ರಾಜ್ಯ

ಬೆಂಗಳೂರು: ರಕ್ತದಾನ ಉತ್ತೇಜಿಸಲು ಸಾಮಾನ್ಯ ಜನರಿಗೆ ಟೆಕ್ಕಿ ಪ್ರಥಮ ಚಿಕಿತ್ಸೆ ತರಬೇತಿ!

Lingaraj Badiger
ಬೆಂಗಳೂರು: ತನ್ನ ಸಹೋದರಿಗೆ ವೈದ್ಯಕೀಯ ತುರ್ತು ಸೇವೆ ಒದಗಿಸಲು ಪರದಾಡಿದ್ದ ಬೆಂಗಳೂರು ಮೂಲದ ಟೆಕ್ಕಿಯೊಬ್ಬರು, ಜನರಲ್ಲಿ ರಕ್ತದಾನ ಉತ್ತೇಜಿಸಲು ವಿಎಂಇಡಿಒ ಎಂಬ ಕಂಪನಿ ಸ್ಥಾಪಿಸಿದ್ದು, ಸೂಕ್ತ ತುರ್ತು ಸೇವೆಗೂ ಮುನ್ನ ಪ್ರಥಮ ಚಿಕಿತ್ಸೆ ನೀಡುವ ಬಗ್ಗೆ ಸುಮಾರು 5 ಸಾವಿರ ಜನಕ್ಕೆ ತರಬೇತಿ ನೀಡುವ ಮೂಲಕ ಜನರ 'ವೈದ್ಯ'ನಾಗಿದ್ದಾರೆ.
ಮೂರು ವರ್ಷಗಳ ಹಿಂದೆ ತನ್ನ ಸಹೋದರಿಗೆ ತುರ್ತು ರಕ್ತ ಬೇಕಿತ್ತು. ಆದರೆ ಸರಿಯಾದ ಸಮಯಕ್ಕೆ ರಕ್ತ ಸಿಗದೆ ನಾವು ತುಂಬಾ ಪರದಾಡಬೇಕಾಯಿತು. ಈ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ನಾನು ಎದುರಿಸಿದ ಪರಿಸ್ಥಿತಿ ಯಾರಿಗೂ ಬರಬಾರದು ಎಂದು ನಾನು ಈ ನಿರ್ಧಾರಕ್ಕೆ ಬಂದೆ ಎಂದು ಟೆಕ್ಕಿ ಪ್ರವೀಣ್ ಗೌಡ ಅವರು ಹೇಳಿದ್ದಾರೆ.
ಪ್ರವೀಣ್ ಗೌಡ ಅವರು ತಮ್ಮ ಕಂಪನಿ ಮೂಲಕ 'ಬ್ಲಡ್ ಫಾರ್ ಶ್ಯೂರ್' ಎಂಬ ಮೊಬೈಲ್ ಅಪ್ಲಿಕೇಶನ್‌ ಅಭಿವೃದ್ಧಿಪಡಿಸಿದ್ದು, ಇದಕ್ಕೆ ಉತ್ತಮ ಪ್ರತಿಕ್ರಿಯೆ ಬರುತ್ತಿದೆ ಎಂದಿದ್ದಾರೆ.
ಬ್ಲಡ್ ಫಾರ್ ಶ್ಯೂರ್ ಅಪ್ಲಿಕೇಶನ್​​ನಿಂದ ತುರ್ತು ಸಂದರ್ಭದಲ್ಲಿ ನಮ್ಮ ಸುತ್ತ ಲಭ್ಯ ಇರುವಂತಹ ರಕ್ತ ದಾನಿಗಳು ಮತ್ತು ರಕ್ತ ನಿಧಿಗಳನ್ನು ಕ್ಷಣಾರ್ದಾದಲ್ಲಿ ಪತ್ತೆ ಹಚ್ಚಿ, ಅವರಿಗೆ ಪರಿಸ್ಥಿತಿಯ ಅನಿವಾರ್ಯತೆಯನ್ನು ತಿಳಿಸುತ್ತದೆ. ಇದರಿಂದ ಆಸಕ್ತಿಯುಳ್ಳ ಮತ್ತು ಹತ್ತಿರದಲ್ಲಿರುವ ರಕ್ತ ದಾನಿಗಳು ಸರಿಯಾದ ಸಮಯಕ್ಕೆ ರಕ್ತದಾನ ಮಾಡಿ ಅಮೂಲ್ಯವಾದ ಜೀವವನ್ನು ಉಳಿಸಬಹುದು.
ಬ್ಲಡ್ ಫಾರ್ ಶ್ಯೂರ್ ಯಶಸ್ಸಿನ ನಂತರ, ತುರ್ತು ಸಂದರ್ಭಗಳಲ್ಲಿ ನಾವೇ ವೈದ್ಯರಾಗಬೇಕು. ಈ ನಿಟ್ಟಿನಲ್ಲಿ ಏನಾದರೂ ಮಾಡಬೇಕು ಎಂದು ನಿರ್ಧರಿಸಿದ ಪ್ರವೀಣ್ ಗೌಡ, ಮೊದಲು ತಜ್ಞ ವೈದ್ಯರಿಂದ ತಾವು ತರಬೇತಿ ಪಡೆದು ಈಗ ಜನಸಾಮಾನ್ಯರಿಗೆ ಹೃದಯಾಘಾತದ ಸಂದರ್ಭ ಸೇರಿದಂತೆ ಇತರೆ ತುರ್ತು ಸಂದರ್ಭಗಳಲ್ಲಿ ನೀಡಬೇಕಾದ ಪ್ರಥಮ ಚಿಕಿತ್ಸೆಯ ಬಗ್ಗೆ ತರಬೇತಿ ನೀಡುತ್ತಿದ್ದಾರೆ.
ಸರಿಯಾದ ಸಮಯಕ್ಕೆ ತುರ್ತು ವೈದ್ಯಕೀಯ ನೆರವು ಸಿಗದೆ ಲಕ್ಷಾಂತರ ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಸಮೀಕ್ಷೆ ಪ್ರಕಾರ, ಶೇ.40ರಷ್ಟು ಜನ ಸೂಕ್ತ ಸಮಯಕ್ಕೆ ಪ್ರಥಮ ಚಿಕಿತ್ಸೆ ಸಿಗದೆ ಸಾವನ್ನಪ್ಪುತ್ತಿದ್ದಾರೆ ಎಂದು ಪ್ರವೀಣ್ ಗೌಡ ವಿವರಿಸಿದ್ದಾರೆ.
SCROLL FOR NEXT