ರಾಜ್ಯ

ಮಂಡ್ಯದ ಜನಗಳೇ ನಿಮ್ಮ ಪ್ರೀತಿಯಲ್ಲಿ ಸಣ್ಣ ಭಾಗ ಅಭಿಷೇಕ್‌ಗೂ ಇರಲಿ: ನಟಿ ಸುಮಲತಾ

Sumana Upadhyaya

ಮಂಡ್ಯ: ಅಂಬಿ ಅವರು ನಮ್ಮಿಂದ ದೂರವಾದ ನೋವಿನಲ್ಲಿ ಅವರ ಅಭಿಮಾನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವುದು ಅತ್ಯಂತ ನೋವಿನ ಸಂಗತಿ. ಯಾವುದೇ ವ್ಯಕ್ತಿಯನ್ನು ಕಳೆದುಕೊಂಡ ನೋವು, ನಷ್ಟ ಅವರ ಕುಟುಂಬದವರಿಗೇ ಗೊತ್ತು. ಎಲ್ಲರೂ ಅಭಿಮಾನ, ಪ್ರೀತಿಯನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಿ. ಆತ್ಮಹತ್ಯೆ ಮೂಲಕ ತೋರಿಸಿದರೆ ಯಾರಿಗೂ ಉಪಯೋಗವಾಗುವುದಿಲ್ಲ ಎಂದು ಹಿರಿಯ ನಟಿ, ಅಂಬರೀಷ್ ಅವರ ಪತ್ನಿ ಸುಮಲತಾ ಮನವಿ ಮಾಡಿಕೊಂಡಿದ್ದಾರೆ.

ಮಂಡ್ಯದ ಸರ್‌ಎಂವಿ ಕ್ರೀಡಾಂಗಣದಲ್ಲಿ ಅಖಿಲ ಕರ್ನಾಟಕ ಅಂಬರೀಷ್‌ ಅಭಿಮಾನಿಗಳ ಸಂಘವು ಆಯೋಜಿಸಿದ್ದ ಅಂಬರೀಷ್‌ ಪುಣ್ಯಸ್ಮರಣೆ, ಶ್ರದ್ಧಾಂಜಲಿ ಮತ್ತು ನುಡಿನಮನ ಕಾರ‍್ಯಕ್ರಮದಲ್ಲಿ ಸುಮಲತಾ ಅವರು ಅಂಬರೀಷ್, ಅವರ ಜೀವನ, ಸಾಧನೆ, ಮಂಡ್ಯದ ಜನತೆ, ಅಭಿಮಾನಿಗಳ ಕುರಿತು ಮಾತನಾಡುತ್ತಾ ಭಾವುಕರಾದರು.

ಆಗಸದಲ್ಲಿ ಮಿನುಗುತ್ತಿರುವ ಚಂದ್ರನನ್ನು ನೀವೆಲ್ಲಾ ನೋಡಿ. ಚಂದ್ರನ ರೂಪದಲ್ಲಿ ಅಂಬರೀಷ್‌ ನಮ್ಮನ್ನು ನೋಡಿ ನಗುತ್ತಿರುವಂತಿದೆ. ಆಶೀರ್ವಾದ ಮಾಡುವಂತಿದೆ. ಅಂಬಿಯವರ ಉಸಿರು ಮನಸ್ಸು, ಕನಸಲ್ಲೂ ಮಂಡ್ಯ ಇರುತ್ತಿತ್ತು. ಉಸಿರು ಇರುವವರೆಗೆ ಮಂಡ್ಯವನ್ನು ಬಿಟ್ಟು ಹೋಗಲ್ಲ ಎನ್ನುತ್ತಿದ್ದರು. ನವೆಂಬರ್ 25ರಂದು ನೀವು ಅವರನ್ನು ಕಳುಹಿಸಿಕೊಟ್ಟ ರೀತಿ, ಪ್ರೀತಿ, ವಿಶ್ವಾಸ, ಅಭಿಮಾನವನ್ನು ನಾನೆಂದೂ ಮರೆಯುವುದಿಲ್ಲ. ಈ ಮಣ್ಣಿನ ಮಗನಾಗಿ ಹುಟ್ಟಿದ್ದಕ್ಕೆ ಆ ಜೀವದ ಜೀವನ ಸಾರ್ಥಕವಾಯ್ತು ಎಂದು ನೆನೆದು ಕಣ್ಣೀರಿಟ್ಟರು.

ಮೂರು ಬಾರಿ ಸಂಸದ, ಒಮ್ಮೆ ಕೇಂದ್ರ ಸಚಿವ, ರಾಜ್ಯದಲ್ಲಿ ಶಾಸಕ, ಸಚಿವರಾಗಿದ್ದರು. ಮಂಡ್ಯದ ಜನರು ನನ್ನನ್ನು ಮಂಡ್ಯದಿಂದ ದಿಲ್ಲಿಗೆ ಕಳುಹಿಸಿದ್ದಾರೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ನನ್ನ ಜನವೇ ನಾನಿಂದು ಈ ರೀತಿ ಇರಲು ಕಾರಣ ಎನ್ನುತ್ತಿದ್ದರು. ಮಂಡ್ಯದ ಜನರ ಪ್ರೀತಿ ವಿಶೇಷತೆ ಏನೆಂದು ನಾನು ಕೇಳಿದಾಗಲೆಲ್ಲಾ ಮುಂದೆ ಗೊತ್ತಾಗುತ್ತೆ, ನೋಡುತ್ತಿರು ಎನ್ನುತ್ತಿದ್ದರು. ಅದೇನೆಂದು ನ.25ರಂದು ಮತ್ತು ಇಂದು ನನಗೆ ಗೊತ್ತಾಗಿದೆ. ನಿಮ್ಮ ಪ್ರೀತಿಯಲ್ಲಿ ಸಣ್ಣ ಭಾಗ ಅಭಿಷೇಕ್‌ಗೂ ಇರಲಿ. ನಾನು ನಿಮಗೆಲ್ಲಾ ಚಿರಋುಣಿ ಎಂದು ಗದ್ಗದಿತರಾದರು.

ಅಂಬರೀಷ್‌ ಶೈಲಿಯಲ್ಲೇ ಅವರ ಪುತ್ರ ಅಭಿಷೇಕ್‌ ಕೂಡ ಮಾತನಾಡಿದರು. ಅಂಬರೀಷ್‌ ಇದ್ದದ್ದು ಹೋದದ್ದು ಎಲ್ಲರಿಗೂ ಗೊತ್ತು. ಹಣ ಮುಖ್ಯವಲ್ಲ ಜನ ಮುಖ್ಯ ಎಂದು ಅಪ್ಪ ಹೇಳುತ್ತಿದ್ದರು. ರಾಜನಂತೆ ಬಾಳಿದ ನಮ್ಮಪ್ಪ ಹಾಗೇ ಹೋದರು. ಅದಕ್ಕೆ ನೀವು ಕಾರಣ. ನಮ್ಮಪ್ಪನನ್ನು ರಾಜನಂತೆ ಮೆರೆಸಿದಿರಿ. ನಿಮಗೆ ನಾವು ಎಂದೆಂದೂ ಚಿರ ಋುಣಿಯಾಗಿದ್ದೇವೆ. ಹತ್ತು ಜನರಿಗೆ ಒಳ್ಳೆಯದು ಮಾಡು ಎಂದು ಅಪ್ಪ ಯಾವಾಗಲೂ ಹೇಳುತ್ತಿದ್ದರು. ಅದರಂತೆ ನಾವು ಮುಂದೆ ಒಳ್ಳೆಯ ಕೆಲಸವನ್ನೇ ಮಾಡುತ್ತೇವೆ ಎಂದು ಕೈಮುಗಿದರು.

''ನನಗಿದ್ದ ಧೈರ್ಯವೆಂದರೆ ಅದು ನಮ್ಮಪ್ಪ. ಅವರ ಸತ್ತ ದಿನ ಹೊಸ ಧೈರ್ಯ ಕೊಟ್ಟಿದ್ದು ನೀವೇ. ಅಪ್ಪನ ಪಾರ್ಥಿವ ಶರೀರ ದರ್ಶನ ಮಾಡಲು ಬರುತ್ತಿದ್ದವರು ಅಭಿ ಹೆದ್ರಬೇಡ. ನಾವಿದ್ದೇನೆ. ನಿನ್ನ ಹಿಂದೆ ಇಡೀ ಮಂಡ್ಯ ಇದ ಎಂದು ಧೈರ್ಯದ ಮಾತುಗಳನ್ನಾಡುತ್ತಿದ್ದರು. ನಿಮ್ಮ ಪ್ರೀತಿಯನ್ನು ಗಳಿಸುವ ವಿಶ್ವಾಸ ನನಗಿದೆ ಎಂದರು.

ನಟ ಯಶ್‌ ಮಾತನಾಡಿ ಜನ ಸಂಪಾದನೆಯನ್ನು ಹಲವರು ಮಾಡುತ್ತಾರೆ. ಆದರೆ ಅಂಬರೀಶ್‌ ಅವರ ಮೇಲೆ ಜನ ಇಟ್ಟಿದ್ದ ಪ್ರೀತಿಯನ್ನು ಅವರ ಅಂತಿಮ ದರ್ಶನದ ವೇಳೆ ತಿಳಿಸಿಕೊಟ್ಟರು. ಮಂಡ್ಯದ ಗತ್ತು ಇಂಡಿಯಾಗೇ ಗೊತ್ತು. ಆ ಗತ್ತು ಅಂಬರೀಷಣ್ಣನ ಸ್ವತ್ತು. ನಾನು ಅವರ ಗತ್ತು ಕಲಿತಿದ್ದೇನೆ. ಅಂಬಿ ಇಲ್ಲ ಎಂದು ಹೇಳುವ ಬದಲು ಅಭಿಗೆ ಜಿಲ್ಲೆಯ ಜನ ಗೌರವ ನೀಡಬೇಕು ಎಂದು ಮನವಿ ಮಾಡಿದರು.

ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಮಾತನಾಡಿ, ರಾಜಕೀಯ, ಸಿನಿಮಾ ಕ್ಷೇತ್ರದಲ್ಲಿ ಅಂಬಿ ಅವರಂತಹ ಮತ್ತೊಬ್ಬ ವ್ಯಕ್ತಿ ಹುಟ್ಟಲು ಸಾಧ್ಯವಿಲ್ಲ. ಕಾಂಗ್ರೆಸ್‌ ಪಕ್ಷದ ಪ್ರಮುಖ ನಾಯಕರಾಗಿ ಜಿಲ್ಲೆಯನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಅಂಬರೀಷ್‌ ಅವರ ಮಗ ಚಿತ್ರರಂಗದಲ್ಲಿ ಬೆಳೆಯಲಿ ಎಂದು ಹಾರೈಸಿದರು.

ಅಪ್ಪಾಜಿಗೆ ಶನಿವಾರ ಬಾಡೂಟ ತಿನ್ನಿಸಿದ್ದರು: ಹಿರಿಯ ನಟ ಶಿವರಾಜ್‌ಕುಮಾರ್‌ ಮಾತನಾಡಿ, ಶನಿವಾರ, ಸೋಮವಾರ ಅಪ್ಪಾಜಿ ಮಾಂಸಾಹಾರ ಸೇವಿಸುತ್ತಿರಲಿಲ್ಲ. ಆದರೆ, ಅವರಿಗೆ ಅಂಬಿಮಾಮ ಮಾಂಸ ತಿನ್ನಿಸಿದ್ದರು. ಅಂಬಿ ಪ್ರೀತಿಗೆ ಕಟ್ಟುಬಿದ್ದು ಅಪ್ಪಾಜಿ ಮಾಂಸಾಹಾರ ಸೇವಿಸಿದ್ದರು. ಹೀಗೆ ಅಂಬಿಯ ಪ್ರೀತಿಗೆ ಮರುಳಾಗದವರೇ ಇಲ್ಲ. ಅವರು ನಮ್ಮೊಂದಿಗೆ ಈಗಲೂ ಇದ್ದಾರೆ. ಅವರು ಎಲ್ಲರಿಗೂ ಬೇಕು,''ಎಂದರು.

ಪಾಂಡವಪುರ ತಾಲೂಕು ಕನಗನಮರಡಿ ಬಳಿ ವಿಶ್ವೇಶ್ವರಯ್ಯ ನಾಲೆಗೆ ಖಾಸಗಿ ಬಸ್‌ ಮಗುಚಿ ಬಿದ್ದು ಮೃತಪಟ್ಟಿದ್ದ 30 ಜನರ ಕುಟುಂಬದವರಿಗೆ ಸಮಾರಂಭದಲ್ಲಿ ಅಂಬರೀಷ್‌ ಪತ್ನಿ ಸುಮಲತಾ ಅವರು ಚೆಕ್‌ ಮೂಲಕ ಸಹಾಯಧನ ವಿತರಿಸಿದರು. ಮೃತ 30 ಕುಟುಂಬದವರನ್ನು ವೇದಿಕೆಗೆ ಆಹ್ವಾನಿಸಿ ಎಲ್ಲರಿಗೂ ಚೆಕ್‌ಗಳನ್ನು ವಿತರಿಸಿದರು.

SCROLL FOR NEXT