ತುಮಕೂರು: ಕೇಂದ್ರದಲ್ಲಿ ನಮಗೆ ಅಧಿಕಾರ ಸಿಕ್ಕರೆ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಗೆ ಅವರಿಗೆ ಖಂಡಿತ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸುತ್ತೇವೆ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಗುರುವಾರ ಹೇಳಿದ್ದಾರೆ.
ಇಂದು ಸಿದ್ಧಗಂಗಾ ಮಠದಲ್ಲಿ ನಡೆದ ಶಿವಕುಮಾರ ಸ್ವಾಮಿಜೀಯ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಿಎಂ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ನಮಗೆ(ಮಹಾಮೈತ್ರಿ) ಅಧಿಕಾರ ಸಿಕ್ಕರೆ ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ಕೊಡಿಸುವ ದಿಸೆಯಲ್ಲಿ ಯತ್ನಿಸೋಣ ಎಂದು ನಾನು ಮತ್ತು ಉಪ ಮುಖ್ಯಮಂತ್ರಿ ಪರಮೇಶ್ವರ್ ಅವರು ಚರ್ಚಿಸಿದ್ದೇವೆ. ಮುಂದಿನ ಆರೇಳು ತಿಂಗಳಲ್ಲಿ ನಾವು ಈ ಬಗ್ಗೆ ತೀರ್ಮಾನ ಮಾಡುತ್ತೇವೆ. ಇದನ್ನು ಜನ ಸೂಕ್ಷ್ಮವಾಗಿ ಅರ್ಥ ಮಾಡಿಕೊಳ್ಳಬೇಕು ಮತ್ತು ನಮಗೆ ಶಕ್ತಿ ತುಂಬಬೇಕು ಎಂದರು.
ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ನೀಡಬೇಕು ಎನ್ನುವ ಕೂಗು ಜನರಿಂದ ಕೇಳಿಬರುತ್ತಿದೆ. ಕೇಂದ್ರ ಸರ್ಕಾರ ಶ್ರೀಗಳಿಗೆ ಭಾರತ ರತ್ನ ನೀಡಿದ್ದರೆ ಆ ಪ್ರಶಸ್ತಿಗೇ ಗೌರವ ಬರುತ್ತಿತ್ತು ಎಂದರು.
ಎಲ್ಲಾ ಪಕ್ಷಗಳ ರಾಜಕೀಯ ಮುಖಂಡರು ಭಿನ್ನಾಭಿಪ್ರಾಯ ಮರೆತು ಸ್ವಾಮೀಜಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದರು. ಇಂದೂ ಸಹ ಪಾಲ್ಗೊಂಡಿದ್ದೇವೆ. ಇದು ಈ ಕ್ಷೇತ್ರದ ಶಕ್ತಿ. ಹೊರಗೆ ನಾವು ಏನೆಲ್ಲ ಸಂಘರ್ಷ ಮಾಡಬಹದು. ಆದರೆ ಈ ನೆಲದಲ್ಲಿ ರಾಜಕೀಯ ನಾಯಕರು ಸಹೋದರರು ಎಂದು ಸಿಎಂ ಹೇಳಿದರು.