ತುಮಕೂರು: ನಿನ್ನೆ ಲಿಂಗೈಕ್ಯರಾಗಿದ್ದ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮಿಜಿಗಳು 70ರ ದಶಕದಲ್ಲೇ ತಮ್ಮ ಪವಿತ್ರ ಸಮಾಧಿಯ ಸ್ಥಳ ಮತ್ತು ರೂಪುರೇಷೆಗಳನ್ನು ನೀಡಿದ್ದರಂತೆ.
ಹೌದು.. ಅಚ್ಚರಿಯಾದರೂ ಇದು ಸತ್ಯ.. 70 ದಶಕದಲ್ಲಿ ಎಪ್ಪತ್ತನೇ ವರ್ಷದಲ್ಲಿದ್ದಾಗಲೇ ಶ್ರೀಗಳು ತಾವು ಐಕ್ಯವಾಗುವ ಸ್ಥಳವನ್ನು ಸೂಚಿಸಿದ್ದರು. ಸ್ವಾಮೀಜಿಗಳು ಐಕ್ಯವಾಗಲು ಸ್ಥಳ ಹುಡುಕುತ್ತಿದ್ದಾಗ ಅವರ ಹಿರಿಯ ಗುರುಗಳು ನೀರೆರೆದು ಪೋಷಿಸಿದ್ದ ಬೃಹತ್ ಆಲದ ಮರ ರಾತ್ರೋರಾತ್ರಿ ನೆಲಕ್ಕುರುಳಿತ್ತು. ಇದೇ ಸ್ಥಳ ಆಯ್ದುಕೊಂಡು 39 ವರ್ಷಗಳ ಹಿಂದೆ ಶ್ರೀ ಶಿವಕುಮಾರ ಸ್ವಾಮೀಜಿ ಲಿಂಗೈಕ್ಯರಾಗುವ ಭವನ ನಿರ್ಮಾಣ ಕಾರ್ಯ ಪ್ರಾರಂಭವಾಗಿತ್ತು. ಕಾರಣಾಂತರಗಳಿಂದ ನಡುವೆ ನಿಧಾನಗತಿಯಲ್ಲಿ ಸಾಗಿದ್ದ ಕಾಮಗಾರಿ ಇತ್ತೀಚೆಗೆ ವೇಗ ಪಡೆದಿದ್ದು ಶ್ರೀಗಳು ಲಿಂಗೈಕ್ಯರಾಗುವ ವೇಳೆಗೆ.
1982ರಲ್ಲಿ ಭವನ ನಿರ್ಮಾಣ ಕಾರ್ಯ ಆರಂಭಗೊಂಡಿತ್ತು. ಆಗ ಕನಕಪುರದ ದೇಗುಲ ಮಠದ ಇಮ್ಮಡಿ ಮಹಾಲಿಂಗ ಸ್ವಾಮೀಜಿ ಈ ಭವನ ನಿರ್ಮಾಣಕ್ಕೆ ಚಾಲನೆ ನೀಡಿದ್ದರು. ಸಿದ್ದಗಂಗಾ ಶ್ರೀ ಮತ್ತು ಮಹಾಲಿಂಗ ಸ್ವಾಮೀಜಿ ಇಬ್ಬರೂ ಉದ್ಧಾನ ಶಿವಯೋಗಿಗಳ ಶಿಷ್ಯರಾಗಿದ್ದರು. ಕಾರಣಾಂತರಗಳಿಂದ ನಿಧಾನಗತಿಯಲ್ಲಿ ಸಾಗಿದ್ದ ಕಾಮಗಾರಿ ಕೆಲಸ ಕೆಲ ವರ್ಷಗಳಿಂದ ವೇಗವಾಗಿ ಸಾಗಿ ಎರಡು ವರ್ಷಗಳ ಹಿಂದೆಯಷ್ಟೇ ಗದ್ದುಗೆ ನಿರ್ಮಾಣದ ಕಾಮಗಾರಿ ಪೂರ್ಣಗೊಂಡಿತ್ತು.
ಗದ್ದುಗೆ ನಾಲ್ಕು ಮೂಲೆಗಳಲ್ಲಿ ಕರಡಿಗೆಯ ಚಿತ್ರವನ್ನು ಕೆತ್ತಲಾಗಿದೆ. ಈ ಭವನ ಸಂಪೂರ್ಣ ಅಮೃತಶಿಲೆಯಿಂದ ನಿರ್ಮಾಣಗೊಂಡಿದೆ. ಸ್ವಾಮೀಜಿ ನಿತ್ಯ ಓಡಾಡುತ್ತಿದ್ದ ತೇರಿನ ಬೀದಿಯಲ್ಲೇ ಈ ಭವನ ಇದೆ. ಲಿಂಗೈಕ್ಯರಾಗಲಿರುವ ಗದ್ದುಗೆ ಗರ್ಭಗುಡಿ ಶಿಲಾ ಬಾಗಿಲ ಮೇಲೆ 26 ದೇವರನ್ನು ಕೆತ್ತಲಾಗಿದೆ. ಬಾಗಿಲ ಎಡ, ಬಲ ಭಾಗದಲ್ಲಿ ಅಷ್ಟ ದಿಕ್ಪಾಲಕರು, ಸಿದ್ದಗಂಗಾ ಮಠದ ದೇವರಾದ ಸಿದ್ದಲಿಂಗೇಶ್ವರ ಸ್ವಾಮೀಜಿ, ಬಸವಣ್ಣ, ಲಿಂಗೈಕ್ಯ ಗೋಸಲ ಸಿದ್ದೇಶ್ವರ, ಉದ್ದಾನ ಶಿವಯೋಗಿ, ಯಡಿಯೂರು ಸಿದ್ದಲಿಂಗೇಶ್ವರ, ಅಟವಿ ಶಿವಯೋಗಿ, ಬೇಡರ ಕಣ್ಣಪ್ಪ, ಅಕ್ಕಮಹಾದೇವಿ ಸೇರಿದಂತೆ 26 ಮೂರ್ತಿಗಳನ್ನು ಕೆತ್ತಲಾಗಿದೆ.
ಶ್ರೀಗಳು ಲಿಂಗೈಕ್ಯರಾಗಲಿರುವ ಗರ್ಭಗುಡಿಯಲ್ಲಿ ಹನ್ನೆರಡು ಅಡಿ ಆಳದ ಸಮಾಧಿ ಗುಂಡಿ ತೆಗೆಯಲಾಗಿದೆ. ಸಮಾಧಿಯ ಸುತ್ತಳತೆಯನ್ನು ಶ್ರೀಗಳೇ ತಮ್ಮ ಹೆಜ್ಜೆಗಳಿಂದ ಅಳತೆ ಮಾಡಿ ನೀಡಿದ್ದರು. ಸಮಾಧಿ ಗುಂಡಿಗಿಳಿಯಲು ಮೂರು ಮೆಟ್ಟಿಲು ಮಾಡಿದ್ದು, ಮಂಗಳವಾರ ಸಂಜೆ ಶ್ರೀಗಳು ಇಲ್ಲಿ ವಿಭೂತಿಯಲ್ಲಿ ಸಮಾಧಿಯಾಗಲಿದ್ದಾರೆ. ಬಳಿಕ ಶ್ರೀಗಳ ಹೆಸರಿನಲ್ಲಿ ಗದ್ದುಗೆ ಪ್ರತಿಷ್ಠಾಪಿಸಿ, ಲಿಂಗ ಸ್ಥಾಪನೆ ಮಾಡಲಾಗುತ್ತದೆ. ಈ ಗರ್ಭಗುಡಿಗೆ ಎರಡು ಎ.ಸಿ. ಅಳವಡಿಕೆ ಮಾಡಿ ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆ ಮಾಡಲಾಗಿದೆ. ಶ್ರೀಗಳು ಐಕ್ಯರಾಗುವ ಮಂದಿರವನ್ನು ಶ್ವೇತವರ್ಣದ ಕಲ್ಲುಗಳಿಂದ ಸುಂದರವಾಗಿ ನಿರ್ಮಿಸಲಾಗಿದೆ.
ಇಪ್ಪತ್ತಾರು ದೇವರು ಬಾಗಿಲ ಕಾಯ್ಪರು
ಶ್ರೀಗಳು ಲಿಂಗೈಕ್ಯರಾಗಲಿರುವ ಗದ್ದುಗೆಯ ಗರ್ಭಗುಡಿ ಶಿಲಾಬಾಗಿಲ ಮೇಲೆ ಇಪ್ಪತ್ತಾರು ದೇವರು, ದೇವ ಸಮಾನರ ಮೂರ್ತಿಗಳನ್ನು ಕೆತ್ತಲಾಗಿದೆ. ಬಾಗಿಲ ಶಿರಸ್ಥಾನದಲ್ಲಿ ಶ್ರೀಗಳ ಮೂರ್ತಿ ಕೆತ್ತಲಾಗಿದೆ. ಬಾಗಿಲ ಎಡ, ಬಲ ಭಾಗದಲ್ಲಿ ಅಷ್ಟದಿಕ್ಪಾಲಕರು, ಸಿದ್ಧಗಂಗಾ ಮಠದ ಆರಾಧ್ಯ ದೈವ ಸಿದ್ಧಲಿಂಗೇಶ್ವರ ಸ್ವಾಮೀಜಿ, ಜಗಜ್ಯೋತಿ ಬಸವಣ್ಣ, ಲಿಂಗೈಕ್ಯ ಗೋಸಲ ಸಿದ್ದೇಶ್ವರ, ಯಡಿಯೂರು ಸಿದ್ದಲಿಂಗೇಶ್ವರ, ಉದ್ಧಾನ ಶಿವಯೋಗಿ, ಅಟವಿ ಶಿವಯೋಗಿ, ಬೇಡರ ಕಣ್ಣಪ್ಪ, ಅಕ್ಕ ಮಹಾದೇವಿ, ಸಿದ್ಧಗಂಗಾ ಮಾತೆ ಸೇರಿದಂತೆ ಇಪ್ಪತ್ತಾರು ಮೂರ್ತಿಗಳನ್ನು ಕೆತ್ತಲಾಗಿದೆ.
ಒಟ್ಟಾರೆ ಇಂದು ಸಂಜೆ 4 ಗಂಟೆ 30 ನಿಮಿಷಕ್ಕೆ ಕ್ರಿಯಾ ಸಮಾಧಿ ನಡೆಯಲಿದ್ದು, ಹಳೆಯ ಮಠಕ್ಕೆ ಅಂಟಿಕೊಂಡಂತೆ ಗದ್ದುಗೆ ನಿರ್ಮಾಣವಾಗಿದೆ. ಶ್ರೀಗಳು ಈ ಸ್ಥಳದಲ್ಲಿ ಲಿಂಗೈಕ್ಯವಾಗಿ ಲಿಂಗದ ರೂಪದಲ್ಲಿ ದರ್ಶನ ನೀಡಲಿದ್ದಾರೆ. ಶ್ರೀಗಳು ಲಿಂಗೈಕ್ಯರಾಗಲಿರುವ ಗರ್ಭಗುಡಿಯಲ್ಲಿ 12 ಅಡಿ ಆಳದ ಸಮಾಧಿ ಗುಂಡಿ ತೆಗೆಯಲಾಗಿದೆ. ಶ್ರೀಗಳ ಕ್ರಿಯಾ ಸಮಾಧಿ ನಡೆಯಲಿರುವ ಭವನವನ್ನು ತಳಿರು ತೋರಣ, ಹೂಗಳಿಂದ ಅಲಂಕರಿಸಲಾಗುತ್ತಿದೆ. ಸಿದ್ದಗಂಗಾ ಶ್ರೀಗಳ ಸಮಾಧಿ ಕಾರ್ಯದ ವೇಳೆ ವಿಭೂತಿ ಗಟ್ಟಿ ಮತ್ತು ಉಪ್ಪನ್ನು ಬಳಸಲಾಗುತ್ತದೆ. ಗದ್ದುಗೆಯ ಗರ್ಭಗುಡಿಯಲ್ಲಿ. ಸ್ಥಳಶುದ್ಧಿ, ಪಂಚಕಳಸ ಪೂಜೆ, ಅಷ್ಟ ದಿಕ್ಪಾಲಕರು, ಸಪ್ತರ್ಷಿಗಳ ಪೂಜೆ ನಡೆಯಲಿದೆ. ತಮ್ಮ ಗುರುಗಳಾದ ಉದ್ಧಾನ ಶಿವಯೋಗಿಗಳ ಗದ್ದುಗೆಯ ಪಕ್ಕದಲ್ಲೇ ಸಿದ್ದಗಂಗಾ ಶ್ರೀ ಚಿರಸ್ಥಾಯಿಯಾಗಲಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos