ರಾಜ್ಯ

ಕುವೈತ್ ನಲ್ಲಿ ಉದ್ಯೋಗ ವಂಚನೆಗೊಳಗಾದ 19 ಯುವಕರು ಮರಳಿ ಮಂಗಳೂರಿಗೆ

Sumana Upadhyaya

ಮಂಗಳೂರು: ಕುವೈತ್‌ನಲ್ಲಿ ಉದ್ಯೋಗ ವಂಚನೆಗೆ ಒಳಗಾಗಿ ತೊಂದರೆಗೆ ಸಿಲುಕಿದ್ದ ಭಾರತೀಯ ಸಂತ್ರಸ್ತರ ಪೈಕಿ ಕರಾವಳಿ ಮೂಲದ 19 ಮಂದಿ ಯುವಕರು ಶುಕ್ರವಾರ ಬೆಳಗ್ಗೆ ಮರಳಿ ತವರು ಸೇರಿದ್ದಾರೆ.

ನಷೂದ್ (ಮಂಜೇಶ್ವರ), ವರುಣ್ (ಆಕಾಶ್ ಭವನ), ಕಲಂದರ್ ಶಫೀಕ್ (ಮೂಡುಬಿದಿರೆ), ನಷೂದ್ (ಕೊಪ್ಪ), ರಫೀಕ್ (ಕೊಪ್ಪ), ಯಕೂಬ್ ಮುಲ್ಲಾ ( ಶಿರ್ಸಿ), ಪಾರ್ಲ್ಟ್ರಿಕ್ ಫೆರ್ನಾಂಡಿಸ್ (ಭಟ್ಕಳ), ಜಗದೀಶ್, ಆಶೀಕ್ (ಉಡುಪಿ), ಪಾರ್ಥಿಕ್ (ಉಡುಪಿ), ಮಹಮ್ಮದ್ ಹಸನ್ (ಕೊಲ್ನಾಡು), ಮಹಮ್ಮದ್ ಇಸ್ಮಾಯಿಲ್ (ಕೊಲ್ನಾಡು), ಅಬ್ದುಲ್ ಮಸೀದ್ (ಕಾರ್ಕಳ), ಮಹಮ್ಮದ್ ಸುಹೇಲ್ (ಉಳ್ಳಾಲ), ನೌಫಾಲ್ ಹುಸೈನ್ (ಉಳ್ಳಾಲ), ಮಹಮ್ಮದ್ ಶಕೀರ್ (ಉಳ್ಳಾಲ), ಅಬ್ದುಲ್ ಲತೀಫ್ (ತುಂಬೆ) ಫಯಾಝ್ (ಕುತ್ತಾರ್), ಅಬುಬಕ್ಕರ್ ಸಿದ್ದೀಕ್ (ಬಜಾಲ್) ತವರಿಗೆ ಬಂದಿಳಿದ ಕರಾವಳಿ ಮೂಲದ ಸಂತ್ರಸ್ತ ಯುವಕರು.


ಈ ಯುವಕರು ಮಂಗಳೂರಿನ ಮಾಣಿಕ್ಯ ಟ್ರಾವೆಲ್ ಏಜೆನ್ಸಿಯ ಮೂಲಕ ಕುವೈತ್ ಗೆ ತೆರಳಿದ್ದರು. ಕುವೈಟ್ ನಲ್ಲಿ ಈ ಯುವಕರಿಗೆ ಸರಿಯಾದ ಉದ್ಯೋಗ ಲಭಿಸಿರಲಿಲ್ಲ. ಕೆಲವರನ್ನು ಕೆಲಸಕ್ಕೆ ಸೇರಿಸಿಕೊಂಡರೂ ಅವರಿಗೆ ಐದಾರು ತಿಂಗಳಿಂದ ವೇತನ ಲಭಿಸಿರಲಿಲ್ಲ. ಯುವಕರು ಊಟಕ್ಕೂ ಪರದಾಡುವಂತಹ ಸ್ಥಿತಿ ಎದುರಾಗಿತ್ತು . ಇಂತಹ ಸನ್ನಿವೇಶದಲ್ಲಿ ಯುವಕರು ತಮ್ಮ ಸಂಕಷ್ಟಗಳನ್ನು ಹೇಳಿಕೊಂಡು ವಿಡಿಯೋ ಮಾಡಿ ಫೇಸ್ ಬುಕ್ ನಲ್ಲಿ ಪ್ರಕಟಿಸಿದ್ದರು. 

ಈ ಘಟನೆಯ ಬಳಿಕ ಅಲ್ಲಿನ ಸರಕಾರಕ್ಕೆ ಯುವಕರ ಸ್ಥಿತಿಗತಿಯ ಬಗ್ಗೆ ದೂರು ನೀಡಿ, ಯುವಕರನ್ನು ಮರಳಿ ತಾಯ್ನಾಡಿಗೆ ಕಳುಹಿಸುವಂತೆ ರಾಯಭಾರಿ ಕಚೇರಿಗೆ ಮನವಿ ಮಾಡಲಾಗಿತ್ತು. ಹಾಗೂ ಭಾರತೀಯ ವಿದೇಶಾಂಗ ಇಲಾಖೆಗೂ ಮನವಿ ಮಾಡಲಾಗಿತ್ತು.
ಸರಕಾರಿ ನೆಲೆಯ ಪ್ರಯತ್ನ ಕೈಗೂಡದ ಹಿನ್ನೆಲೆಯಲ್ಲಿ ಮಂಗಳೂರು ಶಾಸಕ ವೇದವ್ಯಾಸ ಕಾಮತ್ ಅವರು ಕುವೈತ್ ನಲ್ಲಿರುವ ತನ್ನ ಸ್ನೇಹಿತರನ್ನು ಸಂಪರ್ಕಿಸಿ ಈ 19 ಯುವಕರು ಮರಳಿ ಬರಲು ಬೇಕಾದ ಪ್ರಯಾಣ ವೆಚ್ಚವನ್ನು ಭರಿಸುವ ವ್ಯವಸ್ಥೆ ಮಾಡಿದ ಹಿನ್ನೆಲೆಯಲ್ಲಿ ಈ ಯುವಕರು ಮಂಗಳೂರು ತಲುಪಿದ್ದಾರೆ.

ಈ 19 ಮಂದಿಗೆ ಕುವೈತ್‌ನಿಂದ ಮುಂಬೈಗೆ ವಿಮಾನ ಟಿಕೆಟ್‌ ಮತ್ತು ಅಲ್ಲಿಂದ ಮಂಗಳೂರಿಗೆ ಬಸ್‌ ಟಿಕೆಟ್‌ ವ್ಯವಸ್ಥೆಯನ್ನು ಶಾಸಕ ಡಿ.ವೇದವ್ಯಾಸ ಕಾಮತ್‌ ವ್ಯವಸ್ಥೆ ಮಾಡಿದ್ದರು.

ಇನ್‌ಸ್ಟಿಟ್ಯೂಷನ್‌ ಆಫ್‌ ಎಂಜಿನಿಯರ್ಸ್‌ನ ಕುವೈತ್‌ ಶಾಖೆಯ ಸದಸ್ಯ ಮಂಜೇಶ್ವರ ಮೋಹನದಾಸ್‌ ಕಾಮತ್‌, ಅನಿವಾಸಿ ಭಾರತೀಯರಾದ ರಾಜ್‌ ಭಂಡಾರಿ, ಮಾಧವ ನಾಯಕ್, ವಿಜಯ್‌ ಫರ್ನಾಂಡಿಸ್‌ ಕುವೈತ್‌ ವಿಮಾನ ನಿಲ್ದಾಣದಲ್ಲಿ ಈ ಕಾರ್ಮಿಕರನ್ನು ಬೀಳ್ಕೊಟ್ಟಿದ್ದರು. ಸದ್ಯ 19 ಮಂದಿ ಯುವಕರು ಮರಳಿ ಮಂಗಳೂರು ಸೇರಿದ್ದಾರೆ. ಇಂದು ಬೆಳಿಗ್ಗೆ ಮಂಗಳೂರಿನಲ್ಲಿ ಬಂದಿಳಿದ ಈ ಯುವಕರನ್ನು ಜಿಲ್ಲಾ ಬಿಜೆಪಿ ಉಪಾಧ್ಯಾಕ್ಷ ರವಿಶಂಕರ್ ಮಿಜಾರ್ ಸ್ವಾಗತಿಸಿದರು.
SCROLL FOR NEXT