ರಾಜ್ಯ

70 ಅಡಿ ಎತ್ತರದ ಸೇತುವೆ ಏರಿ ರೈಲಿನ ಚೈನನ್ನು ಬಿಡಿಸಿದ ಗಾರ್ಡ್: ವಿಡಿಯೋ ವೈರಲ್!

Vishwanath S
ಬೆಂಗಳೂರು: ಜೀವದ ಹಂಗು ತೊರೆದು ರೈಲ್ವೆ ಗಾರ್ಡ್ ಒಬ್ಬರು 70 ಅಡಿ ಎತ್ತರದ ಸೇತುವೆ ಮೇಲೆ ನಿಂತಿದ್ದ ರೈಲಿನ ಚೈನನ್ನು ಬಿಡಿಸುವ ಸಲುವಾಗಿ ಯಾವುದೇ ರೀತಿಯ ಸುರಕ್ಷತೆ ಇಲ್ಲದೆ ಮಾಡಿರುವ ಸಾಹಸದ ವಿಡಿಯೋ ಇದೀಗ ವೈರಲ್ ಆಗಿದೆ.
ರೈಲ್ವೆ ಗಾರ್ಡ್ ಆಗಿರುವ ಎನ್ ವಿಷ್ಣುಮೂರ್ತಿ ಈ ಸಾಹಸ ಮಾಡಿದ್ದಾರೆ. ತಮ್ಮ ಜೀವದ ಹಂಗನ್ನು ತೊರೆದ ವಿಷ್ಣುಮೂರ್ತಿ ಕೆಲಸ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಡಿಸೆಂಬರ್ 26ರಂದು ಚಾಮರಾಜನಗರ-ತಿರುಪತಿಗೆ ತೆರಳುತ್ತಿದ್ದ ಎಕ್ಸ್ ಪ್ರೆಸ್ ರೈಲಿನ ಇಂಟರ್ ಚೈನನ್ನು ಯಾರೋ ಎಳೆದ ಪರಿಣಾಮ ಶ್ರೀರಂಗಪಟ್ಟಣದ ಬಳಿ ಇರುವ ಗರ್ಡರ್ ಮೇಲ್ಸೇತುವೆ ಮೇಲೆ ನಿಂತಿತ್ತು. ಈ ವೇಳೆ ಕರ್ತವ್ಯ ನಿರ್ವಹಿಸುತ್ತಿದ್ದ ವಿಷ್ಣುಮೂರ್ತಿ ಅವರು ಪರಿಶೀಲನೆ ನಡೆಸಿ 10 ನಿಮಿಷದಲ್ಲೇ ಚೈನ್ ಲಾಕ್ ಅನ್ನು ಹೊರತೆಗೆದಿದ್ದರು.
ವಿಷ್ಣುಮೂರ್ತಿ ಅವರ ಈ ಕಾರ್ಯವನ್ನು ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೋರ್ವರು ಈ ದೃಶ್ಯವನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದರು. ಈ ವಿಡಿಯೋ ವೈರಲ್ ಆಗಿದ್ದು ವಿಷ್ಣುಮೂರ್ತಿ  ಅವರ ಕೆಲಸಕ್ಕೆ ಸಾರ್ವಜನಿಕರ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.
ಎಸ್ಡಬ್ಲ್ಯೂಆರ್ ಜನರಲ್ ಮ್ಯಾನೇಜರ್ ಅಜಯ್ ಕುಮಾರ್ ಸಿಂಗ್ ಅವರು ವಿಷ್ಣುಮೂರ್ತಿ ಅವರ ಕಾರ್ಯವನ್ನು ಪ್ರಶಂಸಿಸಿ, ಪ್ರಶಂಸೆ ಪತ್ರ ಮತ್ತು 5 ಸಾವಿರ ರುಪಾಯಿ ನಗದು ಬಹುಮಾನವನ್ನು ನೀಡಿದ್ದಾರೆ.
SCROLL FOR NEXT