ನೆನ್ನೆ ಮುಚ್ಕೊಂಡು ಕೂತಿದ್ದೆ, ಇದು ನಮ್ ಕ್ಲಾಸ್ ನಾವು ಹೇಳಿದಂಗೆ ಕೇಳ್ಬೇಕು: ಪ್ರಾಧ್ಯಾಪಕಿಗೆ ಆವಾಜ್ ಹಾಕಿದ ವಿದ್ಯಾರ್ಥಿ!
ಬೆಂಗಳೂರು: ಇತ್ತೀಚೆಗೆ ಮಗನೊಬ್ಬ ತಾಯಿಗೆ ಪೊರಕೆಯಿಂದ ಹೊಡೆದ ಘಟನೆ ಸುದ್ದಿಯಾಗಿ ಮೌಲ್ಯಗಳು ಪತನವಾಗುತ್ತಿರುವ ಆತಂಕ ಮೂಡಿತ್ತು. ಈಗ ಅಂಥಹದ್ದೇ ಮತ್ತೊಂದು ಆತಂಕ ಮೂಡಿಸುವ ವಿಡಿಯೋ ವೈರಲ್ ಆಗತೊಡಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ವಿದ್ಯಾರ್ಥಿಯೋರ್ವ ಪ್ರಾಧ್ಯಾಪಕಿಗೆ ಕಿಂಚಿತ್ ಗೌರವವನ್ನೂ ತೋರದೇ ಅಸಭ್ಯ ರೀತಿಯಲ್ಲಿ ವರ್ತಿಸಿರುವುದು ಕಂಡುಬಂದಿದೆ. ಶಿಕ್ಷಕರು, ಪ್ರಾಧ್ಯಾಪಕರು ವಿದ್ಯಾರ್ಥಿಗಳನ್ನು ಗದರಿಸಿ ಸರಿ ದಾರಿಗೆ ತರುವುದು ಸಾಮಾನ್ಯ. ಆದರೆ ಈ ವಿಡಿಯೋ ನೋಡಿದರೆ ಒಂದು ಕ್ಷಣ ಎಂಥವರಿಗೂ ಅಘಾತವಾಗುತ್ತದೆ. ಕರ್ನಾಟಕದ ಕಾಲೇಜಿನ ವಿಡಿಯೋ ಇದಾಗಿದ್ದು, ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ.
"ನೆನ್ನೆ ಮುಚ್ಕೊಂಡು ಕೂತಿದ್ದೆ, ಏಕೆಂದ್ರೆ ಅದು ನಿಮ್ ಕ್ಲಾಸ್, ಇದು ನಮ್ ಕ್ಲಾಸ್ ನಾವು ಹೇಳಿದಂಗೆ ಕೇಳ್ಬೇಕು" ಎಂದು ವಿದ್ಯಾರ್ಥಿ ಪ್ರಾಧ್ಯಾಪಕಿಗೆ ಆವಾಜ್ ಹಾಕಿದ್ದು, ಇದನ್ನೇ ಮತ್ತೋರ್ವ ವಿದ್ಯಾರ್ಥಿ ವಿಡಿಯೋ ಮಾಡಿರುವುದು ಮತ್ತಷ್ಟು ಅಚ್ಚರಿ ಮೂಡಿಸಿದೆ. ವಿದ್ಯಾರ್ಥಿ ಪ್ರಾಧ್ಯಾಪಕಿಗೆ ಆವಾಜ್ ಹಾಕುತ್ತಿದ್ದರೂ ಸಹ ಅದನ್ನು ಆತನ ಸಹಪಾಠಿಗಳು ವಿನೋದದಿಂದ ಆಲಿಸಿ ನಗುತ್ತಿದ್ದರೇ ಹೊರತು ಯಾರೂ ಪ್ರತಿಭಟನೆ ಮಾಡಿಲ್ಲ.
ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗತೊಡಗಿದ್ದು ನಮ್ಮ ಶಿಕ್ಷಣ ವ್ಯವಸ್ಥೆ ಎಲ್ಲಿಗೆ ಬಂದಿದೆ ಎಂಬ ಆತಂಕ ವ್ಯಕ್ತವಾಗಿದೆ ಕೇಳಿ ವಿಡಿಯೋ ಶೇರ್ ಆಗುತ್ತಿದೆ.