ರಾಜ್ಯ

ಐಎಂಎ ಹಗರಣ: ಬೆಂಗಳೂರು ನಗರ ಜಿಲ್ಲಾಧಿಕಾರಿ ವಿಜಯ್ ಶಂಕರ್ 3 ದಿನ ಎಸ್ಐಟಿ ವಶಕ್ಕೆ

Lingaraj Badiger
ಬೆಂಗಳೂರು: ಐಎಂಎ ಕಂಪನಿಯ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿ ವಿಜಯ್ ಶಂಕರ್ ಅವರನ್ನು ಹೆಚ್ಚಿನ ವಿಚಾರಣೆಗಾಗಿ ಮೂರು ದಿನಗಳ ವಿಶೇಷ ತನಿಖಾ ತಂಡ(ಎಸ್ಐಟಿ)ದ ವಶಕ್ಕೆ ನೀಡಿ ಬೆಂಗಳೂರು ಜಿಲ್ಲಾ ಪ್ರಧಾನ ನ್ಯಾಯಾಲಯ ಆದೇಶ ಹೊರಡಿಸಿದೆ.
ನ್ಯಾಯಾಲಯದ ಈ ತೀರ್ಮಾನದಿಂದ ವಿಜಯಶಂಕರ್ ಸೇವೆಯಿಂದ ಅಮಾನತುಗೊಳ್ಳುವ ಸಾಧ್ಯತೆಗಳು ದಟ್ಟವಾಗಿವೆ.
ಸೋಮವಾರ ವಿಜಯ ಶಂಕರ್ ಅವರನ್ನು ಬಂಧಿಸಿದ್ದ ಎಸ್ ಐಟಿ ಪೊಲೀಸರು ಇಂದು ಸಂಜೆ 4.30ರ ಸುಮಾರಿಗೆ ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ಆರೋಪಿಯನ್ನು ತಮ್ಮ ವಶಕ್ಕೆ ನೀಡುವಂತೆ ಮನವಿ ಮಾಡಿದರು. ಸುಮಾರು 45 ನಿಮಿಷಗಳ ಕಾಲ ವಿಚಾರಣೆ ನಡೆಸಿದ ನ್ಯಾಯಾಧೀಶ ಶಿವಶಂಕರ್ ಬಿ ಅಮರಣ್ಣ ಅವರು, ಆರೋಪಿಯನ್ನು ಜುಲೈ 12ರ ವರೆಗೆ ಎಸ್ಐಟಿ ವಶಕ್ಕೆ ನೀಡಿ ಆದೇಶಿಸಿದ್ದಾರೆ.
ಗ್ರಾಮ ಲೆಕ್ಕಿಗ ಮಂಜುನಾಥ್ ಅವರ ಮೂಲಕ ಐಎಂಎ ಸಂಸ್ಥಾಪಕ ಮನ್ಸೂರ್ ಅಲಿ ಖಾನ್ ಅವರಿಂದ 4.5 ಕೋಟಿ ರುಪಾಯಿ ಲಂಚ ಪಡೆದ ಆರೋಪದ ಮೇಲೆ ವಿಜಯ್ ಶಂಕರ್ ಅವರನ್ನು ಎಸ್ ಐಟಿ ಬಂಧಿಸಿದೆ.
ಕಳೆದ ವಾರ ಉಪವಿಭಾಗಾಧಿಕಾರಿ ನಾಗರಾಜ್ ಹಾಗೂ ಗ್ರಾಮ ಲೆಕ್ಕಿಗ ಮಂಜುನಾಥ್ ಅವರನ್ನು ಎಸ್ಐಟಿ ಪೊಲೀಸರು ಬಂಧಿಸಿದ್ದರು. ಈ ಇಬ್ಬರು ಆರೋಪಿಗಳು ನೀಡಿದ ಮಾಹಿತಿ ಆಧಾರದ ಮೇಲೆ ಈಗ ಜಿಲ್ಲಾಧಿಕಾರಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ‌.
SCROLL FOR NEXT