ರಾಜ್ಯ

ವಿದ್ಯಾರ್ಥಿಗಳ ಮೊಬೈಲ್ ಬಳಕೆ ನಿಲ್ಲಿಸಲು ಕಾಲೇಜಿಗೆ ಹೋಗಿ ಮೊಬೈಲ್ ವಶಪಡಿಸಿಕೊಂಡ ದ.ಕ. ಪೊಲೀಸರು!

Sumana Upadhyaya
ಮಂಗಳೂರು: ವಿದ್ಯಾರ್ಥಿಗಳ ಮೊಬೈಲ್ ಫೋನನ್ನು ಪೊಲೀಸರು ವಶಪಡಿಸಿಕೊಳ್ಳುತ್ತಿದ್ದಾರೆ ಎಂಬ ವರದಿಗಳು ಮಂಗಳೂರು ಸಮೀಪ ಉಪ್ಪಿನಂಗಡಿ ನಿವಾಸಿಗಳಲ್ಲಿ ಆತಂಕವನ್ನುಂಟುಮಾಡಿತು. ಪೊಲೀಸರ ಈ ಕ್ರಮದಿಂದ ವಿದ್ಯಾರ್ಥಿಗಳ ಮೇಲೆ ದುಷ್ಪರಿಣಾಮ ಉಂಟಾಗುವುದೇ ಹೆಚ್ಚು ಎಂದು ವಿದ್ಯಾರ್ಥಿ ಹಕ್ಕು ಕಾರ್ಯಕರ್ತರು ಸೇರಿದಂತೆ ಸಾಮಾನ್ಯ ಜನರ ಅಭಿಮತವಾಗಿದೆ.
ಕಾಲೇಜುಗಳಿಗೆ ಪೊಲೀಸರು ಗನ್, ಪಿಸ್ತೂಲ್ ಹಿಡಿದುಕೊಂಡು ಹೋಗಿ ಅಲ್ಲಿ ಉಪನ್ಯಾಸಕರು ವಿದ್ಯಾರ್ಥಿಗಳ ಬ್ಯಾಗುಗಳನ್ನು ಶೋಧ ಮಾಡುತ್ತಿರುವ ಫೋಟೋಗಳು ಸ್ಥಳೀಯ ಪತ್ರಿಕೆಗಳಲ್ಲಿ ಮತ್ತು ವೆಬ್ ಸೈಟ್ ಗಳಲ್ಲಿ ಪ್ರಕಟವಾಗಿದೆ.
ಪೊಲೀಸರು ಉಪ್ಪಿನಂಗಡಿಯ ಪ್ರಥಮ ದರ್ಜೆ ಕಾಲೇಜು ಮತ್ತು ಸರ್ಕಾರಿ ಪಿಯುಸಿ ಕಾಲೇಜಿಗೆ ಹೋಗಿ ಕಾಲೇಜಿಗೆ ಮೊಬೈಲ್ ಫೋನ್ ತರುವ ವಿದ್ಯಾರ್ಥಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. 
ಪೊಲೀಸರ ದಾಳಿ ವೇಳೆ ಸುಮಾರು 12 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದ್ದು ಅವುಗಳು ಬೇಕೆಂದರೆ ವಿದ್ಯಾರ್ಥಿಗಳು ಪೋಷಕರ ಜೊತೆ ಪೊಲೀಸ್ ಸ್ಟೇಷನ್ ಗೆ ಹೋಗಬೇಕು ಎಂದು ಸೂಚಿಸಲಾಗಿದೆ.
ಆದರೆ ಕಾಲೇಜುಗಳಿಗೆ ಹೋಗಿ ಪೊಲೀಸರು ವಿದ್ಯಾರ್ಥಿಗಳ ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ ಎಂಬ ಆರೋಪವನ್ನು ದಕ್ಷಿಣ ಕನ್ನಡ ಪೊಲೀಸ್ ಮುಖ್ಯಸ್ಥ ಬಿ ಎಂ ಲಕ್ಷ್ಮಿ ಪ್ರಸಾದ್ ನಿರಾಕರಿಸಿದ್ದಾರೆ. ಕಾಲೇಜುಗಳ ಹತ್ತಿರ ಅಂಗಡಿಗಳಿಂದ ದಾಖಲೆಗಳಿಲ್ಲದ ಮೊಬೈಲನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಹೇಳಿದರು.
ವಿದ್ಯಾರ್ಥಿಗಳು ಮೊಬೈಲ್ ಬಳಸದಂತೆ ಅವರ ಪೋಷಕರು ಮಕ್ಕಳಿಗೆ ಅರಿವು ಮೂಡಿಸಬೇಕೆ ಹೊರತು ಈ ವಿಷಯದಲ್ಲಿ ಮಕ್ಕಳ ಮೇಲೆ ಆರೋಪ ಹೊರಿಸುವುದು, ಅವರನ್ನು ಶಿಕ್ಷಿಸುವುದು ಸರಿಯಲ್ಲ ಎನ್ನುತ್ತಾರೆ ತಜ್ಞರು. 
SCROLL FOR NEXT