ರಾಜ್ಯ

ಬೆಂಗಳೂರಿಗರೇ, ಈ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಬರುವುದಿಲ್ಲ

Sumana Upadhyaya

ಬೆಂಗಳೂರು: ಮೆಟ್ರೊಪಾಲಿಟನ್ ನಗರ ಬೆಂಗಳೂರಿನ ಬಹುತೇಕ ಕಡೆ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಸಾಮಾನ್ಯ. ಆದರೆ ಈ ವರ್ಷ ಜನರಿಗೆ ನೀರಿನ ಸಮಸ್ಯೆ ತಲೆದೋರಬಾರದು ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹೆಚ್ಚು ನೀರು ಪೂರೈಸಲು ಕ್ರಮ ಕೈಗೊಂಡಿದೆ.

ರಾಜ್ಯದ ಕೆಲವು ಜಲಾಶಯಗಳಲ್ಲಿ ನೀರಿನ ಮಟ್ಟ ತಗ್ಗುತ್ತಿದ್ದು ಬೇಸಿಗೆಯಲ್ಲಿ ಸಮಸ್ಯೆ ತಲೆದೋರಬಹುದು ಎಂಬ ಮುನ್ಸೂಚನೆ ಕಾಣುತ್ತಿದೆ. ದಕ್ಷಿಣ ಒಳನಾಡಿನಲ್ಲಿ ಕಳೆದ ವರ್ಷ ಉತ್ತಮ ಮಳೆಯಾಗಿದೆ. ಮೈಸೂರು, ಮಂಡ್ಯ ಮತ್ತು ಮಡಿಕೇರಿಗಳಲ್ಲಿ ಸಹ ಮಳೆ ಕಾಣಿಸಿದೆ. ಇದರಿಂದ ಕೃಷ್ಣರಾಜ ಸಾಗರ ಮತ್ತು ಕಬಿನಿ ಜಲಾಶಯಗಳು ಭರ್ತಿಯಾಗಿವೆ. ಹೀಗಾಗಿ ಬೆಂಗಳೂರಿಗರು ಈ ಬಾರಿ ನೀರಿಗೆ ಪರಿತಪಿಸಬೇಕಾಗಿಲ್ಲ ಎನ್ನುತ್ತಾರೆ ಬಿಡಬ್ಲ್ಯುಎಸ್ಎಸ್ ಬಿ ಅಧಿಕಾರಿಗಳು.

ಬೆಂಗಳೂರು ನಗರಕ್ಕೆ ಪ್ರತಿದಿನ ಸುಮಾರು 1,450 ದಶಲಕ್ಷ ಲೀಟರ್ ಕುಡಿಯುವ ನೀರು ಬೇಕು. ಇಲ್ಲಿಗೆ ಬಹುಪಾಲು ನೀರು ಬರುವುದು ಕೃಷ್ಣರಾಜ ಸಾಗರ ಮತ್ತು ಕಬಿನಿ ಜಲಾಶಯದಿಂದ. ಬೇಸಿಗೆಯಲ್ಲಿ ಪ್ರತಿದಿನ 1,400 ದಶಲಕ್ಷ ಲೀಟರ್ ನೀರು ಪೂರೈಕೆಯಾಗುತ್ತದೆ. ಜಲಾಶಯದಲ್ಲಿ ಮೊದಲಿಗೆ ಸಾಕಷ್ಟು ನೀರು ಇಲ್ಲದ್ದರಿಂದ ಬೆಂಗಳೂರಿಗೆ 1350 ದಶಲಕ್ಷ ಲೀಟರ್ ನೀರು ಪೂರೈಸುತ್ತಿದ್ದೆವು. ಈ ವರ್ಷ ಪರಿಸ್ಥಿತಿ ಸುಧಾರಿಸಿದೆ. ಹೀಗಾಗಿ ಅಗತ್ಯವಿರುವಷ್ಟು ನೀರು ಪೂರೈಸಬಹುದು ಎನ್ನುತ್ತಾರೆ ಬಿಡಬ್ಲ್ಯುಎಸ್ಎಸ್ ಬಿ ಅಧ್ಯಕ್ಷ ತುಶಾರ್ ಗಿರಿನಾಥ್.

ಬೆಂಗಳೂರಿನಲ್ಲಿ ಸುಮಾರು 2,300 ಬೋರ್ ವೆಲ್ ಗಳಿದ್ದು ಅವುಗಳಲ್ಲಿ 2 ಸಾವಿರ ಬೋರ್ ವೆಲ್ ಗಳು ಕಾರ್ಯನಿರ್ವಹಿಸುತ್ತಿವೆ. ಅವುಗಳ ಉಸ್ತುವಾರಿ ಕೂಡ ಸರಿಯಾಗಿ ನಡೆಯುತ್ತಿದೆ ಎನ್ನುತ್ತಾರೆ,

ಆದರೆ ಬಿಡಬ್ಲ್ಯುಎಸ್ಎಸ್ ಬಿಯ ಕೆಲವು ಅಧಿಕಾರಿಗಳು ಹೇಳುವ ಪ್ರಕಾರ, ಬೆಂಗಳೂರಿನಲ್ಲಿ ನೀರಿನ ಸಮಸ್ಯೆಯಿದ್ದು ಅದು 2030ರ ಹೊತ್ತಿಗೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ. ಜನರು ನೀರಿನ ಮಿತ ಬಳಕೆ ಮಾಡುವುದನ್ನು ಕಲಿಯಬೇಕು. ಬಹುತೇಕ ಮನೆಗಳಲ್ಲಿ ಮಳೆ ನೀರು ಕೊಯ್ಲನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದಿಲ್ಲ. ಮಳೆ ನೀರು ಕೊಯ್ಲು ವಿಧಾನವನ್ನು ಸೂಕ್ತವಾಗಿ ಜಾರಿಗೆ ತಂದರೆ ಸಮಸ್ಯೆಯಾಗುವುದಿಲ್ಲ ಎನ್ನುತ್ತಾರೆ.

SCROLL FOR NEXT