ರಾಜ್ಯ

ಲಂಚ ಸ್ವೀಕಾರ: ಹುಬ್ಬಳ್ಳಿಯ ಉಪನ್ಯಾಸಕನಿಗೆ ಕಡ್ಡಾಯ ನಿವೃತ್ತಿ

Nagaraja AB
ಬೆಂಗಳೂರು: ವಿದ್ಯಾರ್ಥಿಯೊಬ್ಬರಿಂದ ಲಂಚ ಪಡೆದದ್ದು ಸಾಬೀತಾದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಉಪನ್ಯಾಸಕರೊಬ್ಬರನ್ನು ಕಡ್ಡಾಯ ನಿವೃತ್ತಿ ಮೇರೆಗೆ ಮನೆಗೆ ಕಳುಹಿಸಲಾಗಿದೆ. ಉಪನ್ಯಾಸಕ ಇರ್ಷಾದ್ ಅಹಮ್ಮದ್ ಶಂಸುದ್ದೀನ್ ಪೀರ್ ಜಾದೆ ಅವರನ್ನು ರಾಜ್ಯಸರ್ಕಾರದ  ಸೇವೆಯಿಂದ ಕಡ್ಡಾಯ ನಿವೃತ್ತಿಗೊಳಿಸಲಾಗಿದೆ. 
ಹುಬ್ಬಳ್ಳಿಯ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್  ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಉಪನ್ಯಾಸಕರಾಗಿದ್ದ ಪೀರ್ ಜಾದೆ, ಪಾಸ್ ಆಗಲು ಪ್ರಾಯೋಗಿಕ ಅಂಕ ನೀಡುವುದಾಗಿ ವಿದ್ಯಾರ್ಥಿಯೊಬ್ಬರಿಂದ ಲಂಚ ಸ್ವೀಕರಿಸುತ್ತಿದ್ದಾಗ ಸಿಕ್ಕಿ ಬಿದಿದ್ದರು. 
ನಾಲ್ಕನೇ ಸೆಮಿಸ್ಟರ್ ವಿದ್ಯಾರ್ಥಿ ವಿಜಯಕಾಂತ ರಾಮಕೃಷ್ಣ ನಾಯಕ್ ಎಂಬವರಿಂದ 6 ಸಾವಿರ ರೂಪಾಯಿ ಲಂಚ ಪಡೆದಿರುವುದು ದೃಢಪಟ್ಟಿದೆ ಎಂದು ಉಪ ಲೋಕಾಯುಕ್ತರು ಸಲ್ಲಿಸಿದ್ದ ವರದಿ ಆಧಾರದ ಮೇಲೆ ಪ್ರಕರಣ ನಡೆದು 12 ವರ್ಷಗಳ ನಂತರ  ಪೀರ್ ಜಾದೆ ಅವರಿಗೆ ಕಡ್ಡಾಯ ನಿವೃತ್ತಿ ಘೋಷಿಸಿ ಉನ್ನತ ಶಿಕ್ಷಣ ಇಲಾಖೆ ಮಧ್ಯಂತರ ಆದೇಶವನ್ನು ಹೊರಡಿಸಿದೆ. 
ಪ್ರಾಥಮಿಕ ತನಿಖೆಯಲ್ಲೂ ಲಂಚ ಸ್ವೀಕಾರ ದೃಢಪಟ್ಟಿತ್ತು. ಪೀರ್ ಜಾದೆ  ಅವರನ್ನು ಸೇವೆಯಿಂದ ಕಡ್ಡಾಯ ನಿವೃತ್ತಗೊಳಿಸಬೇಕೆಂದು ಉಪ ಲೋಕಾಯುಕ್ತರು ವರದಿ ನೀಡಿದ್ದರು. ಆದ್ದರಿಂದ ಸರ್ಕಾರ ಶೋಕಾಷ್ ನೋಟಿಸ್ ಜಾರಿ ಮಾಡಿದೆ. 
ಲಂಚಕ್ಕಾಗಿ ಒತ್ತಾಯ ಹಾಗೂ ಸ್ವೀಕಾರ ಸಾಬೀತಾಗಿದ್ದು, ರಾಜ್ಯ ನಾಗರಿಕ ಸೇವಾ ನಿಯಮಗಳು 1957ರ ವಿನಾಯಿತಿಯಂತೆ  ಪೀರ್ ಜಾದೆ ಅವರಿಗೆ ಕಡ್ಡಾಯ ನಿವೃತ್ತಿಗೊಳಿಸಲಾಗಿದೆ ಎಂದು ಸರ್ಕಾರದ ಅಧೀನ ಕಾರ್ಯದರ್ಶಿ ತಿಳಿಸಿದ್ದಾರೆ
SCROLL FOR NEXT