಂದ ಏರ್ ಶೋ ನಡೆದ ಸ್ಥಳದತ್ತ ಸೆಳೆಯಲು ಅಗ್ನಿಶಾಮಕ ಇಲಾಖೆ ಯತ್ನಿಸಿದೆ’ ಎಂದ ಸ್ಪಷ್ಟಪಡಿಸಿದೆ.
ಏರೋ ಇಂಡಿಯಾ -2019 ಆಯೋಜಿಸುವುದಕ್ಕೂ ಮುನ್ನ ರಾಜ್ಯ ಸರ್ಕಾರದ ಹಿರಿಯ ಕಾರ್ಯದರ್ಶಿ ಅಧ್ಯಕ್ಷತೆ ವಹಿಸಿರುವ ವಿವಿಧ ಸಭೆಗಳಲ್ಲಿ ವಿಪತ್ತು ಮತ್ತು ಅಗ್ನಿಶಾಮಕ ನಿರ್ವಹಣೆಯ ಕಾರ್ಯವನ್ನು ನಿರ್ದಿಷ್ಟವಾಗಿ ರಾಜ್ಯ ಅಗ್ನಿಶಾಮಕ ಇಲಾಖೆಗೆ ನಿಯೋಜಿಸಲಾಗಿದೆ ಮತ್ತು ಅಗ್ನಿಶಾಮಕ ಇಲಾಖೆಯು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ದೃಢಪಡಿಸಿರುವ ಕುರಿತು ಎಲ್ಲ ದಾಖಲೆಗಳೂ ಲಭ್ಯವಿದೆ ಎಂದು ಎಚ್‍ಎಎಲ್‍ ತಿಳಿಸಿದೆ.
SCROLL FOR NEXT