ರಾಜ್ಯ

ರಾಯಚೂರು: ವಿದ್ಯಾರ್ಥಿನಿ ಸಾವು ಪ್ರಕರಣ, ಸಿಐಡಿಯಿಂದ ಚಾರ್ಜ್ ಶೀಟ್ ಸಲ್ಲಿಕೆ

Raghavendra Adiga
ರಾಯಚೂರು: ರಾಜ್ಯಾದ್ಯಂತ ಸದ್ದು ಮಾಡಿದ್ದ ರಾಯಚೂರು ಇಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರ್ ಸಾವು ಪ್ರಕರಣದ ಕುರಿತಂತೆ ಸಿಐಡಿ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
ಪ್ರಕರಣದಲ್ಲಿ ಪ್ರಮುಖ ಆರೋಪಿ ಸುದರ್ಶನ್ ಯಾದವ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿರುವ ಸಿಐಡಿ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದು ಸುದರ್ಶನ್ ಯಾದವ್ ಆಕೆಗೆ ಆತ್ಮಹತ್ಯೆ ಮಾಡಿಕೊಳ್ಲಲು ಚೋದನೆ ನೀಡಿದ್ದಾನೆ ಎಂದು ಹೇಳಿದೆ.
ಸಿಐಡಿ ಪೋಲೀಸರು ಸುಮಾರು ಒಂದು ಸಾವಿರ ಪುಟಗಳ ದೋಷಾರೋಪಣೆ ಪಟ್ಟಿಯನ್ನು ರಾಯಚೂರಿನ 3ನೇ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ್ದಾರೆ.
ಯುವತಿ ಹಾಗೂ ಸುದರ್ಶನ್ ಕಳೆದ ಐದು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ ಆತ್ಮಹತ್ಯೆಗೆ ಮುನ್ನ ಕೆಲವು ತಿಂಗಳಿನಿಂದ ಅವರ ನಡುವೆ ಸಂಬಂಧ ಕಡಿದು ಹೋಗಿತ್ತು.   
ಏ.13ರಂದು ವಿದ್ಯಾರ್ಥಿನಿ ಮಧು ಕಾಲೇಜಿಗೆ ತೆರಳುವಾಗ ಆರೋಪಿ ಸುದರ್ಶನ್ ಮಧುವನ್ನು ಅಡ್ಡಗಟ್ಟಿ ಜಗಳವಾಡಿದ್ದ. ಇದಕ್ಕೂ ಹಿಂದೆಯೂ ಆತ ಅನೇಕ ಬಾರಿ ಆಕೆಗೆ "ತನ್ನನ್ನೇ ಪ್ರೀತಿಸಬೇಕೆಂದು" ಕಿರುಕುಳ ನಿಡುತ್ತಿದ್ದ. ಅದರಿಂದ ಬೇಸತ್ತ ಮಧು ಕಾಲೇಜು ಬಿಟ್ಟು ನಿರ್ಜನ ಪ್ರದೇಶಕ್ಕೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ದೋಷಾರೋಪಣೆ ಪಟ್ಟಿಯಲ್ಲಿ ದಾಖಲಿಸಲಾಗಿದೆ.
ದೋಷಾರೋಪಣೆ ಪಟ್ಟಿಯೊಂದಿಗೆ ಪೋಲೀಸರು 60 ಸಾಕ್ಷಿಗಳು, 45 ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಘಟನೆ ಹಿನ್ನೆಲೆ 
ರಾಯಚೂರು ನವೋದಯ ಇಂಜಿನಿಯರಿಂಗ್ ಕಾಲೇಜಿನ 5ನೇ ಸೆಮಿಸ್ಟರ್ ವಿದ್ಯಾರ್ಥಿನಿ ಮಧು ಪತ್ತಾರ್ ಪ್ರಿಲ್ 13ಕ್ಕೆ ಮನೆ ಬಿಟ್ಟು ಪರೀಕ್ಷೆಗಾಗಿ ತೆರದವಳು ನಾಪತ್ತೆಯಾಗಿದ್ದಳು. ಅದಾಗಿ ಮೂರು ದಿನಗಳ ನಂತರ ಏಪ್ರಿಲ್ 16ರಂದು ಕಾಲೇಜಿನಿಂದ ನಾಲ್ಕು ಕಿಮೀ ದೂರದ ನಿರ್ಜನ ಪ್ರದೇಶದಲ್ಲಿ ಆಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪ್ರಕರಣದಲ್ಲಿ ಮುಖ್ಯ ಆರೋಪಿ ಸುದರ್ಶನ್ ಯಾದವ್ ನನ್ನು ಪೋಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ ಹೆಚ್ಚಿನ ವಿವರಗಳು ಲಭ್ಯವಾಗಿದೆ. ಘಟನೆ ಕುರಿತಂತೆ ರಾಜ್ಯಾದ್ಯಂತ ವ್ಯಾಪಕ ಚರ್ಚೆ, ಪ್ರತಿಭಟನೆಗಳು ನಡೆದ ಕಾರಣ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿತ್ತು.
SCROLL FOR NEXT