ರಾಜ್ಯ

ನಮ್ಮ ಮೆಟ್ರೊ ನಿಲ್ದಾಣದೊಳಗೆ ಗರ್ಭಿಣಿಯರಿಗೆ ಪ್ರತ್ಯೇಕ ಪ್ರವೇಶ ವ್ಯವಸ್ಥೆ

Sumana Upadhyaya

ಬೆಂಗಳೂರು: ನಮ್ಮ ಮೆಟ್ರೊ ರೈಲು ನಿಲ್ದಾಣಗಳಲ್ಲಿ ಗರ್ಭಿಣಿಯರಿಗೆ ಮತ್ತು ವಯೋವೃದ್ಧರಿಗೆ ಸುಲಭವಾಗುವ ನಿಟ್ಟಿನಲ್ಲಿ ನಿಗಮ ಹಲವು ಕ್ರಮಗಳನ್ನು ಕೈಗೊಂಡಿದೆ.

ಇನ್ನು ಮುಂದೆ ಗರ್ಭಿಣಿಯರು ಮೆಟ್ರೊ ನಿಲ್ದಾಣದ ಒಳಗೆ ಪ್ಲಾಟ್ ಫಾರ್ಮ್ ಪ್ರವೇಶಿಸಲು ಸ್ವಯಂಚಾಲಿತ ಟೋಕನ್ ಸಂಗ್ರಹ (ಎಎಫ್​ಸಿ) ಗೇಟ್ ಮೂಲಕ ಹೋಗುವ ಬದಲು ಸಿಬ್ಬಂದಿ ಗೇಟ್ ಬಳಸಲು ಬೆಂಗಳೂರು ಮೆಟ್ರೊ ರೈಲು ಸಂಚಾರ ನಿಗಮ(ಬಿಎಂಆರ್ ಸಿಎಲ್) ಅವಕಾಶ ಕಲ್ಪಿಸಲಿದೆ.

ನಿಲ್ದಾಣಗಳಲ್ಲಿ ಸ್ಮಾರ್ಟ್​ಕಾರ್ಡ್​ನಲ್ಲಿ ಪ್ರಯಾಣಿಸುವ ಪ್ರಯಾಣಿಕರಾಗಲಿ ಅಥವಾ ಟೋಕನ್ ಪಡೆದ ಪ್ರಯಾಣಿಕರಾಗಲಿ ಎಲ್ಲರೂ ಎಎಫ್​ಸಿ ಗೇಟ್ ಮುಖಾಂತರವೇ ಪ್ಲಾಟ್ ಫಾರ್ಮ್ ಪ್ರವೇಶಿಸಬೇಕಾಗುತ್ತದೆ. ಸ್ಮಾರ್ಟ್​ಕಾರ್ಡ್, ಟೋಕನ್ ನ್ನು ಇಂತಹ ಗೇಟ್ ಮೇಲೆ ಇರಿಸಿದ ತಕ್ಷಣದಲ್ಲೇ ಗೇಟ್ ಬಾಗಿಲು ತೆರೆಯುತ್ತವೆ. ವ್ಯಕ್ತಿ ಇದನ್ನು ದಾಟಿ ಹೋದ ತಕ್ಷಣದಲ್ಲೇ ಮುಚ್ಚುತ್ತದೆ.

ದಾಟುವ ಮೊದಲೇ ಗೇಟ್ ಮುಚ್ಚಿದರೆ ಏನಾದರೂ ಅಪಾಯ ಸಂಭವಿಸಬಹುದು ಎಂಬ ಆತಂಕ ಬಹುತೇಕ ವೃದ್ಧರಲ್ಲಿ ಹಾಗೂ ಗರ್ಭಿಣಿಯರಲ್ಲಿದೆ. ರಾಜಾಜಿನಗರ, ಟ್ರಿನಿಟಿ ಸೇರಿ ಹಲವು ನಿಲ್ದಾಣಗಳಲ್ಲಿ ಗರ್ಭಿಣಿಯರು ಈ ಬಗೆಯ ಸಮಸ್ಯೆ ಎದುರಿಸಿದ್ದಾರೆ. ಈ ವಿಷಯವನ್ನು ಅಧಿಕಾರಿಗಳಿಗೆ ಸಿಬ್ಬಂದಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಿಗಮ ಮುಂದಿನ ದಿನಗಳಲ್ಲಿ ಗರ್ಭಿಣಿಯರು ಎಎಫ್​ಸಿ ಗೇಟ್ ಪಕ್ಕದಲ್ಲೇ ಇರುವ ಗಾಜಿನ ಬಾಗಿಲಿನ ಮೂಲಕ ಪ್ಲಾಟ್​ಫಾಮ್ರ್ ಪ್ರವೇಶಿಸಲು ಅನುವು ಮಾಡಲಿದೆ.

ನಿಲ್ದಾಣಕ್ಕೆ ಪ್ರವೇಶಿಸುವ ಮೊದಲು ಭದ್ರತೆಗಾಗಿ ಪುರುಷ ಪ್ರಯಾಣಿಕರು ಮೆಟಲ್ ಡಿಟೆಕ್ಟರ್ (ಲೋಹ ಶೋಧಕ) ಮೂಲಕ ಹಾದು ಹೋಗಬೇಕು. ಮಹಿಳೆಯರನ್ನು ಮಹಿಳಾ ಸಿಬ್ಬಂದಿಯೇ ಪ್ರತ್ಯೇಕವಾದ ಕೊಠಡಿಯಲ್ಲಿ ಮೆಟಲ್ ಡಿಟೆಕ್ಟರ್ ಮೂಲಕ ಪರೀಕ್ಷಿಸುತ್ತಿದ್ದಾರೆ. ಹಲವು ಗರ್ಭಿಣಿಯರು ಈ ಕುರಿತೂ ಆತಂಕ ವ್ಯಕ್ತಪಡಿಸಿದ್ದಾರೆ.

ನಿಲ್ದಾಣಕ್ಕೆ ಪ್ರವೇಶಿಸಿದ ನಂತರ ಪ್ರತಿಯೊಬ್ಬ ಪ್ರಯಾಣಿಕರ ಬ್ಯಾಗ್​ಗಳನ್ನು ಎಕ್ಸ್​ರೇ  ಸ್ಕ್ಯಾನ್​ ಮೂಲಕ ಸಿಬ್ಬಂದಿ ಪರಿಶೀಲಿಸುತ್ತಾರೆ. ಅನೇಕರು ಊಟ, ತಿಂಡಿಯನ್ನು ಬ್ಯಾಗ್​ನಲ್ಲಿ ಒಯ್ಯುತ್ತಾರೆ. ಸ್ಕ್ಯಾನ್​ ಮಾಡಿದ ಸಂದರ್ಭದಲ್ಲಿ ಸೇವಿಸುವ ಆಹಾರಕ್ಕೆ ಸಮಸ್ಯೆಯಾಗುತ್ತದೆಯೇ ಎನ್ನುವ ಅನುಮಾನವೂ ಪ್ರಯಾಣಿಕರಲ್ಲಿದೆ. ಆದರೆ ಇದರಿಂದ ಆಹಾರಕ್ಕೆ ಯಾವುದೇ ರೀತಿಯ ಹಾನಿಯುಂಟಾಗುವುದಿಲ್ಲ ಎಂದು ಮೆಟ್ರೊ ನಿಗಮದ ಸಾರ್ವಜನಿಕ ಸಂಪರ್ಕಾಧಿಕಾರಿ ಸ್ಪಷ್ಟಪಡಿಸಿದ್ದಾರೆ.

SCROLL FOR NEXT