ರಾಜ್ಯ

ನಿಯಮ ಉಲ್ಲಂಘನೆ: ಇಂದಿರಾ ಕ್ಯಾಂಟೀನ್ ಪ್ರಮುಖ ಗುತ್ತಿಗೆದಾರರಿಗೆ ರೂ.1.32 ಕೋಟಿ ದಂಡ

Manjula VN
ಬೆಂಗಳೂರು: ಶುಚಿತ್ವ ಕಾಪಾಡದಿರುವುದು ಆಹಾರ ಪೂರೈಕೆಯಲ್ಲಿ ತಡ, ನಿಯಮ ಉಲ್ಲಂಘನೆ, ಸಿಬ್ಬಂದಿ ದುರ್ನಡತೆ ಸೇರಿದಂತೆ ಹಲವು ಕಾರಣಗಳಿಗಾಗಿ ಇಂದಿರಾ ಕ್ಯಾಂಟೀನ್'ನ ಎರಡು ಪ್ರಮುಖ ಗುತ್ತಿಗೆದಾರ ಸಂಸ್ಥೆಗಳಿಗೆ ಬರೋಬ್ಬರಿ ರೂ.1.32 ಕೋಟಿ ದಂಡ ವಿಧಿಸಲಾಗಿದೆ ಎಂದು ತಿಳಿದುಬಂದಿದೆ. 
ಇಂದಿರಾ ಕ್ಯಾಂಟೀನ್ ಆರಂಭವಾದಾಗಿನಿಂದಲೇ ಕ್ಯಾಂಟೀನ್ ನಿರ್ವಹಣೆ ಮೇಲೆ ಕಣ್ಣಿಟ್ಟಿದ್ದ ಬಿಬಿಎಂಪಿ, ನಿವೃತ್ತ  ಮಾರ್ಷಲ್ ಗಳನ್ನು ಜ್ಯೂನಿಯರ್ ಕಮಿಷನ್ಟ್ ಆಫೀಸರ್ಸ್'ಗಳನ್ನು ನೇಮಕ ಮಾಡಿತ್ತು. ಕ್ಯಾಂಟೀನ್ ಬರುವ ಜನರು ನೀಡಿದ ಪ್ರತಿಕ್ರಿಯೆ ಹಾಗೂ ದೂರುಗಳ ಆಧಾರದ ಮೇಲೆ ಇದೀಗ ಪ್ರಮುಖ ಗುತ್ತಿಗೆದಾರ ಸಂಸ್ಥೆಗಳಾದ ಚೆಫ್'ಟಾಕ್ ಹಾಗೂ ರಿವಾರ್ಡ್ಸ್'ಗೆ ದಂಡ ವಿಧಿಸಲಾಗಿದೆ ಎಂದು ವರದಿಗಳು ತಿಳಿಸಿವೆ. 
ಬಿಬಿಎಂಪಿ ಮಾರ್ಷಲ್ ಗಳು ಚೆಫ್ ಟಾಕ್ ಹಾಗೂ ರಿವಾರ್ಡ್ಸ್ ಸಂಸ್ಥೆಗಳಿಂದ ರೂ.1,32,38,450 ದಂಡವನ್ನು ಸಂಗ್ರಹಿಸಲಿದೆ ಎಂದು ವರದಿಗಳು ತಿಳಿಸಿವೆ. 
ನಗರದಲ್ಲಿರುವ ಹಲವು ಇಂದಿರಾ ಕ್ಯಾಂಟೀನ್ ಗಳಿಗೆ ಅಧಿಕಾರಿಗಳು ಭೇಟಿ ನೀಡಿ ತಪಾಸಣೆ ನಡೆಸಿದ್ದರು. ಕ್ಯಾಂಟೀನ್ ಗೆ ಬರುವ ಗ್ರಾಹಕರಿಂದಲೂ ಪ್ರತಿಕ್ರಿಯೆ ಹಾಗೂ ದೂರುಗಳನ್ನು ಸ್ವೀಕರಿಸಿದ್ದರು. ಈ ವೇಳೆ ನಿಯಮ ಉಲ್ಲಂಘನೆ ಮಾಡಿರುವುದು ಕಂಡು ಬಂದಿದ್ದು, ಈ ಬಗ್ಗೆ ವರದಿ ಸಿದ್ಧಪಡಿಸಿ ಕ್ಯಾಂಟೀನ್ ನಿರ್ವಾಹಕರಿಂದ ಸಹಿ ಪಡೆದು ಬಿಬಿಎಂಪಿಗೆ ಸಲ್ಲಿಸಿತ್ತು ಎಂದು ಕೆಇಡಬ್ಲ್ಯೂಎಸ್ಎ ಅಧ್ಯಕ್ಷ ಕರ್ನಲ್. ರಾಜ್ಬೀರ್ ಸಿಂಗ್ ಅವರು ಹೇಳಿದ್ದಾರೆ. 
ಕೆಇಡಬ್ಲ್ಯೂಎಸ್ಎ ಸಲ್ಲಿಸಿದ ವರದಿ ಆಧರಿಸಿ ಬಿಬಿಎಂಪಿ ದಂಡವನ್ನು ವಿಧಿಸಿದ್ದು, ಗುತ್ತಿಗೆದಾರ ಸಂಸ್ಥೆಗಳಿಗೆ ನೀಡಬೇಕಿದ್ದ ಹಣದಲ್ಲಿಯೇ ದಂಡದ ಮೊತ್ತವನ್ನು ಕಡಿತಗೊಳಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 
ಇಂದಿರಾ ಕ್ಯಾಂಟೀನ್ ಗಳ ಗುಣಮಟ್ಟತೆ ಕಾಪಾಡುವ ಸಲುವಾಗಿ ಮಾರ್ಷಲ್ ಗಳನ್ನು ಬಿಬಿಎಂಪಿ ನೇಮಕ ಮಾಡಿತ್ತು. ಇದರಂತೆ ಮಾರ್ಷಲ್ ಗಳು ಪ್ರತೀನಿತ್ಯ ವರದಿಗಳನ್ನು ಸಲ್ಲಿಸುತ್ತಿದ್ದರು. ಕ್ಯಾಂಟೀನ್ ಗಳ ನಿರ್ವಾಹಕರು ಸಹಿ ಮಾಡಿದ ವರದಿಗಳನ್ನು ಆಧರಿಸಿ ಗುತ್ತಿಗೆದಾರ ಸಂಸ್ಥೆಗಳಿಗೆ ದಂಡವನ್ನು ವಿಧಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ್ ಪ್ರಸಾದ್ ಅವರು ಹೇಳಿದ್ದಾರೆ. 
ಚೆಫ್'ಟಾಕ್ ಹಾಗೂ ರಿವಾರ್ಡ್ಸ್ ಗುತ್ತಿಗೆದಾರ ಸಂಸ್ಥೆಗಳಿಗೆ ಈ ವರೆಗೂ ನಾವು ರೂ.1.32 ಕೋಟಿಯಷ್ಟು ದಂಡವನ್ನು ವಿಧಿಸಿದ್ದೇವೆ. ಆಯಾ ತಿಂಗಳಿನಲ್ಲಿ ನೀಡಬೇಕಿದ್ದ ಹಣದಲ್ಲಿಯೇ ದಂಡದ ಹಣವನ್ನು ಕಡಿತಗೊಳಿಸುವಂತೆ ಬಿಬಿಎಂಪಿಗೆ ವರದಿಯಲ್ಲಿ ತಿಳಿಸಿದ್ದೇವೆಂದು ರಾಜ್ಬೀರ್ ಸಿಂಗ್ ಅವರು ತಿಳಿಸಿದ್ದಾರೆ. 
SCROLL FOR NEXT