ರಾಜ್ಯ

ಶಾಲಾ ಆವರಣ ಸುತ್ತ ಗಿಡ ನೆಡುವಂತೆ ಸುತ್ತೋಲೆ ಹೊರಡಿಸಿದ ರಾಜ್ಯ ಸರ್ಕಾರ

Sumana Upadhyaya
ಬೆಂಗಳೂರು: ಶಾಲಾ ಆವರಣದಲ್ಲಿ ಹಣ್ಣು ಮತ್ತು ಔಷಧಿಗಳ ಗಿಡ ನೆಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಖಾಸಗಿ ಮತ್ತು ಸರ್ಕಾರಿ ಶಾಲಾ ಆಡಳಿತ ಮಂಡಳಿಗೆ ಆದೇಶ ಹೊರಡಿಸಿದೆ. ಈ ವರ್ಷವಿಡೀ ರಾಜ್ಯ ಸರ್ಕಾರ ಜಲವರ್ಷ ಆಚರಿಸುತ್ತಿದ್ದು ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಸರ್ಕಾರ ಗಿಡ ನೆಡುವ ಅಭಿಯಾನ ಹಮ್ಮಿಕೊಂಡಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆ ಹೊರಡಿಸಿರುವ ಸುತ್ತೋಲೆಯಲ್ಲಿ, ಅಂತರ್ಜಲ ಹೆಚ್ಚಳಕ್ಕೆ ಗಿಡಗಳನ್ನು ನೆಟ್ಟು ಬೆಳೆಸುವುದು ಅತ್ಯಗತ್ಯ ಎಂದು ಮಕ್ಕಳಿಗೆ ಮನವರಿಕೆ ಮಾಡಿಕೊಡಬೇಕು. ತೋಟಗಾರಿಕೆ ಇಲಾಖೆ, ಅರಣ್ಯ ಇಲಾಖೆ ಜೊತೆ ಸೇರಿ ಶಾಲಾ ಆಡಳಿತ ವ್ಯವಸ್ಥಾಪಕ ಮಂಡಳಿ ಗಿಡ ನೆಡುವ ಅಭಿಯಾನ ಕೈಗೊಳ್ಳಲಿದೆ. ಶಾಲಾ ಆವರಣದ ಸುತ್ತಮುತ್ತ ಗಿಡ ನೆಡುವ ಪ್ರಯೋಗ ನಡೆಸಲಿದ್ದಾರೆ. ಇದಕ್ಕಾಗಿ ಔಷಧಿ ಮತ್ತು ಹಣ್ಣುಗಳ ಗಿಡಗಳನ್ನು ಆಯ್ಕೆ ಮಾಡಿಕೊಂಡಿದೆ ಎಂದು ವಿವರಿಸಲಾಗಿದೆ. 
ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ನೀರಿನ ಸಂರಕ್ಷಣೆ ಮತ್ತು ಪರಿಸರ ಕುರಿತು ಚಿತ್ರ ಬಿಡಿಸುವ ಸ್ಪರ್ಧೆ, ಪ್ರಬಂಧ, ಚರ್ಚಾ ಸ್ಪರ್ಧೆ, ಫ್ಯಾನ್ಸಿ ಡ್ರೆಸ್, ಸ್ಕಿಟ್, ರಸಪ್ರಶ್ನೆ ಏರ್ಪಡಿಸಬೇಕು. ಬೆಳಗ್ಗೆ ಪ್ರಾರ್ಥನೆ ಸಮಯದಲ್ಲಿ ಮತ್ತು ಮಕ್ಕಳು ಎಲ್ಲರೂ ಒಟ್ಟಾಗಿ ಸೇರುವ ಇತರ ಸಂದರ್ಭಗಳಲ್ಲಿ ಶಾಲಾ ಆಡಳಿತ ಮಂಡಳಿ ಮಕ್ಕಳಲ್ಲಿ ನೀರಿನ ಮತ್ತು ಪರಿಸರ ಸಂರಕ್ಷಣೆ ಕುರಿತು ಹೇಳಿಕೊಡಬೇಕು. ಶಾಲಾ ಕಟ್ಟಡಗಳಲ್ಲಿ ಮಳೆ ನೀರು ಕೊಯ್ಲು ವಿಧಾನಗಳನ್ನು ಅಳವಡಿಸಬೇಕು. ನೀರಿನ ಅಗತ್ಯಗಳು ಮತ್ತು ಸಂರಕ್ಷಣೆ ಹಾಗೂ ಗಿಡ ಮರಗಳನ್ನು ಕಾಪಾಡುವ ಬಗ್ಗೆ ಮಕ್ಕಳಿಗೆ ಹೇಳಿಕೊಡಲು ಪರಿಸರ ತಜ್ಞರನ್ನು  ಕರೆಸಬೇಕು ಎಂದು ಸುತ್ತೋಲೆಯಲ್ಲಿ ಸರ್ಕಾರ ಆದೇಶ ಹೊರಡಿಸಿದೆ.
SCROLL FOR NEXT