ರಾಜ್ಯ

ಬೆಂಗಳೂರು: ವೇಶ್ಯಾವಾಟಿಕೆಗೆ ಒಲ್ಲೆ ಎಂದ ಸ್ನೇಹಿತೆ ಮೇಲೆ ಆ್ಯಸಿಡ್ ದಾಳಿ!

Manjula VN
ಬೆಂಗಳೂರು: ವೇಶ್ಯಾವಾಟಿಕೆ ದಂಧೆಗೆ ಒಲ್ಲೆ ಎಂದ ಸ್ನೇಹಿತೆ ಮೇಲೆ ಸ್ನೇಹಿತೆಯೊಬ್ಬಳು ಆ್ಯಸಿಡ್ ದಾಳಿ ನಡೆಸಿ ಪೈಶಾಚಿಕ ಕೃತ್ಯವೆಸಗಿರುವ ಘಟನೆ ಬನಶಂಕರಿಯಲ್ಲಿ ಸನಿವಾರ ನಡೆದಿದೆ. 
ದೀಪ್ತಿ (ಹೆಸರು ಬದಲಿಸಲಾಗಿದೆ) ದಾಳಿಗೊಳಗಾದ ಮಹಿಳೆಯಾಗಿದ್ದಾರೆ. ದೀಪ್ತಿಯವರು ಸುಟ್ಟ ಗಂಭೀರ ಗಾಯಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣ ಸಂಬಂಧ ಆ್ಯಸಿಡ್ ದಾಳಿ ನಡೆಸಿದ್ದ ರೂಪಾ ಅಲಿಯಾಸ್ ಆಶಾಳನ್ನು ಬಂಧನಕ್ಕೊಳಪಡಿಸಲಾಗಿದೆ. 
ವಿವಾಹಿತರಾದ ದೀಪ್ತಿಯವರು ಮೂಲತಃ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನವರಾಗಿದ್ದು, ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಕೆಲ ವರ್ಷಗಳಿಂದ ಪತಿಯಿಂದ ದೂರಾಗಿದ್ದಾರೆ. 3 ವರ್ಷಗಳ ಹಿಂದೆ ನಗರಕ್ಕೆ ಬಂದು ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದಾರೆ. ಲಗ್ಗೆರೆಯಲ್ಲಿನ ಗಾರ್ಮೆಂಟ್ಸ್ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಇದೇ ಕಾರ್ಖಾನೆಯಲ್ಲಿ ಎರಡು ತಿಂಗಳ ಹಿಂದೆ ದೀಪ್ತಿಯವರಿಗೆ ರೂಪಾಳ ಪರಿಚಯವಾಗಿತ್ತು. 
ದೀಪ್ತಿ ಜೊತೆಗೆ ಸಲುಗೆಯಿಂದ ರೂಪಾ ಆಗಾಗ್ಗೆ ಸ್ನೇಹಿತೆಯ ಮನಗೆ ಬಂದು ಹೋಗುತ್ತಿದ್ದಳು. ಸುಲಭವಾಗಿ ಹಣ ಸಂಪಾದನೆ ಮಾಡುವ ಉದ್ದೇಶದಿಂದ ವೇಶ್ಯಾವಾಟಿಕೆ ದಂಧೆಯಲ್ಲಿ ಕೈ ಜೋಡಿಸುವಂತೆ ರೂಪಾ ದೀಪ್ತಿಯವರನ್ನು ಒತ್ತಾಯ ಮಾಡುತ್ತಿದ್ದಳು. ಆದರೆ, ಇದಕ್ಕೆ ದೀಪ್ತಿ ಒಪ್ಪಿರಲಿಲ್ಲ. ಅಲ್ಲದೆ, ಇತ್ತೀಚೆಗೆ ರೂಪಾ ಸ್ನೇಹಿತೆ ದೀಪ್ತಿ ಬಳಿ ರೂ.10 ಸಾವಿರ ಕೇಳಿದ್ದಳು. ಸಾಲ ಕೊಡಲು ದೀಪ್ತಿ ನಿರಾಕರಿಸಿದ್ದಳು. ಇದರಿಂದ ತೀವ್ರವಾಗಿ ಕೆಂಡಾಮಂಡಲಗೊಂಡಿದ್ದ ರೂಪಾ ದೀಪ್ತಿಯವರು ಮಲಗಿದ್ದ ಸಂದರ್ಭದಲ್ಲಿ ಬಂದು ಆ್ಯಸಿಡ್ ದಾಳಿ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾಳೆ. 
ದಾಳಿಗೊಳಗಾದ ದೀಪ್ತಿ ಸುಟ್ಟ ಗಾಯಗಳಿಂದ ಕೂಗಾಡಿದ್ದರು. ಆದರೂ ಬಿಡದ ರೂಪಾ, ದೀಪ್ತಿ ಮುಖ ಹಾಗೂ ಬೆನ್ನಿಗೆ ಆ್ಯಸಿಡ್ ಎರಚಿ ಪರಾರಿಯಾಗಿದ್ದಳು. ಆ್ಯಸಿಡ್ ದಾಳಿಗೊಳಗಾಗಿ ನರಳಾಡುತ್ತಿದ್ದ ದೀಪ್ತಿ ತನ್ನ ಸ್ನೇಹಿತ ಶಶಿಕುಮಾರ್'ಗೆ ಕರೆ ಮಾಡಿ ವಿಚಾರ ತಿಳಿಸಿದ್ದಾಳೆ. ನನಗೆ ಉರಿ ತಡೆಯಲು ಆಗುತ್ತಿಲ್ಲ. ನೀನು ಮನೆಗೆ ಬೇಗ ಬಾ ಎಂದು ಹೇಳಿ ಕರೆ ಸ್ಥಗಿತಗೊಳಿಸಿದ್ದರು. ಗಾಯಾಳುವಿನ ಕೂಗಾಟ ಕೇಳಿ ಸ್ಥಳಕ್ಕೆ ಧಾವಿಸಿದ ನೆರೆ ನಿವಾಸಿಗಳು ದೀಪ್ತಿಯವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. 
ಸುಟ್ಟಗಾಯಗಳಿಂದ ಗಂಭೀರವಾಗಿ ಗಾಯಗೊಂಡಿರುವ ದೀಪ್ತಿಯವರಿಗೆ ಇದೀಗ ಮಾತನಾಡಲು ಸಾಧ್ಯವಾಗುತ್ತಿಲ್ಲ. ಗುಣಮುಖರಾದ ಬಳಿಕ ಹೇಳಿಕೆ ದಾಖಲಿಸಿಕೊಳ್ಳುವುದಾಗಿ ಪೊಲೀಸರು ಹೇಳಿದ್ದಾರೆ. 
SCROLL FOR NEXT