ರಾಜ್ಯ

ಮದ್ಯ ನಿಷೇಧ ಆಗ್ರಹಿಸಿ ಬೀದಿಗಿಳಿದ 4,000 ಮಹಿಳೆಯರು: ಸಂಪೂರ್ಣ ನಿಷೇಧ ಆಸಾಧ್ಯ ಎಂದ ಸಿಎಂ

Manjula VN
ಬೆಂಗಳೂರು: ಮದ್ಯಪಾನ ನಿಷೇಧ ಹೋರಾಟ ಸಮಿತಿ ನೇತೃತ್ವದಲ್ಲಿ ನಾಡಿನ ಎಲ್ಲೆಡೆಯಿಂದ ಆಗಮಿಸಿ ಸಂಪೂರ್ಣ ಮದ್ಯ ನಿಷೇಧಕ್ಕೆ ರಾಜಧಾನಿಯಲ್ಲಿ ಉಗ್ರ ಹೋರಾಟ ನಡೆಸಿದ ಮಹಿಳೆಯರ ಪ್ರತಿನಿಧಿಗಳು ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ನಡುವಿನ ಸಂಧಾನ ವಿಫಲಗೊಂಡಿದೆ. 
ಸಂಧಾನ ಮಾತುಕತೆ ವಿಫಲಗೊಂಡಿರುವ ಹಿನ್ನಲೆಯಲ್ಲಿ ಪ್ರತಿಭಟನೆ ಮುಂದುವರೆಸಲು ಮಹಿಳಾ ಪ್ರತಿಭಟನಾಕಾರರು ನಿರ್ಧರಿಸಿದ್ದು, ಈ ಹಿನ್ನಲೆಯಲ್ಲಿ ಪೊಲೀಸರು ಒತ್ತಾಯಪೂರ್ವಕವಾಗಿ ಪ್ರತಿಭಟನಾಕಾರರನ್ನು ಚದುರಿಸಿದ ಘಟನೆ ಬುಧವಾರ ನಡೆದಿದೆ. 
ನಿನ್ನೆ ಇಡೀ ದಿನ ಪ್ರತಿಭಟನೆ ನಡೆದ ಹಿನ್ನಲೆಯಲ್ಲಿ ಮಹಿಳಾ ಹೋರಾಟಗಾರರ ಪ್ರತಿನಿಧಿಗಳಾದ ರಂಗಕರ್ಮಿ ಪ್ರಸನ್ನ ಹಾಗೂ ಸ್ವರ್ಣ ಭಟ್ ಅವರೊಂದಿಗೆ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಸಂಧಾನ ಮಾತುಕತೆ ನಡೆಸಿದರು. ಆದರೆ, ಈ ಮಾತುಕತೆ ವಿಫಲಗೊಂಡಿತು. 
ಏಕಾಏಕಿ ಮದ್ಯ ನಿಷೇಧ ಜಾರಿಗೆ ತರುವುದು ಸಾಧ್ಯವಿಲ್ಲ. ಈ ಬಗ್ಗೆ ನಿಮ್ಮನ್ನು ಒಳಗೊಂಡು ಪ್ರತ್ಯೇಕ ಸಭೆ ನಡೆಸುತ್ತೇನೆ. ಈಗ ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿಕೊಂಡರು. ಆದರೆ, ಇದಕ್ಕೆ ಪ್ರತಿಭಟನಾಕಾರರು ಜಗ್ಗಲಿಲ್ಲ. ಪ್ರತಿಭಟನೆ ನಡೆಸುತ್ತಿದ್ದ ರಸ್ತೆಗಳಲ್ಲಿಯೇ ಹೋರಾಟ ಮುಂದುವರೆಸುವುದಾಗಿ ಘೋಷಣೆ ಮಾಡಿದರು. ಈ ವೇಳೆ ಪೊಲೀಸರು ಪ್ರತಿಭಟನೆಯನ್ನು ಫ್ರೀಡಂಪಾರ್ಕ್ ಆವರಣಕ್ಕೆ ಸ್ಥಳಾಂತರಿಸುವಂತೆ ಮನವಿ ಮಾಡಿಕೊಂಡರೂ ಇದಕ್ಕೆ ಪ್ರತಿಭಟನಾಕಾರರು ಕಿವಿಕೊಟ್ಟಿಲ್ಲ. 
ನಮ್ಮನ್ನು ಬಂಧಿಸಿ, ಆದರೆ, ಹೋರಾಟ ಸ್ಥಳಾಂತರಿಸುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದರು. ಈ ವೇಳೆ ಹೋರಾಟಗಾರರ ಪ್ರತಿನಿಧಿಗಳು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿಗಳೂ ಕೂಡ ನಡೆದವು. ಹೋರಾಟಗಾರರು ತಮ್ಮ ಮನವಿಗೆ ಒಪ್ಬದ ಹಿನ್ನಲೆಯಲ್ಲಿ ಅನಿವಾರ್ಯವಾಗಿ ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸುವ ಯತ್ನ ನಡೆಸಿದರು. ಕೆಲವರನ್ನು ವಿವಿಧ ಪೊಲೀಸ್ ಠಾಣೆಗಳಿಗೆ ಕರೆದೊಯ್ದು ಊರುಗಳಿಗೆ ಹೋಗಲು ವ್ಯವಸ್ಥೆ ಮಾಡಿದರು. 
ಆದಾಯ ತೆರಿಗೆಯಿಂದಾಗಿ ರಾಜ್ಯಕ್ಕೆ ಬರುತ್ತಿರುವ ಆದಾಯ ಬಹಳ ಕಡಿಮೆಯಾಗಿದೆ. ರಾಜ್ಯದಲ್ಲಿ ಮೈತ್ರಿ ಸರ್ಕಾರ ಆಡಳಿತ ನಡೆಸುತ್ತಿದ್ದು, ಈ ಬಗ್ಗೆ ಒಮ್ಮೆಲೆ ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ. ಮದ್ಯ ನಿಷೇಧ ಕುರಿತು ನಿರ್ಧಾರ ಕೈಗೊಳ್ಳಲು ಕಾಲಾವಕಾಶ ಬೇಕಿದೆ. ಸಂಪೂರ್ಣ ಮದ್ಯ ನಿಷೇಧ ಮಾಡುವುದಕ್ಕೂ ಮುನ್ನ ಈ ವಿಚಾರದ ಹಿಂದಿರುವ ಸಾಧಕ ಬಾಧಕಗಳನ್ನು ಪರಿಶೀಲನೆ ನಡೆಸಬೇಕಿದೆ ಎಂದು ಕುಮಾರಸ್ವಾಮಿಯವರು ಹೇಳಿದ್ದಾರೆ. 
ಪ್ರತಿಭಟನೆಗೆ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿಯವರೂ ಕೂಡ ಬೆಂಬಲ ಸೂಚಿಸಿದ್ದಾರೆ. ಮಲ್ಲೇಶ್ವರಂಗೆ ಆಗಮಿಸಿದ್ದ ದೊರೆಸ್ವಾಮಿಯವರು ಮಹಿಳೆಯರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಅಲ್ಲದೆ, ಮದ್ಯ ನಿಷೇಧ ಮಾಡುವಂತೆ ಸಿಎಂ ಕುಮಾರಸ್ವಾಮಿಯವರ ಬಳಿ ಮನವಿ ಮಾಡಿಕೊಂಡಿದ್ದಾರೆ. 
SCROLL FOR NEXT