ಬೆಂಗಳೂರು: ನಿಲುಗಡೆಯಾಗಿದ್ದ ಟ್ರಕ್ ಗೆ ಕಾರುಗಳು ಡಿಕ್ಕಿ ಹೊಡೆದ ಪರಿಣಾ ಮ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರು ಮೃತಪಟ್ಟಿರುವ ಘಟನೆ ನೆಲಮಂಗಲ ಸಮೀಪ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ನಿನ್ನೆ ಮುಂಜಾನೆ ನಡೆದಿದೆ.
ಟಿ ಬೇಗೂರು ಸಮೀಪ ತಿಪ್ಪಗೊಂಡನಹಳ್ಳಿಯಲ್ಲಿ ನಿಂತಿದ್ದ ಟ್ರಕ್ ಗೆ ವೇಗವಾಗಿ ಬಂದ ಸ್ವಿಫ್ಟ್ ಕಾರು ಡಿಕ್ಕಿ ಹೊಡೆದು ಖಾಸಗಿ ಕಂಪೆನಿ ನೌಕರ ಮನೋಜ್ ಮೃತಪಟ್ಟಿದ್ದು ಆತನ ನಾಲ್ವರು ಸ್ನೇಹಿತರು ಗಂಭೀರವಾಗಿ ಗಾಯಗೊಂಡಿದ್ದಾರೆ. ಟ್ರಕ್ ಚಾಲಕ ಗಾಡಿಯನ್ನು ನಿಲ್ಲಿಸಿ ಪಕ್ಕದ ಡಾಬಾಕ್ಕೆ ತೆರಳಿದ್ದರು. ಲಿಂಗರಾಜಪುರ ನಿವಾಸಿಯಾಗಿರುವ ಮನೋಜ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಗಾಯಗೊಂಡ ಭರತ್, ಸಾಗರ್, ಸುನೀಲ್ ಮತ್ತು ಕಿರಣ್ ಹೆಣ್ಣೂರು ಮತ್ತು ಕಸ್ತೂರಿನಗರ ನಿವಾಸಿಗಳಾಗಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಿನ್ನೆ ನಸುಕಿನ ಜಾವ 4.30ರ ವೇಳೆಗೆ ಇವರೆಲ್ಲರೂ ಹೊಸ ವರ್ಷದ ಪಾರ್ಟಿ ಮುಗಿಸಿಕೊಂಡು ಬೆಂಗಳೂರಿಗೆ ವಾಪಸಾಗುತ್ತಿದ್ದರು. ಕಾರನ್ನು ಚಲಾಯಿಸುತ್ತಿದ್ದ ಭರತ್ ಗೆ ನಿಂತಿದ್ದ ಟ್ರಕ್ ಕಾಣಿಸಿರಲಿಲ್ಲ.
ಮತ್ತೊಂದು ಘಟನೆಯಲ್ಲಿ 44 ವರ್ಷದ ಆನಂದ್ ಎಂಬುವವರು ಜೆನ್ ಕಾರನ್ನು ವೇಗವಾಗಿ ಚಲಾಯಿಸಿ ಕುಣಿಗಲ್ ಸಮೀಪ ನಿಂತಿದ್ದ ಟ್ರಕ್ ಗೆ ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ. ನೆಲಮಂಗಲದ ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಆನಂದ್ ಕೆಲಸ ಮಾಡುತ್ತಿದ್ದರು.