ರಾಜ್ಯ

ಆನ್ ಲೈನ್ ನಲ್ಲಿ ಸರ್ಚ್ ಮಾಡಿ ಕರೆ ಮಾಡುವ ಮುನ್ನ ಎಚ್ಚರವಾಗಿರಿ, ಹೆಚ್ಚಾಗಿದೆ ಮೋಸದ ಜಾಲ

Sumana Upadhyaya

ಬೆಂಗಳೂರು: ಆನ್ ಲೈನ್ ವಹಿವಾಟುಗಳಲ್ಲಿ ಮೋಸ ಹೋದ ಗ್ರಾಹಕರು ಬಹುತೇಕ ಮಂದಿ. ಇದೇ ರೀತಿ ಹೊಸದೊಂದು ಸೈಬರ್ ಕ್ರೈಮ್ ವಿಧಾನದಲ್ಲಿ, ಸರ್ಚ್ ಎಂಜಿನ್ ನಲ್ಲಿ ಜನರನ್ನು ಮೋಸ ಮಾಡುತ್ತಿದ್ದ ತಂಡವೊಂದನ್ನು ಪೊಲೀಸರು ಕಂಡುಹಿಡಿದಿದ್ದಾರೆ. ಗೂಗಲ್ ಮತ್ತು ಇತರ ವೆಬ್ ಸೈಟ್ ಗಳಲ್ಲಿ ಸಲಹೆಗಳನ್ನು ನೀಡುವವರನ್ನು ಹುಡುಕುವ ಮಾಹಿತಿ ಬಯಸುವವರನ್ನು ಗುರಿಯಾಗಿಟ್ಟುಕೊಂಡ ತಂಡ ಅದರಲ್ಲಿ ತೋರಿಸಿದ ಸಂಪರ್ಕ ವಿವರಗಳನ್ನು ತಿದ್ದುಪಡಿ ಮಾಡಿ ಮೋಸ ಮಾಡುತ್ತಾರೆ.

ಈ ಸಂಬಂಧ ಬೆಂಗಳೂರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಹಲವು ದೂರುಗಳು ದಾಖಲಾಗಿವೆ. ವೆಬ್ ಸೈಟ್ ಗಳಲ್ಲಿ ದೂರವಾಣಿ ಸಂಖ್ಯೆಯನ್ನು ತಿದ್ದುಪಡಿ ಮಾಡಿ ಸಹಾಯವಾಣಿಗೆ ಕರೆ ಮಾಡುವವರನ್ನು ದಾರಿತಪ್ಪಿಸುತ್ತಾರೆ. ನಂದಿನ ಲೇ ಔಟ್ ನ ನಿವಾಸಿಯೊಬ್ಬರು ಈ ರೀತಿ ವಿಮಾನ ಟಿಕೆಟ್ ಮಾಡಲು ಗೂಗಲ್ ಸರ್ಚ್ ನಲ್ಲಿ ವಿಮಾನಯಾನದ ಸಹಾಯವಾಣಿಗೆ ಕರೆ ಮಾಡಿ 38 ಸಾವಿರದ 799 ರೂಪಾಯಿ ಕಳೆದುಕೊಂಡಿದ್ದಾರೆ.  ಫೋನ್ ಕರೆ ಸ್ವೀಕರಿಸಿದವರು ಕಾರ್ಡು ವಿವರ ಒಟಿಪಿ ಸಂಖ್ಯೆ ಬರೆದು ಹಣವನ್ನು ಆನ್ ಲೈನ್ ನಲ್ಲಿ ಪಡೆದುಕೊಂಡಿದ್ದಾರೆ ಎನ್ನುತ್ತಾರೆ ವಂಶಿಕೃಷ್ಣ.

ಪೇಟಿಎಂ ಮೂಲಕ ವಿದ್ಯುತ್ ಬಿಲ್ ಪಾವತಿಸಲು ಹೊರಟ ಉಮೇಶ್ ಎಂಬುವವರು ಕೂಡ ಮೋಸ ಹೋಗಿದ್ದಾರೆ. ಪೇಟಿಎಂನಲ್ಲಿ ಹಣ ಪಾವತಿಸಲು ಸಾಧ್ಯವಾಗದಾಗ ಕಸ್ಟಮರ್ ಕೇರ್ ಸಂಖ್ಯೆಗೆ ಫೋನ್ ಮಾಡಿದರು. ಕರೆ ಮಾಡಿದಾಗ ಉಮೇಶ್ ಬಳಿ ಡೆಬಿಟ್ ಕಾರ್ಡು ಸಂಖ್ಯೆ ಮತ್ತು ಒಟಿಪಿ ನಂಬರ್ ಕೇಳಿದ್ದಾರೆ. ಅದನ್ನು ನೀಡಿದ ತಕ್ಷಣ 49,999 ರೂಪಾಯಿ ಕಳೆದುಕೊಂಡಿದ್ದಾರೆ.

ಇಂತಹ 20ಕ್ಕೂ ಹೆಚ್ಚು ಕೇಸುಗಳು ಬೆಂಗಳೂರು ನಗರದ ಸೈಬರ್ ಕ್ರೈಂ ವಿಭಾಗದಲ್ಲಿ ಇತ್ತೀಚೆಗೆ ದಾಖಲಾಗಿದೆ. 2017ರಲ್ಲಿ ಮಾರ್ಚ್ 15ರಿಂದ ಡಿಸೆಂಬರ್ 31ರವರೆಗೆ 880 ಕೇಸುಗಳು ದಾಖಲಾಗಿದ್ದರೆ 2018ರಲ್ಲಿ 2,438 ಕೇಸುಗಳು ದಾಖಲಾಗಿದ್ದವು. ರಾಜ್ಯದಲ್ಲಿ ನಡೆಯುವ ಸೈಬರ್ ಕ್ರೈಮ್ ಗಳಲ್ಲಿ ಹೆಚ್ಚಾಗಿ ಸಂಭವಿಸುವುದು ಬೆಂಗಳೂರಿನಲ್ಲಿ ಅಧಿಕ.
ಒಂದೇ ತರಹ ಕಾಣುವ ಎಲೆಕ್ಟ್ರಾನಿಕ್ ಉಪಕರಣಗಳನ್ನು ಪೋರ್ಟಲ್ ಗಳಲ್ಲಿ ಮಾರಾಟ ಮಾಡುವುದು ಕೂಡ ಜಾಸ್ತಿಯಾಗಿದೆ. ಬೆಂಗಳೂರು ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿ, ಜನರು ಎಚ್ಚೆತ್ತುಕೊಂಡರೆ, ಮೋಸದ ಬಗ್ಗೆ ಅರಿತುಕೊಂಡು ಜಾಗ್ರತೆಯಿಂದಿದ್ದರೆ ಈ ರೀತಿ ಮೋಸ ಹೋಗುವುದನ್ನು ತಡೆಯಬಹುದು ಎನ್ನುತ್ತಾರೆ.

ಗ್ರಾಹಕರು ದೂರವಾಣಿ ಮೂಲಕ ತಮ್ಮ ಹಣಕಾಸಿನ ವಿವರಗಳನ್ನು ಹಂಚಿಕೊಳ್ಳಬಾರದು. ಕಡಿಮೆ ಹಣಕ್ಕೆ ಆಕರ್ಷಕ ವಸ್ತುಗಳು ಸಿಗುತ್ತವೆ ಎಂದು ಹೇಳುವ ಬಗ್ಗೆ ಗ್ರಾಹಕರು ಎಚ್ಚರವಾಗಿರಬೇಕು ಎನ್ನುತ್ತಾರೆ ಅಲೋಕ್ ಕುಮಾರ್.

SCROLL FOR NEXT