ಸಾಲುಮರದ ತಿಮ್ಮಕ್ಕ 
ರಾಜ್ಯ

ಸ್ಮರಣಿಕೆಗಳನ್ನು ನನಗೆ ತಿನ್ನಲು ಆಗುತ್ತದೆಯೇ?; 'ಪದ್ಮಶ್ರೀ' ಸಾಲುಮರದ ತಿಮ್ಮಕ್ಕನ ಬೇಸರದ ನುಡಿ

ತಮ್ಮನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದ್ದಕ್ಕೆ ವರ್ಷದ ಸಾಲುಮರದ ...

ಬೆಂಗಳೂರು:ತಮ್ಮನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದ್ದಕ್ಕೆ ವರ್ಷದ ಸಾಲುಮರದ ತಿಮ್ಮಕ್ಕ ಒಂದೆಡೆ ಖುಷಿಯಾಗಿದ್ದರೆ ಇನ್ನೊಂದೆಡೆ ರಾಜ್ಯ ಸರ್ಕಾರ ತಮ್ಮ ಕೆಲಸವನ್ನು ಸರಿಯಾಗಿ ಗುರುತಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಸರ್ಕಾರ ಹಲವು ಪ್ರಶಸ್ತಿಗಳನ್ನು ತಿಮ್ಮಕ್ಕ ಅವರಿಗೆ ನೀಡಿದ್ದರೂ,  ಅವರ ಹೆಸರಿನಲ್ಲಿ ಕೆಲವು ಹಸಿರು ಯೋಜನೆಗಳನ್ನು ಪ್ರಕಟಿಸಿದ್ದರೂ ಕೂಡ ಮಾಸಿಕ ವೃದ್ಯಾಪ್ಯ ವೇತನ ಎಂದು ರಾಜ್ಯ ಸರ್ಕಾರದಿಂದ ತಿಂಗಳಿಗೆ 500 ರೂಪಾಯಿ ಸಹಾಯ ಬಿಟ್ಟರೆ ಇದುವರೆಗೆ ಆರ್ಥಿಕ ನೆರವು ಬೇರೇನು ಸಿಕ್ಕಿಲ್ಲವಂತೆ.

ರಾಜ್ಯ ಸರ್ಕಾರ ಈ ಹಿಂದೆ ಸಾಲುಮರದ ತಿಮ್ಮಕ್ಕನಿಗೆ 2 ಕೋಟಿ ರೂಪಾಯಿ ಮತ್ತು ಅವರ ಹೆಸರಿನಲ್ಲಿ ಒಂದು ತುಂಡು ಭೂಮಿ ನೀಡುವುದಾಗಿ ಭರವಸೆ ನೀಡಿತ್ತು. ಆದರೆ ಅದಿನ್ನೂ ಸಿಕ್ಕಿಲ್ಲ. ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ವರ್ತನೆಯಿಂದ ಬೇಸತ್ತು ತಿಮ್ಮಕ್ಕ ಕಳೆದ ಒಂದು ವರ್ಷದಿಂದ ವೃದ್ಯಾಪ್ಯ ವೇತನ ಪಡೆಯುವುದನ್ನು ಕೂಡ ನಿಲ್ಲಿಸಿದ್ದಾರೆ ಎಂದು ಅವರ ದತ್ತುಪುತ್ರ ಉಮೇಶ್ ಹೇಳುತ್ತಾರೆ. ಹಲವು ಖಾಸಗಿ ಸಂಘ ಸಂಸ್ಥೆಗಳು ನೀಡುವ ಸನ್ಮಾನ, ನಗದು ಬಹುಮಾನಗಳಿಂದ ತಿಮ್ಮಕ್ಕ ಅವರು ಜೀವನ ನಿರ್ವಹಣೆ ಮಾಡುತ್ತಿದ್ದಾರೆ.

ಸಾಲುಮರದ ತಿಮ್ಮಕ್ಕ ಪರಿಸರದ ಉಳಿವು, ಬೆಳವಣಿಗೆಗಾಗಿ ಅವಿರತ ಶ್ರಮವಹಿಸಿದ್ದರೂ ಕೂಡ ಈಗಲೂ ಕಡುಬಡತನದಲ್ಲಿಯೇ ಜೀವನ ಸಾಗಿಸುತ್ತಿರುವುದು. ತಮ್ಮ ಜೀವನಕ್ಕೆ ಏನಾದರೊಂದು ವ್ಯವಸ್ಥೆ ಮಾಡಿಕೊಡಿ ಎಂದು ಹಲವು ಬಾರಿ ಮನವಿ ಮಾಡಿಕೊಂಡರೂ ಕೂಡ ಯಾರೂ ಅವರ ಮಾತನ್ನು ಕೇಳಿಸಿಕೊಂಡಿಲ್ಲ. ಅವರ ಮನೆಗೆ ಹೋಗಿ ನೋಡಿದರೆ ಹಲವು ಪ್ರಶಸ್ತಿ, ಸನ್ಮಾನ ಪತ್ರಗಳು ತುಂಬಿಕೊಂಡಿರುವುದು ನೋಡಬಹುದು ಆದರೆ ಅದರಿಂದ ಹೊಟ್ಟೆ ತುಂಬುತ್ತದೆಯೇ ಎಂಬುದು ಅವರ ಪ್ರಶ್ನೆಯಾಗಿದೆ.

ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪ್ರತಿನಿಧಿಗಳು ಅವರನ್ನು ಮಾತನಾಡಿಸಿದಾಗ ನಾನು ಪ್ರಶಸ್ತಿ, ಸ್ಮರಣಿಕೆಗಳನ್ನು ತಿನ್ನಲು ಸಾಧ್ಯವಿಲ್ಲವಲ್ಲ, ನನ್ನ ಜೀವನಕ್ಕಾಗಿ ಒಂದು ಆರ್ಥಿಕ ವ್ಯವಸ್ಥೆ ಬೇಡವೇ ಎಂದು ತಿಮ್ಮಕ್ಕ ದುಃಖದಿಂದ ಕೇಳುತ್ತಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಮಾಜ ಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ, ಈ ವಿಷಯವನ್ನು ಸದ್ಯದಲ್ಲಿಯೇ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ಗಮನಕ್ಕೆ ತರುತ್ತೇನೆ. ಅವರ ಜೀವನ ನಿರ್ವಹಣೆಗೆ ಏನು ಮಾಡಬಹುದು ಸರ್ಕಾರದಿಂದ ಎಂದು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದರು.

ಸಾಲುಮರದ ತಿಮ್ಮಕ್ಕ ಎಂದು ಜನರಿಂದ ಪ್ರೀತಿಯಿಂದ ಕರೆಸಿಕೊಳ್ಳುವ ತಿಮ್ಮಕ್ಕ ಅವರದ್ದು ಹಲವು ದಶಕಗಳ ಪರಿಸರ ಸೇವೆ. ತಿಮ್ಮಕ್ಕ ಮತ್ತು ಚಿಕ್ಕಯ್ಯ ದಂಪತಿಗೆ ಮದುವೆಯಾಗಿ ಹಲವು ವರ್ಷಗಳಾದರೂ ಮಕ್ಕಳಾಗಲಿಲ್ಲ. ಆ ಕೊರಗನ್ನು ಮರೆಯಲೆಂದು ಖಾಲಿ ಇರುವ ಸ್ಥಳಗಳಲ್ಲೆಲ್ಲ ಆಲದ ಮರದ ಗಿಡ ನೆಟ್ಟು ಅದನ್ನು ತಮ್ಮ ಮಕ್ಕಳಂತೆ ಸಾಕಿ ಬೆಳೆಸಲು ಆರಂಭಿಸಿದರು ದಂಪತಿ. ಬೇಸಿಗೆ ಕಾಲದಲ್ಲಿ ಗಿಡಗಳಿಗೆ ನೀರುಣಿಸುವುದು, ಗೊಬ್ಬರ, ಪೌಷ್ಟಿಕಾಂಶಗಳನ್ನು ಒದಗಿಸುವುದು ಇಂತಹ ಕಾಯಕದಲ್ಲಿ ಸಂತೋಷ ಕಾಣುತ್ತಿದ್ದರು. 1991ರಲ್ಲಿ ತಿಮ್ಮಕ್ಕ ಅವರ ಪತಿ ಚಿಕ್ಕಯ್ಯ ತೀರಿಕೊಂಡರು.

ಪತಿ ತೀರಿಕೊಂಡ ನಂತರ ಗಿಡ ನೆಡುವ ಕಾಯಕವನ್ನು ತಿಮ್ಮಕ್ಕ ಬಿಡಲಿಲ್ಲ. ಇಂದು ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಹುಳಿಕಲ್ ಮತ್ತು ಕುಡೂರಿನಲ್ಲಿ 4 ಕಿಲೋ ಮೀಟರ್ ದೂರದವರೆಗೆ ರಸ್ತೆಯ ಇಕ್ಕೆಲಗಳಲ್ಲಿ ತಿಮ್ಮಕ್ಕ ನೆಟ್ಟ 385 ಆಲದ ಮರಗಳು ದಾರಿಹೋಕರಿಗೆ ನೆರಳನ್ನು ಒದಗಿಸುತ್ತದೆ.

ತಮ್ಮ ನಿಸ್ವಾರ್ಥ ಕೆಲಸಗಳಿಂದ ತಿಮ್ಮಕ್ಕ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. 2016ರಲ್ಲಿ ಬಿಬಿಸಿ ವಾಹಿನಿ ಅವರನ್ನು ಒಬ್ಬ ಪ್ರಭಾವಿ ಮತ್ತು ಸ್ಪೂರ್ತಿಯ ಮಹಿಳೆ ಎಂದು ಹೆಸರಿಸಿತ್ತು. ಅಮೆರಿಕಾದ ಪರಿಸರ ಸಂಘಟನೆಯೊಂದು ಲಾಸ್ ಏಂಜಲೀಸ್ ಮತ್ತು ಓಕ್ ಲ್ಯಾಂಡ್ ನಲ್ಲಿರುವ ತನ್ನ ಕೇಂದ್ರಕ್ಕೆ ತಿಮ್ಮಕ್ಕ ಪರಿಸರ ಶಿಕ್ಷಣ ಸಂಪನ್ಮೂಲ ಕೇಂದ್ರ ಎಂದು ಹೆಸರಿಟ್ಟಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್ ನಲ್ಲಿ 2 ವಾರ ಪೂರೈಸಿದ ಪ್ರತಿಭಟನೆ: ಸರ್ಕಾರಿ ಕಟ್ಟಡಗಳಿಗೆ ಬೆಂಕಿ, ಪ್ರತಿಭಟನಾಕಾರರಿಗೆ 'ಮರಣ ದಂಡನೆ' ಬೆದರಿಕೆ!

"Surely It's Time": ಕೊಹ್ಲಿ ನಿವೃತ್ತಿ ಬಗ್ಗೆ ದೊಡ್ಡ ಸಂದೇಶ ರವಾನಿಸಿದ ಉತ್ತಪ್ಪ!

'ಮನ್ರೇಗಾ ಬಚಾವೋ' ಸಂಗ್ರಾಮ: ಕಾಂಗ್ರೆಸ್ ಪಕ್ಷದಿಂದ ದೇಶಾದ್ಯಂತ 45 ದಿನಗಳ ಹೋರಾಟ ಆರಂಭ!

ಮಹಾರಾಷ್ಟ್ರದಲ್ಲಿ ಸಿಎಂ, ಡಿಸಿಎಂ ಮುಸುಕಿನ ಗುದ್ದಾಟ: ಅಜಿತ್ ಪವಾರ್ ವಿರುದ್ಧ ಫಡ್ನವೀಸ್ ಕಿಡಿ!

ಭಾಷಾ ಮಸೂದೆ ವಿರೋಧಿಸಿ ಸಿದ್ದರಾಮಯ್ಯ ಪತ್ರ: ಕೇರಳ ಸಿಎಂ ಸ್ಪಷ್ಟೀಕರಣ; ಪಿಣರಾಯಿ ವಿಜಯನ್ ಹೇಳಿದ್ದೇನು?

SCROLL FOR NEXT